ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ರಾಜ್ಯದ ಪ್ರಮುಖ ಕ್ಷೇತ್ರಗಳು ಮತ್ತು ಪ್ರಮುಖ ಅಭ್ಯರ್ಥಿಗಳ ಕುರಿತಾದ ಚರ್ಚೆಗಳು ಜೋರಾಗಿವೆ. ಹಲವು ಕ್ಷೇತ್ರಗಳಲ್ಲಿ ರಾಜಕೀಯ ಕಾರಣಗಳಿಗಾಗಿ ವಿರೋಧಿಗಳ ಗೆಲುವಿಗಾಗಿ ರಾಜಕೀಯ ಪಕ್ಷಗಳು ಒಳಒಪ್ಪಂದ ಮಾಡಿಕೊಂಡಿವೆ ಎಂಬ ಗಂಭೀರ ಆರೋಪಗಳೂ ಕೇಳಿಬರುತ್ತಿವೆ.
ಇತ್ತೀಚಿಗೆ ಶಿಕಾರಿಪುರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರ ಗೆಲುವು ಸುಲಭವಾಗಲಿ ಎಂಬ ಕಾರಣಕ್ಕೆ, ಕಾಂಗ್ರೆಸ್ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲೂ ಇಂತದ್ದೇ ಆರೋಪ ಕೇಳಿಬಂದಿದೆ.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಇವರ ಗೆಲುವಿಗೆ ನೆರವಾಗಲು ಕಾಂಗ್ರೆಸ್ ತನ್ನ ಘೋಷಿತ ಅಭ್ಯರ್ಥಿಯನ್ನು ಬದಲಾಯಿಸಿದ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈ ಆರೋಪವನ್ನು ತಿರಸ್ಕರಿಸಿದ್ದಾರೆ.
ಹೌದು. ಕಾಂಗ್ರೆಸ್ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ತನ್ನ ಅಭ್ಯರ್ಥಿಯನ್ನು ಬದಲಾಯಿಸಿದೆ. ಈ ಮೊದಲು ಮೊಹಮ್ಮದ್ ಯೂಸುಫ್
ಸವಣೂರು ಅವರು, ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆದರೆ ಪಕ್ಷ ಬಿಡುಗಡೆ ಮಾಡಿರುವ ತನ್ನ ಐದನೇ ಪಟ್ಟಿಯಲ್ಲಿ, ಸವಣೂರು ಅವರನ್ನು ಕೈಬಿಟ್ಟು ಯಾಸಿರ್ ಅಹಮ್ಮದ್ ಖಾನ್ ಪಠಾಣ್ ಅವರಿಗೆ ಟಿಕೆಟ್ ನೀಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗೆಲುವಿಗೆ ನೆರವಾಗಲೆಂದೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಬದಲಾಯಿಸಿದೆ ಎಂಬ ಆರೋಪ ಕೇಳಿಬಂದಿದ್ದು, ಡಿಕೆ ಶಿವಕುಮಾರ್ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಗೆಲುವಿನ ಮಾನದಂಡಗಳನ್ನು ಪುನಃ ಪರಿಶೀಲಿಸಿದ ಬಳಿಕವೇ, ಶಿಗ್ಗಾಂವಿ ಕ್ಷೇತ್ರದ ಪಕ್ಷದ ಅಭ್ಯರ್ಥಿಯನ್ನು ಬದಲಾಯಿಸಿರುವುದಾಗಿ ಡಿಕೆಶಿ ಸ್ಪಷ್ಟಪಡಿಸಿದ್ದಾರೆ.
ಯಾರೂ ಏನೇ ಹೇಳಲಿ, ನಾವು ಶಿಗ್ಗಾಂವಿ ಕ್ಷೇತ್ರದಲ್ಲಿ ಮತ್ತೆ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದೇವೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರು ಅಧಿಕವಾಗಿದ್ದು, ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಮತದಾರರನ್ನು ಸೆಳೆಯಬಲ್ಲ ಸಮರ್ಥ ಅಭ್ಯರ್ಥಿಗೆ ನಾವು ಟಿಕೆಟ್ ಘೋಷಿಸಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಈ ಚುನಾವಣೆಯಲ್ಲಿ ಬಿಜೆಪಿಯೇ ನಮಗೆ ಪ್ರಬಲ ಪ್ರತಿಸ್ಪರ್ಧಿ. ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವುದು ನಮ್ಮ ಗುರಿ. ಯಾವುದೇ ಕಾರಣಕ್ಕೂ ವ್ಯಕ್ತಿ ಮತ್ತು ವೈಯಕ್ತಿಕ ಸ್ನೇಹ ಸಂಬಂಧವನ್ನು ಪರಿಗಣಿಸಿ, ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ನೆರವು ನೀಡುವುದು ನಮ್ಮಿಂದ ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ.
ಶಿಗ್ಗಾಂವಿಯೂ ಸೇರಿದಂತೆ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಅನ್ಯ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ನೆರವಾಗುವುದು ಕಾಂಗ್ರೆಸ್ ಜಾಯಮಾನವಲ್ಲ. ನಮಗೆ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವು ಮುಖ್ಯವಾಗಿದ್ದು, ಒಳಒಪ್ಪಂದದ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಡಿಕೆ ಶಿವಕುಮಾರ್ ಇದೇ ವೇಳೆ ಗುಡುಗಿದ್ದಾರೆ.
ಕೆಲವು ಕ್ಷೇತ್ರಗಳಲ್ಲಿ ನಮಗೆ ಪ್ರಬಲ ಎದುರಾಳಿಗಳು ಇರುವುದು ಸಹಜ. ಹಾಗೆಂದ ಮಾತ್ರಕ್ಕೆ ಅವರ ವಿರುದ್ಧ ಸೆಣೆಸುವುದನ್ನು ಬಿಡಲು ಆಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದ್ದು, ಅಂತಿಮವಾಗಿ ಕ್ಷೇತ್ರದ ಮತದಾರ ತನಗಿಷ್ಟವಾದ ಅಭ್ಯರ್ಥಿಯ ಪರ ತನ್ನ ತೀರ್ಮಾನವನ್ನು ಪ್ರಕಟಿಸುತ್ತಾನೆ. ಇದರಲ್ಲಿ ಒಳಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆಯಾದರೂ ಏನಿರುತ್ತದೆ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಘೋಷಿತ ಅಭ್ಯರ್ಥಿಯನ್ನು ಬದಲಾಯಿಸಿದ್ದರಿಂದ, ಸಿಎಂ ಬಸವರಾಜ ಬೊಮ್ಮಾಯಿ ಅವರ ಗೆಲುವಿಗೆ ನೆರವಾಗಲು ಕಾಂಗ್ರೆಸ್ ಒಳಒಪ್ಪಂದ ಮಾಡಿಕೊಂಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.