ರಾಜಕೀಯರಾಜ್ಯ

ಸಿಎಂ ಬೊಮ್ಮಾಯಿ ಹೆಲಿಕಾಪ್ಟರ್ ಅರೆಶಿರೂರು ಬಳಿ ಟೇಕಾಫ್ ಆಗುವ ವೇಳೆ ಹೆಲಿಪ್ಯಾಡ್‌ನಲ್ಲಿ ಬೆಂಕಿ, ಸಿಎಂ ಅಪಾಯದಿಂದ ಪಾರು

CM Bommai helicopter caught fire at the while taking off near Areshirur helipad, CM escape from danger

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರಿದ್ದ ಹೆಲಿಕಾಪ್ಟರ್ ಅರೆಶಿರೂರು ಹೆಲಿಪ್ಯಾಡ್ ಬಳಿ ಟೇಕಾಫ್ ಆಗುವ ವೇಳೆ ಹೆಲಿಪ್ಯಾಡ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಸಮಯ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಚುನಾವಣೆ ಘೋಷಣೆಯಾದ ನಂತರ ಮುಖ್ಯಮಂತ್ರಿ ಹಲವು ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನಲ್ಲಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ (Kollur Mookambika Temple) ಪತ್ನಿಯೊಂದಿಗೆ ಆಗಮಿಸಿದ್ದ ಅವರು ಪ್ರಾಂಗಣದ ಗರುಡಗಂಬಕ್ಕೆ ಪೂಜೆ ಸಲ್ಲಿಸಿದರು. ದೇಗುಲದಲ್ಲಿಯೂ ವಿಶೇಷ ಪೂಜೆ ಸಲ್ಲಿಸಿ, ಮೂಕಾಂಬಿಕೆಗೆ ನಮಸ್ಕರಿಸಿದರು. ದೇಗುಲದಲ್ಲಿ ‘ಕಾಂತಾರ’ ಖ್ಯಾತಿಯ ನಟ ರಿಷಬ್ ಶೆಟ್ಟಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿಯಾದರು. ಈ ವೇಳೆ ಅವರು ಬೊಮ್ಮಾಯಿ ಅವರ ಕಾಲುಮುಟ್ಟಿ ನಮಸ್ಕರಿಸಿದ್ದು ಎಲ್ಲರ ಗಮನ ಸೆಳೆಯಿತು. ಮುಖ್ಯಮಂತ್ರಿಯ ಜೊತೆಗೆ ರಿಷಬ್ ಮತ್ತೆ ಕಾಣಿಸಿಕೊಂಡಿರುವುದು ಅವರು ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಬಹುದು ಎಂಬ ಮಾತುಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಮುಖ್ಯಮಂತ್ರಿ ಪ್ರವಾಸದ ವೇಳೆ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಪ್ರಮೋದ್ ಮಧ್ವರಾಜ್ ಜೊತೆಗಿದ್ದರು. ಜಿಲ್ಲೆಯ ಬಿಜೆಪಿ ಶಾಸಕರು ಭೇಟಿ ತಪ್ಪಿಸಿಕೊಂಡಿರುವುದು ಹಲವು ಲೆಕ್ಕಾಚಾರಗಳನ್ನು ಹುಟ್ಟುಹಾಕಿದೆ. ಶಾಸಕರಾದ ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ. ಕಾರ್ಕಳದಿಂದ ಆಯ್ಕೆಯಾಗಿದ್ದ ಸಚಿವ ಸುನಿಲ್ ಕುಮಾರ್ ಅವರಿಗೆ ಮತ್ತೆ ಟಿಕೆಟ್ ಸಿಕ್ಕಿದೆ. ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅವರೂ ಸಿಎಂ ಭೇಟಿಯಿಂದ ದೂರ ಉಳಿದರು.

ಯಶಪಾಲ್‌ಗೆ ಶ್ರೀರಾಮಸೇನೆ ಬೆಂಬಲ
ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಎ.ಸುವರ್ಣ ಅವರನ್ನು ಕಾರ್ಯಕರ್ತರು ಬುಧವಾರ (ಏ 12) ಸಡಗರದಿಂದ ಪಕ್ಷದ ಕಚೇರಿಗೆ ಸ್ವಾಗತಿಸಿದರು. ಅಭ್ಯರ್ಥಿಯ ಕೈಗೆ ಕಂಕಣ ಕಟ್ಟಿ ಗೆಲುವು ಆಶಿಸಿದರು.

ಬಿಜೆಪಿ ವಿರುದ್ಧ ಕಾರ್ಕಳದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವ ಶ್ರೀರಾಮಸೇನೆಯು ಉಡುಪಿ ಕ್ಷೇತ್ರದಲ್ಲಿ ಸ್ಪರ್ಧೆಯಿಂದ ದೂರ ಉಳಿಯುವುದಾಗಿ ಘೋಷಿಸಿದೆ. ಯಶಪಾಲ್ ಸುವರ್ಣ ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ. ಸುವರ್ಣ ಅವರಿಗೆ ನಮ್ಮ ಬೆಂಬಲವಿದೆ ಎಂದು ಶ್ರೀರಾಮಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಜಯರಾಮ್ ಅಂಬೆಕಲ್ಲು ಹೇಳಿದ್ದಾರೆ.

ಇದನ್ನೂ ಓದಿ...

Back to top button
>