ರಾಜಕೀಯರಾಜ್ಯ

ಕಾಂಗ್ರೆಸ್​ ಸೇರಿದ ಲಕ್ಷ್ಮಣ ಸವದಿ..

Lakshmana Savadi joins Congress..

ಬೆಂಗಳೂರು: ಅಥಣಿ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಇಂದು ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಲಕ್ಷ್ಮಣ ಸವದಿ ಅವರೊಂದಿಗೆ ಮಾಜಿ ಸಚಿವ ಶಶಿಕಾಂತ್ ಅಕ್ಕಪ್ಪ ನಾಯಕ್ ಹಾಗೂ ಮತ್ತಿತರರು ಕೂಡ ಬಿಜೆಪಿ ತೊರೆದು ಕೈ ಪಾಳಯ ಸೇರಿದರು.

ಇಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಬೆಂಗಳೂರಿನ ಮನೆಗೆ ತೆರಳಿದ ಲಕ್ಷ್ಮಣ್ ಸವದಿ ಅವರು ರಾಜೀನಾಮೆ ಪತ್ರವನ್ನು ನೀಡಿದರು. ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾದರು.

“ಬಿಜೆಪಿ ಎಂಎಲ್​ಸಿ, ಮಾಜಿ ಉಪ ಮುಖ್ಯಮಂತ್ರಿ ಮತ್ತು ಲಿಂಗಾಯತ ನಾಯಕರಲ್ಲಿ ಒಬ್ಬರಾದ ಲಕ್ಷ್ಮಣ ಸವದಿ ಅವರಿಗೆ ಕಾಂಗ್ರೆಸ್ ಕುಟುಂಬಕ್ಕೆ ಸ್ವಾಗತ” ಎಂದು ರಣದೀಪ್ ಸಿಂಗ್ ಸುರ್ಜೆವಾಲ ಟ್ವೀಟ್​ ಮಾಡಿದ್ದಾರೆ.

ಕಾಂಗ್ರೆಸ್​ ಸೇರ್ಪಡೆಯಾಗಿ ಬಳಿಕ ಮಾತನಾಡಿದ ಸವದಿ, “ಸ್ವಇಚ್ಛೆಯಿಂದ ಕಾಂಗ್ರೆಸ್​ ಪಕ್ಷಕ್ಕೆ ಸೇರಿದ್ದೇನೆ. ಬಿಜೆಪಿ ಹಾಗೂ ವಿಧಾನ ಪರಿಷತ್​ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಬಿಜೆಪಿ ಬಿಟ್ಟು ಹೋದವರನ್ನ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂತ ಅರುಣ್​ ಸಿಂಗ್ ಹೇಳಿದ್ದಾರೆ. ನನ್ನ ಹೆಣ ಕೂಡ ಬಿಜೆಪಿ ಕಚೇರಿ ಮುಂದೆ ಹೋಗಲ್ಲ. ನನ್ನ ಕ್ಷೇತ್ರದ ಜನ ನನ್ನ ಬೆಂಬಲಕ್ಕೆ ಇದ್ದಾರೆ. ಅಥಣಿಯಿಂದ ಕಾಂಗ್ರೆಸ್​ ಟಿಕೆಟ್​ ಪಡೆದು ಗೆದ್ದು ಶಾಸಕನಾಗುತ್ತೇನೆ” ಎಂದು ಹೇಳಿದರು.

ಅಥಣಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಏಪ್ರಿಲ್ 12 ರಂದು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ್ದರು. “ನಿಷ್ಠಾವಂತ ಕಾರ್ಯಕರ್ತರಿಗೆ ಗೌರವ ನೀಡದ ಪಕ್ಷದಲ್ಲಿ ಇದ್ದು ಯಾವ ಪ್ರಯೋಜನವೂ ಇಲ್ಲ. ನಾನು ಪಕ್ಷದ ಓರ್ವ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷವನ್ನು ತಾಯಿಯಂತೆ ಭಾವಿಸಿದ್ದೆ. ಆದರೆ ಪಕ್ಷ ನನ್ನನ್ನು ಗುರುತಿಸುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಬಲಿಗರೊಂದಿಗೆ ಚರ್ಚಿಸಿ ಬಿಜೆಪಿಗೆ ರಾಜೀನಾಮೆ ನೀಡುವ ತೀರ್ಮಾನ ಮಾಡಿದ್ದೇನೆ” ಎಂದು ತಿಳಿಸಿದ್ದರು.

ಇಂದು ಬೆಳಗ್ಗೆ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಲಕ್ಷ್ಮಣ ಸವದಿ ಸಮಾಲೋಚನೆ ನಡೆಸಿದ್ದರು.

ಸಮಾಲೋಚನೆ ಬಳಿಕ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ಮಾಜಿ ಉಪಮುಖ್ಯಮಂತ್ರಿ, ಬೆಳಗಾವಿಯ ಪ್ರಭಾವಿ ನಾಯಕ ಲಕ್ಷ್ಮಣ ಸವದಿ ಅವರು ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದು, ಅವರ ನಂತರ ಇನ್ನು ಅನೇಕ ನಾಯಕರು ನಮ್ಮ ಪಕ್ಷ ಸೇರುತ್ತಿದ್ದಾರೆ. ಲಕ್ಷ್ಮಣ್ ಸವದಿ ಹಿರಿಯ ನಾಯಕರು. ಸವದಿ ಅವರು ತಮಗೆ ಅವಮಾನ ಮಾಡಲಾಗಿದೆ (ಬಿಜೆಪಿ ಕಡೆಯಿಂದ) ಎಂದು ಭಾವಿಸಿದ್ದಾರೆ. ಅವರು ಯಾವುದೇ ಷರತ್ತು ಇಲ್ಲದೇ ಪಕ್ಷಕ್ಕೆ ಸೇರುತ್ತಿದ್ದು, ನಮ್ಮ ಕುಟುಂಬದ ಸದಸ್ಯರಾಗುತ್ತಿದ್ದಾರೆ. ನಾವು ಒಮ್ಮತದಿಂದ ಪಕ್ಷಕ್ಕೆ ಸ್ವಾಗತಿಸುತ್ತೇವೆ. ಎಂದು ಹೇಳಿದ್ದರು.

“ನನ್ನನ್ನು ಸರಿಯಾಗಿ ಟ್ರೀಟ್​ ಮಾಡಬೇಕು ಎಂಬ ಒಂದೇ ಷರತ್ತನ್ನು ಸವದಿ ನಮ್ಮ ಮುಂದಿಟ್ಟಿದ್ದಾರೆ. ಸವದಿ ಅವರಿಗೆ ಅಥಣಿ ಕ್ಷೇತ್ರದಿಂದ ಟಿಕೆಟ್ ನೀಡಲಾಗುವುದು. ಅವರು ಗೆಲ್ಲುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.

ಇದನ್ನೂ ಓದಿ...

Back to top button
>