ರಾಜಕೀಯರಾಜ್ಯ

ಬಿಜೆಪಿ ಬಿಟ್ಟ ಬಿಎಸ್‌ವೈ ಕೆಜೆಪಿ ಬೆಳೆಸೋದಕ್ಕೆ ನೋಡಿದ್ರು…

BSY who left BJP saw the rise of KJP...

Karnataka Politics: ಲಿಂಗಾಯತ ಸಮುದಾಯದ ಬಿಎಸ್‌ ಯಡಿಯೂರಪ್ಪ ಪ್ರಭಾವಿಯಾಗಿ ಬೆಳೆದರು. ಬಿಜೆಪಿಯನ್ನು ಅಧಿಕಾರಕ್ಕೇರಿಸುವಲ್ಲಿ ಯಡಿಯೂರಪ್ಪ ಅವರ ತಂತ್ರಗಾರಿಕೆಯ ನಾಯಕತ್ವ ಮುಖ್ಯವಾದುದು. ಯಡಿಯೂರಪ್ಪ ಪಕ್ಷದಿಂದ ದೂರ ಸರಿದಾಗ ಬಿಜೆಪಿ ಬಲವೂ 40ಕ್ಕೆ (2013ರ ಚುನಾವಣೆ) ಕುಸಿದಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು. ಇತಿಹಾಸದ ಕಡೆಗೊಂದು ಇಣುಕುನೋಟ.

ಕರ್ನಾಟಕದ ರಾಜಕೀಯ ವ್ಯವಸ್ಥೆಯೇ ವಿಭಿನ್ನವಾದುದು. ಜಾತಿ ಆಧಾರಿತ ಲೆಕ್ಕಾಚಾರಗಳೇ ಇಲ್ಲಿ ಹೆಚ್ಚು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಇಡೀ ದೇಶವನ್ನು ಆವರಿಸಿದ್ದ ಪಕ್ಷ ಕಾಂಗ್ರೆಸ್‌ ಮಾತ್ರವೇ ಆಗಿತ್ತು. ಸಹಜವಾಗಿಯೇ ಕರ್ನಾಟಕದಲ್ಲೂ ಕಾಂಗ್ರೆಸ್‌ ಪ್ರಾಬಲ್ಯ. ಜನತಾ ಪಾರ್ಟಿ ಒಮ್ಮೆ ಪ್ರವರ್ಧಮಾನಕ್ಕೆ ಬಂದು ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ಪೂರ್ಣ ಅವಧಿ ಆಡಳಿತ ನಡೆಸಿತು. ಬಳಿಕ ಜನತಾ ಪಾರ್ಟಿ ಕ್ಷೀಣಿಸಿತು. ಇದರ ನಡುವೆ ಬಿಜೆಪಿ, ಜನತಾದಳ ಬೆಳೆದ ಪರಿಯನ್ನು ವಿಶೇಷವಾದುದು.

ಲಿಂಗಾಯತ ಸಮುದಾಯದ ಬಿಎಸ್‌ ಯಡಿಯೂರಪ್ಪ ಪ್ರಭಾವಿಯಾಗಿ ಬೆಳೆದರು. ಬಿಜೆಪಿಯನ್ನು ಅಧಿಕಾರಕ್ಕೇರಿಸುವಲ್ಲಿ ಯಡಿಯೂರಪ್ಪ ಅವರ ತಂತ್ರಗಾರಿಕೆಯ ನಾಯಕತ್ವ ಮುಖ್ಯವಾದುದು. ಯಡಿಯೂರಪ್ಪ ಪಕ್ಷದಿಂದ ದೂರ ಸರಿದಾಗ ಬಿಜೆಪಿ ಬಲವೂ 40ಕ್ಕೆ (2013ರ ಚುನಾವಣೆ) ಕುಸಿದಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.

ರಾಜ್ಯ ರಾಜಕೀಯದಲ್ಲಿ 1990ರ ಕಾಲಘಟ್ಟವನ್ನು ಒಮ್ಮೆ ತಿರುಗಿ ನೋಡಿದರೆ ಆಗ ನಡೆದ ರಾಜಕೀಯ ವಿದ್ಯಮಾನಗಳು ಕಾಂಗ್ರೆಸ್‌ ಪ್ರಾಬಲ್ಯಕ್ಕೆ ಹೊಡೆತ ನೀಡಿತು. ಒಂದು ರೀತಿಯಲ್ಲಿ ಕಾಂಗ್ರೆಸ್‌ ನಾಯಕರು ತಮ್ಮ ತಲೆ ಮೇಲೆ ತಾವೇ ಕಲ್ಲು ಹೊತ್ತುಹಾಕಿಕೊಂಡರು ಎಂಬಂತಹ ಸನ್ನಿವೇಶ ಅದಾಗಿತ್ತು. ಆಗ ಲಿಂಗಾಯತರ ಪ್ರೀತಿಯನ್ನು ಬಿಜೆಪಿ ಗಳಿಸಿಕೊಂಡರೆ, ಒಕ್ಕಲಿಗರು ಮತ್ತು ಇತರೆ ಸಮುದಾಯವರ ಪ್ರೀತಿಯನ್ನು ಜನತಾದಳ ಗಳಿಸಲಾರಂಭಿಸಿತು. 1994ರಿಂದ 1999 ಅವಧಿಗೆ ಪೂರ್ಣ ಅವಧಿ ಆಡಳಿತ ಜನತಾದಳ (115 ಸ್ಥಾನ) ನೀಡಿತ್ತು. ಆಗ ವಿಪಕ್ಷ ಸ್ಥಾನದಲ್ಲಿದ್ದುದು ಬಿಜೆಪಿ (40 ಸ್ಥಾನ). ಕಾಂಗ್ರೆಸ್‌ (34 ಸ್ಥಾನ) ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.

ನಂತರದ ಚುನಾವಣೆ (1999-2004ರ ವಿಧಾನಸಭೆ) ಯಲ್ಲಿ ಕಾಂಗ್ರೆಸ್‌ 132 ಸ್ಥಾನ ಗೆದ್ದು ಅಧಿಕಾರ ಚುಕ್ಕಾಣಿ ಹಿಡಿಯಿತು. ಬಿಜೆಪಿ (44 ಸ್ಥಾನ) ವಿಪಕ್ಷವಾಗಿಯೇ ಉಳಿಯಿತು. ಜನತಾದಳ ಎರಡಾಗಿ ಜೆಡಿಎಸ್‌ (18 ಸ್ಥಾನ) ಮತ್ತು ಜೆಡಿಯು (10 ಸ್ಥಾನ) ಹುಟ್ಟುಕೊಂಡಿತು. ಅದಾಗಿ 2004ರ ಚುನಾವಣೆಯಲ್ಲಿ ಅತಂತ್ರ ಜನಾದೇಶ. ಬಿಜೆಪಿ ಅತಿ ಹೆಚ್ಚು ಸ್ಥಾನ (79) ಗೆದ್ದರೆ, ಕಾಂಗ್ರೆಸ್‌ (65) ಜೆಡಿಎಸ್‌ (58) ನಂತರದ ಸ್ಥಾನದಲ್ಲಿದ್ದವು. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ರಚನೆ ಆಯಿತು.

ರಾಜ್ಯದಲ್ಲಿ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡು ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ ನಾಯಕ ಬಿಎಸ್‌ ಯಡಿಯೂರಪ್ಪ ಅವರ ಪಾಲಿಗೆ 2008ರಿಂದ 2010ರ ತನಕ ಎಲ್ಲವೂ ಸುಸೂತ್ರವಾಗಿತ್ತು. ಬಳಿಕ ಅಕ್ರಮ ಗಣಿಗಾರಿಕೆ ವಿಚಾರ ಮುನ್ನೆಲೆಗೆ ಬಂತು. ಲೋಕಾಯುಕ್ತ ಕೇಸ್‌ ದಾಖಲಾಯಿತು. ಅನಿವಾರ್ಯವಾಗಿ ಬಿಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಕೇಂದ್ರ ನಾಯಕತ್ವದ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಬಿಎಸ್‌ವೈ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂಬ ಒತ್ತಡ ಹೆಚ್ಚಾಗಿತ್ತು. ಇದನ್ನು ಅರಿತ ಅವರು 2012 ನವೆಂಬರ್‌ 30ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರಬಂದರು. ಬಳಿಕ 2011ರ ಏಪ್ರಿಲ್‌ನಲ್ಲಿ ನೋಂದಣಿಯಾಗಿದ್ದ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ವನ್ನು ಬೆಳೆಸಲು ಮುಂದಾದರು.

ಬಿಎಸ್‌ವೈ ಅವರಿಗೊಂದು ಅಸಾಧ್ಯ ಇಚ್ಛಾ ಶಕ್ತಿ ಇದೆ. ಜತೆಗೆ ಲಿಂಗಾಯತ ಸಮುದಾಯ ತನ್ನೊಂದಿಗೆ ಎಂಬ ಅದಮ್ಯ ವಿಶ್ವಾಸ. ಹೀಗಾಗಿ ಬಿಜೆಪಿಗೆ ಒಂದು ಪಾಠ ಕಲಿಸಿಯೇ ಬಿಡುತ್ತೇನೆ ಎಂದು 2013ರ ಚುನಾವಣೆಗೆ ಕೆಜೆಪಿಯಿಂದಲೇ 204 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರು. ಬಿಜೆಪಿಗೆ ಪೈಪೋಟಿ ನೀಡುವುದು ಮತ್ತು ಗೆದ್ದು ತೋರಿಸುವುದು ಅವರ ಉದ್ದೇಶವಾಗಿತ್ತು.

ಆದರೆ, ಆಗಿದ್ದೇ ಬೇರೆ. 204 ಅಭ್ಯರ್ಥಿಗಳ ಪೈಕಿ ಗೆದ್ದವರು 6. ಅವರ ಪೈಕಿ ಯಡಿಯೂರಪ್ಪ ಒಬ್ಬರು. ಬಿಜೆಪಿಯೂ ಅಷ್ಟೆ ಹಿಂದಿನ ಚುನಾವಣೆಯಲ್ಲಿ 110 ಸ್ಥಾನ ಗೆದ್ದು ಬೀಗಿದ್ದ ಬಿಜೆಪಿ ಬಲ 40ಕ್ಕೆ ಇಳಿಯಿತು.

ಹಾಗಾದರೆ ಲಿಂಗಾಯತ ಪ್ರಾಬಲ್ಯದ 60ರ ಆಸುಪಾಸು ಕ್ಷೇತ್ರಗಳಲ್ಲಿ ಅವರ ಮತ ಯಾರಿಗೆ ಬಿತ್ತು? ಬಿಜೆಪಿಯಿಂದ ಬಿಎಸ್‌ವೈ ದೂರಾದರು. ಲಿಂಗಾಯತರೂ ದೂರಾದರು. ಆದರೆ ಲಿಂಗಾಯತ ಸಮುದಾಯದವರು ಬಿಎಸ್‌ವೈ ಬೆಳೆಸಲು ಹೊರಟ ಕೆಜೆಪಿ ಕಡೆಗೆ ವಾಲಲಿಲ್ಲ ಎಂಬುದು ಸ್ಪಷ್ಟ. ಬಿಜೆಪಿ ಹಿಂದುತ್ವದ ಅಡಿಪಾಯ ಹೊಂದಿರುವ ಪಕ್ಷ. ಕೆಜೆಪಿ ಸೋಷಿಯಲ್‌ ಡೆಮಾಕ್ರಸಿ ಸಿದ್ಧಾಂತದ ಅಡಿಪಾಯದ ಪಕ್ಷವಾಗಿತ್ತು ಎಂಬುದು ಇಲ್ಲಿ ಗಮನಾರ್ಹ.

ಹೌದು, ಆ ಚುನಾವಣೆಯಲ್ಲಿ ಲಿಂಗಾಯತರ ಬಹುತೇಕ ಮತ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಬಿದ್ದಿದೆ. 122 ಸ್ಥಾನಗಳಲ್ಲಿ ಗೆದ್ದ ಕಾಂಗ್ರೆಸ್‌ ಆಡಳಿತ ಚುಕ್ಕಾಣಿ ಹಿಡಿಯಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಅದುವರೆಗೂ ಅಂತರ ಕಾಪಾಡಿದ್ದ ಲಿಂಗಾಯತರ ಬೆಂಬಲ ಕಾಂಗ್ರೆಸ್‌ಗೆ ಮತ್ತೆ ಸಿಕ್ಕಿತು.

ಬಿಜೆಪಿಗೆ ಬಿಎಸ್‌ವೈ- ಬಿಎಸ್‌ವೈಗೆ ಬಿಜೆಪಿ ಬಲ
ಬಿಎಸ್‌ವೈ ದೂರಾದ ಪರಿಣಾಮ ಬಿಜೆಪಿಗೂ, ಬಿಜೆಪಿ ಬಿಟ್ಟದ ಪರಿಣಾಮ ಬಿಎಸ್‌ವೈ ಕೂಡ ಅರಿತುಕೊಂಡರು. ಮಾರನೇ ವರ್ಷವೇ ಲೋಕಸಭೆ ಚುನಾವಣೆಗೆ ಮೊದಲೇ ಬಿಎಸ್‌ವೈ ಬೇಷರತ್ತಾಗಿ ಬಿಜೆಪಿಗೆ ಸೇರಿದರು. ಮತ್ತೆ ಪಕ್ಷದ ರಾಜ್ಯ ಅಧ್ಯಕ್ಷರಾದರು. 2013ರಲ್ಲಿ ಮತ್ತೆ 40ಕ್ಕೆ ಕುಸಿದ ಬಿಜೆಪಿ 2018ರಲ್ಲಿ ಪುಟಿದೆದ್ದು 104 ಸ್ಥಾನಗಳಲ್ಲಿ ಗೆಲುವು ಕಂಡಿತು.

ನಂತರದ ರಾಜಕೀಯ ಬೆಳವಣಿಗೆಯಲ್ಲಿ ಬಿಎಸ್‌ವೈ ಮತ್ತೆ ಬಿಜೆಪಿ ಸೇರಿದರು. ಐದು ವರ್ಷದ ನಂತರ 2018ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ 64 ಸ್ಥಾನ ಗೆದ್ದುಕೊಂಡು ಸದಸ್ಯ ಬಲ 104ಕ್ಕೆ ಏರಿಸಿಕೊಂಡಿತು. ಆದರೆ ಸರ್ಕಾರ ರಚನೆ ಕಷ್ಟವಾಯಿತು. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರ ಒಂದು ವರ್ಷ ಚಿಲ್ಲರೆ ನಡೆಯಿತು. ಬಳಿಕ 15ರಷ್ಟು ಜೆಡಿಎಸ್‌, ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಉಪಚುನಾವಣೆ ಎದುರಿಸಿ ಬಿಜೆಪಿ ಸರ್ಕಾರ ರಚನೆಗೆ ಬಲ ತುಂಬಿದರು. ಬಿಎಸ್‌ವೈ ಮುಖ್ಯಮಂತ್ರಿಯಾದರು. ಒಂದು ವರ್ಷ ಆದ ನಂತರ ನಾಟಕೀಯ ವಿದ್ಯಮಾನದಲ್ಲಿ ಬಿಎಸ್‌ವೈ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು. 2021ರ ಜುಲೈನಲ್ಲಿ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು.

ಈ ಸಲದ ಚುನಾವಣೆಯಲ್ಲಿ ಹಿರಿಯರನೇಕರು ಚುನಾವಣಾ ರಾಜಕಾರಣದಿಂದ ನಿವೃತ್ತರಾಗಿದ್ದಾರೆ. ಲಿಂಗಾಯತ ಸಮುದಾಯದಲ್ಲಿ ತನಗೆ ಸಿಕ್ಕ ಗೌರವಾದರಗಳಿಗಿಂತ ಹೆಚ್ಚಿನ ಗೌರವಾದರ ಈಗ ವಿಜಯೇಂದ್ರ ಅವರಿಗೆ ಸಿಗುತ್ತಿದೆ ಎಂದು ಬಿಎಸ್‌ವೈ ಅವರೇ ಇತ್ತೀಚೆಗೆ ಹೇಳಿದ್ದರು. ಈ ಚುನಾವಣೆಯಲ್ಲಿ ಜನಾದೇಶ ಎಲ್ಲದಕ್ಕೂ ಉತ್ತರ ನೀಡಲಿದೆ.

ಇದನ್ನೂ ಓದಿ...

Back to top button
>