ಬೆಂಗಳೂರು: ಜೆಡಿಎಸ್ ನಲ್ಲಿ (JDS) ಎಲ್ಲವೂ ಸರಿ ಇಲ್ಲ, ಹಾಸನದ ಬಳಿಕ ಮತ್ತಷ್ಟು ವಿಚಾರಗಳಲ್ಲಿ ಗೊಂದಲಗಳು ಉಂಟಾಗುತ್ತಿವೆ ಎಂಬುದು ಮತ್ತೊಮ್ಮೆ ಎದ್ದು ಕಾಣುತ್ತಿದೆ. ಇದಕ್ಕೆ ಕಾರಣ ವೈಎಸ್ ವಿ ದತ್ತಾ (YSV Dutta) ಅವರು ಕಾಂಗ್ರೆಸ್ (Congress) ತೊರೆದು ಮತ್ತೆ ತೆನೆ ಹೊತ್ತ ಗೂಡಿಗೆ ವಾಪಸ್ ಆಗಿರೋದು.
ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತಾ ಅವರು ಕಡೂರಿನಿಂದ (Kadur) ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟಿಕೆಟ್ ನೀಡರಲಿಲ್ಲ. ಇದರಿಂದ ಬೇಸತ್ತ ಅವರು ತಮ್ಮ ತವರು ಪಕ್ಷವಾದ ಜೆಡಿಎಸ್ ಗೆ ನಿನ್ನೆ (ಏ.13) ವಾಪಸ್ ಆಗಿದ್ದಾರೆ.
ವೈಎಸ್ ವಿ ದತ್ತಾ ಅವರು ಜೆಡಿಎಸ್ ಗೆ ವಾಪಸ್ ಆಗಿದ್ದಾರೆ ಅನ್ನೋದಕ್ಕಿಂತ ಮಾಜಿ ಸಚಿವ ಹೆಚ್ ಡಿ ರೇವಣ್ಣ (HD Revanna) ಹಾಗೂ ಅವರ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಕಡೂರಿನಲ್ಲಿರುವ ದತ್ತಾ ಅವರ ಮನೆಗೆ ಖುದ್ದು ಭೇಟಿ ನೀಡಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಇವರೇ ನಮ್ಮ ಅಭ್ಯರ್ಥಿಯಾಗಿದ್ದು, ಏಪ್ರಿಲ್ 18 ರಂದು ನಾಮಪತ್ರ ಸಲ್ಲಿಸುತ್ತಾರೆ ಅಂತ ಘೋಷಣೆಯನ್ನೂ ಮಾಡಿದ್ದಾರೆ.
ಆದರೆ ಅಚ್ಚರಿ ಎಂದರೆ ಈ ಎಲ್ಲಾ ಬೆಳವಣಿಗೆಗಳು ಮಾಜಿ ಸಿಎಂ, ಜೆಡಿಎಸ್ ನ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಗೊತ್ತಿಲ್ವಂತೆ ಎಂಬುದು. ಈ ಬಗ್ಗೆ ಕಲ್ಯಾಣ ಕರ್ನಾಟಕದಲ್ಲಿ ಪ್ರತಿಕ್ರಿಯಿಸಿರುವ ಹೆಚ್ ಡಿಕೆ, ಈ ವಿಚಾರ ನನಗೆ ಗೊತ್ತಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ, ದತ್ತಾ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ದೊಡ್ಡವರು, ಅವರಷ್ಟು ದೊಡ್ಡ ವ್ಯಕ್ತಿ ನಾನಲ್ಲ. ದತ್ತಾ ಅವರ ಬಗ್ಗೆ ಹೆಚ್ ಡಿ ದೇವೇಗೌಡರು ಹಾಗೂ ಹೆಚ್ ಡಿ ರೇವಣ್ಣ ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದಾರೆ.
ಹೀಗಾಗಿ ದತ್ತಾ ಅವರು ಮತ್ತೆ ಜೆಡಿಎಸ್ ಸೇರಿರುವುದಕ್ಕೆ ಹೆಚ್ಡಿಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದಂತಾಗಿದೆ. ಪಕ್ಷದಲ್ಲಿ ಬಹುತೇಕ ನಿರ್ಧಾರಗಳನ್ನು ಕುಮಾರಸ್ವಾಮಿ ಅವರೇ ಕೈಗೊಳ್ಳುತ್ತಾರೆ. ಹೀಗಾಗಿ ದತ್ತಾ ಅವರು ಹೆಚ್ಡಿಕೆ ಜೊತೆಗೆ ಹೇಗೆ ಹೊಂದಾಣಿ ಮಾಡಿಕೊಂಡು ಪಕ್ಷದಲ್ಲಿ ಮುಂದೆ ಸಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಕಡೂರು ಕ್ಷೇತ್ರದಲ್ಲಿ ಈಗಾಗಲೇ ಧನಂಜಯ್ ಜೆಡಿಎಸ್ ಅಭ್ಯರ್ಥಿ ಅಂತ ಹೆಚ್ ಡಿಕೆ ಘೋಷಣೆ ಮಾಡಿದ್ದಾರೆ. ಆದರೆ ರೇವಣ್ಣ ಏಕಾಏಕಿ ದತ್ತಾ ಅವರನ್ನು ಪಕ್ಷಕ್ಕೆ ಸೆಳೆದು ಇವರಿಗೆ ಟಿಕೆಟ್ ನೀಡ್ತೇವೆ ಎಂದಿದ್ದಾರೆ. ಹಾಸನದ ಬಳಿಕ ಇದೀಗ ಕಡೂರು ಟಿಕೆಟ್ ವಿಚಾರ ಹೆಚ್ಡಿಕೆ-ಹೆಚ್ಡಿಆರ್ ನಡುವೇ ದೊಡ್ಡ ಫೈಟ್ ನಡೆಯುವ ಸಾಧ್ಯತೆ ಇದೆ.
ಈಗಾಲೇ ಅಭ್ಯರ್ಥಿಯಾಗಿರುವ ಧನಂಜಯ್ ಕ್ಷೇತ್ರದಲ್ಲಿ ಸುತ್ತಾಡಿ ಮತದಾರರ ಒಲೈಕೆ ಕೆಲಸವನ್ನು ಆರಂಭಿಸಿದ್ದಾರೆ. ಇದೀಗ ದಿಢೀರ್ ಅಂತ ವೈಎಸ್ ದತ್ತಾ ಅವರಿಗೆ ಟಿಕೆಟ್ ಎಂದು ರೇವಣ್ಣ ಹೇಳಿರೋದು ಧನಂಜಯ್ ಅವರಿಗೆ ನಿರಾಸೆ ಮೂಡಿಸಿದಂತಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಹೆಚ್ ಡಿ ಕುಮಾರಸ್ವಾಮಿ ಅವರ ನಿರ್ಧಾರಕ್ಕೆ ಬದ್ಧ ಅಂತ ಹೇಳಿದ್ದು, ತಾವೇ ಕಡೂರು ಅಧಿಕೃತ ಅಭ್ಯರ್ಥಿ ಅಂತಲೂ ಹೇಳಿಕೊಂಡಿದ್ದಾರೆ.
ಇಂದು ಜೆಡಿಎಸ್ ಸಭೆ
ಇವತ್ತು ಬೆಂಗಳೂರಿನಲ್ಲಿ ಜೆಡಿಎಸ್ ಸಭೆ ಕರೆಯಲಾಗಿದೆ. ಕಡೂರು ವಿಧಾನಸಭಾ ಕ್ಷೇತ್ರದಲ್ಲಿನ ಟಿಕೆಟ್ ಯಾರಿಗೆ ಎಂಬುದು ನಿರ್ಧಾರ ಆಗುವ ಸಾಧ್ಯತೆ ಇದೆ. ಇದರ ಜೊತೆಗೆ ಇತರೆ ಕ್ಷೇತ್ರಗಳ ಬಗ್ಗೆಯೂ ಮಹತ್ವದ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.