ಶಿಗ್ಗಾಂವಿ: ಕರ್ನಾಟಕ ವಿಧಾನಸಭೆ ಚುನಾವಣಾ ಅಖಾಡ ರಂಗೇರಿದ್ದು, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಅದರಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು(ಏ.೧೫-ಶನಿವಾರ) ಶಿಗ್ಗಾಂವಿ-ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಶಿಗ್ಗಾಂವಿ ತಹಶೀಲ್ದಾರ್ ಕಚೇರಿಗೆ ಆಗಮಿಸಲಿರುವ ಸಿಎಂ ಬೊಮ್ಮಾಯಿ, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ. ಸಿಎಂ ನಾಮಪತ್ರ ಸಲ್ಲಿಕೆಯಿಂದಾಗಿ ಈ ಕ್ಷೇತ್ರದ ಚುನಾವಣಾ ಅಖಾಡ ಮತ್ತಷ್ಟು ರಂಗೇರಲಿರುವುದು ಖಚಿತ.
ಸತತ ಮೂರು ಬಾರಿ ಶಿಗ್ಗಾಂವಿ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿ ಸ್ಥಾನಕ್ಕೆ ಏರಿರುವ ಬಸವರಾಜ ಬೊಮ್ಮಾಯಿ, ಇದೀಗ 4ನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿರುವ ಸಿಎಂ ಬೊಮ್ಮಾಯಿ, ತಮಗೆ ಖಂಡಿತವಾಗಿಯೂ ಜನಾರ ಆಶೀರ್ವಾದ ದೊರೆಯಲಿದೆ ಎಂಬ ಭರವಸೆಯಲ್ಲಿದ್ದಾರೆ.
ಬಿಜೆಪಿ ಈ ಬಾರಿ ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲೇ ಚುನಾವಣೆಯನ್ನು ಎದುರಿಸುತ್ತಿದ್ದು, ಈ ಬಾರಿಯ ಚುನಾವಣೆ ಸ್ವತಃ ಮುಖ್ಯಮಂತ್ರಿ ಅವರಿಗೂ ವೈಯಕ್ತಿವಾಗಿ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದು, ತಮ್ಮ ನಾಯಕತ್ವವನ್ನು ಸಾಬೀತುಪಡಿಸುವ ಅನಿವಾರ್ಯತೆ ಬೊಮ್ಮಾಯಿ ಅವರಿಗೆ ಇದೆ.
ಈಗಾಗಲೇ ರಾಜ್ಯಾದ್ಯಂತ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸುತ್ತಿರುವ ಸಿಎಂ ಬೊಮ್ಮಾಯಿ, ತಮ್ಮ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಡುತ್ತಿದ್ದಾರೆ. ಪ್ರಮುಖವಾಗಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ನೀಡಿರುವ ಮೀಸಲಾತಿ, ಎಸ್‌ಟಿ/ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳದಂತಹ ವಿಚಾರಗಳನ್ನು ಸಿಎಂ ಬೊಮ್ಮಾಯಿ ತಮ್ಮ ಪ್ರಚಾರ ಭಾಷಣಗಳಲ್ಲಿ ಉಲ್ಲೇಖಿಸುತ್ತಿದ್ದಾರೆ.
ಹಾಗೆಯೇ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ನಿರಂತರವಾಗಿ ಟೀಕಾಪ್ರಹಾರ ಮಾಡುತ್ತಿರುವ ಸಿಎಂ ಬೊಮ್ಮಾಯಿ, ಒಂದು ವೇಳೆ ಮೀಸಲಾತಿ ಬದಲಾವಣೆಗೆ ಕಾಂಗ್ರೆಸ್ ಕೈ ಹಾಕಿದರೆ ರಾಜ್ಯದಲ್ಲಿ ಕ್ರಾಂತಿ ಸಂಭವಿಸಲಿದೆ ಎಂದು ಎಚ್ಚರಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಅಭಿವೃದ್ಧಿಗೆ ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಸಿಎಂ ಬೊಮ್ಮಾಯಿ ಆರೋಪಿಸುತ್ತಿದ್ದಾರೆ.
ಆದರೆ ಪಕ್ಷವನ್ನು ಗೆಲ್ಲಿಸುವ ಸಿಎಂ ಬೊಮ್ಮಾಯಿ ಅವರ ಹಾದಿ ಅಷ್ಟು ಸುಲಭವೂ ಅಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಪ್ರಮುಖವಾಗಿ ವಿರೋಧ ಪಕ್ಷಗಳು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡುತ್ತಿದ್ದು, ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಜೆಪಿಯನ್ನು ಕಟ್ಟಿಹಾಕುವ ರಣತಂತ್ರ ರೂಪಿಸಿವೆ.
ಈ ಸವಾಲುಗಳನ್ನು ಮೀರಿ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ಸಿಎಂ ಬೊಮ್ಮಾಯಿ ಅವರ ಮೇಲಿದ್ದು, ತಮ್ಮ ಕ್ಷೇತ್ರವನ್ನೂ ಒಳಗೊಂಡಂತೆ ಇಡೀ ರಾಜ್ಯದಲ್ಲಿ ಪ್ರಚಾರ ಮಾಡುವ ಹೊಣೆಗಾರಿಕೆಯನ್ನು ಸಿಎಂ ಸಮರ್ಥವಾಗಿ ನಿಭಾಯಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅವರ ನಾಮಪತ್ರ ಸಲ್ಲಿಕೆ ಮಹತ್ವ ಪಡೆದುಕೊಂಡಿದ್ದು, ಶಿಗ್ಗಾಂವಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಜೋರಾಗಿದೆ.