ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Assembly Elections 2023) ಚುನಾವಣಾ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಲು ಬೆಂಗಳೂರು ನಗರ ಮತ್ತು ವಿಧಾನಸಭೆ ಮಟ್ಟದ ವೀಕ್ಷಕರ ಪಟ್ಟಿಯನ್ನು (Observers List) ಕಾಂಗ್ರೆಸ್ (Congress) ಬಿಡುಗಡೆ ಮಾಡಿದೆ.
ಚುನಾವಣಾ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಲು ರಾಜ್ಯದಲ್ಲಿ ಒಟ್ಟು 61 ವೀಕ್ಷಕರನ್ನು ಕಾಂಗ್ರೆಸ್ ನೇಮಿಸಿದೆ. ಬೆಂಗಳೂರು ನಗರಕ್ಕೆ (Bangalore city) ಎಐಸಿಸಿ ವೀಕ್ಷಕರು (AICC Observers) ಮತ್ತು ಎಐಸಿಸಿ ವಿಧಾನಸಭೆ ಮಟ್ಟದ ವೀಕ್ಷಕರನ್ನು ನೇಮಕ ಮಾಡಬೇಕೆಂಬ ಪ್ರಸ್ತಾವನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅನುಮೋದಿಸಿದ್ದಾರೆ.
ವಿಧಾನಸಭಾ ಚುನಾವಣೆಯ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಲು, ಈ ಕೆಳಗಿನಂತೆ ಆಯ್ದ ವಿಧಾನಸಭಾ ವಿಭಾಗದಲ್ಲಿ ನಿಯೋಜಿಸಲಾಗಿದೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಬೆಂಗಳೂರು ನಗರಕ್ಕೆ ಐವರು ವೀಕ್ಷಕರು
61 ವೀಕ್ಷಕರ ಪಟ್ಟಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ನಗರಕ್ಕೆ ಐವರು ವೀಕ್ಷಕರನ್ನು ಪಕ್ಷ ನೇಮಿಸಿದೆ. ಬೆಂಗಳೂರು ನಗರದ ಕಾಂಗ್ರೆಸ್ ಪಕ್ಷದ ವೀಕ್ಷಕರಾಪಿ ಪಿಸಿಸಿ ಮಾಜಿ ಅಧ್ಯಕ್ಷ ಎನ್. ರಘುವೀರಾ ರೆಡ್ಡಿ, ಎಂಆರ್‌ಸಿಸಿ ಮಾಜಿ ಅಧ್ಯಕ್ಷ ಸಂಜಯ್ ನಿರುಪಮ್, ಸಂಸದ ಬೆನ್ನಿ ಬೆಹನನ್, ಸಂಸದ ಕಾರ್ತಿ ಚಿದಂಬರಂ ಹಾಗೂ ಸಂಸದೆ ಜೋತಿಮಣಿ ಅವರನ್ನು ನೇಮಕ ಮಾಡಲಾಗಿದೆ.
224 ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರಸ್ತುತ ಆಡಳಿತಾರೂಢ ಬಿಜೆಪಿ 119 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್ 75 ಹಾಗೂ ಜೆಡಿಎಸ್ 28 ಸ್ಥಾನಗಳನ್ನು ಹೊಂದಿದೆ. ಇದರಲ್ಲಿ ಕೆಲವರು ಕಾಂಗ್ರೆಸ್ ಮತ್ತು ಬಿಜೆಪಿಗೆ ಹಾರಿದ್ದರಾರೆ. ಟಿಕೆಟ್ ಸಿಗದೆ ರೆಬಲ್ ಆಗಿರೋರು ಬಿಜೆಯಿಂದಲೂ ಬೇರೆ ಪಕ್ಷಕ್ಕೆ ಜಂಪ್ ಆಗಿದ್ದಾರೆ.
ಅಥಣಿ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಿನ್ನೆ (ಏ.14, ಶುಕ್ರವಾರ) ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೆವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಲಕ್ಷ್ಮಣ ಸವದಿ ಅವರೊಂದಿಗೆ ಮಾಜಿ ಸಚಿವ ಶಶಿಕಾಂತ್ ಅಕ್ಕಪ್ಪ ನಾಯಕ್ ಹಾಗೂ ಮತ್ತಿತರರು ಕೂಡ ಬಿಜೆಪಿ ತೊರೆದು ಕೈ ಪಾಳಯ ಸೇರಿಕೊಂಡಿದ್ದಾರೆ.
ಇದಕ್ಕೂ ಮುನ್ನ ಅವರು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಬೆಂಗಳೂರಿನ ನಿವಾಸಕ್ಕೆ ತೆರಳಿದ ಲಕ್ಷ್ಮಣ್ ಸವದಿ ಪರಿಷತ್ ರಾಜೀನಾಮೆ ಪತ್ರವನ್ನು ನೀಡಿದರು.
ಬಿಜೆಪಿ ಎಂಎಲ್ಸಿ, ಮಾಜಿ ಉಪ ಮುಖ್ಯಮಂತ್ರಿ ಮತ್ತು ಲಿಂಗಾಯತ ಪ್ರಬಲ ನಾಯಕರಾಗಿರುವ ಲಕ್ಷ್ಮಣ್ ಸವದಿ ಅವರಿಗೆ ಕಾಂಗ್ರೆಸ್ ಕುಟುಂಬಕ್ಕೆ ಸ್ವಾಗತ ಎಂದು ರಂದೀಪ್ ಸುರ್ಜೆವಾಲ ಟ್ವೀಟ್ ಮಾಡಿದ್ದಾರೆ.
ಸ್ವಇಚ್ಛೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ಬಿಜೆಪಿ ಹಾಗೂ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಬಿಜೆಪಿ ಬಿಟ್ಟು ಹೋದವರನ್ನ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಅಂತ ಅರುಣ್ ಸಿಂಗ್ ಹೇಳಿದ್ದಾರೆ. ನನ್ನ ಹೆಣ ಕೂಡ ಬಿಜೆಪಿ ಕಚೇರಿ ಮುಂದೆ ಹೋಗಲ್ಲ. ನನ್ನ ಕ್ಷೇತ್ರದ ಜನ ನನ್ನ ಬೆಂಬಲಕ್ಕೆ ಇದ್ದಾರೆ. ಅಥಣಿಯಿಂದ ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದು ಶಾಸಕನಾಗುತ್ತೇನೆ ಎಂದು ಕಾಂಗ್ರೆಸ್ ಸೇರ್ಪಡೆ ಬಳಿಕ ಸವದಿ ಅವರು ಗುಡುಗಿದ್ದಾರೆ.
ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಅವರು ನಿನ್ನೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಸಮ್ಮುಖದಲ್ಲಿ ಜೆಡಿಎಸ್ ಸೇರಿದ್ದಾರೆ. ರಾಜ್ಯದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.