ಅಕ್ಷಯ ತೃತೀಯ ಎಂದರೆ ಹಿಂದೂಗಳ ಪಾಲಿಗೆ ಶುಭದಿನ. ಆ ದಿನ ಚಿನ್ನಾಭರಣ ಖರೀದಿಸಿ, ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದ ಜೀವನವೆಲ್ಲಾ ಶುಭಘಳಿಗೆಯೇ ತುಂಬಿರುತ್ತದೆ ಎಂಬುದು ನಂಬಿಕೆ. ಅಕೃಯ ತೃತೀಯದಂದು ಚಿನ್ನ ಖರೀದಿ ಮಾಡುವುದರಿಂದ ಸುಖ, ಸಂಪತ್ತು ವೃದ್ಧಿಯಾಗುತ್ತದೆ ಎನ್ನಲಾಗುತ್ತದೆ. ಇಷ್ಟೇ ಯಾವುದೇ ರೀತಿಯ ಹೊಸ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆಯೂ ಇದೆ.
ಈ ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡುವ ಉದ್ದೇಶದಿಂದ ತಿಂಗಳಾನುಗಟ್ಟಲೇ ಹಣ ಕೂಡಿಡುವವರೂ ಇದ್ದಾರೆ. ಬಡವ, ಬಲ್ಲಿದ ಎನ್ನದೇ ಒಂದು ಸಣ್ಣ ತುಂಡು ಚಿನ್ನವನ್ನಾದರೂ ಖರೀದಿ ಮಾಡುವ ಮೂಲಕ ಅಕ್ಷಯ ತೃತೀಯವನ್ನು ಆಚರಿಸುತ್ತಾರೆ. ಈ ದಿನದ ಆಚರಣೆಯ ಹಿಂದೆ ಧಾರ್ಮಿಕ ಹಿನ್ನೆಲೆಗಳೂ ಇವೆ. ಅದರೊಂದಿಗೆ ಈ ದಿನ ಚಿನ್ನ ಖರೀದಿ ಮಾಡುವುದರಿಂದ ಲಾಭ, ನಷ್ಟ ಎರಡೂ ಇದೆ. ಆದರೆ ಅಕ್ಷಯ ತೃತೀಯ ಸಂಭ್ರಮದ ಭರದಲ್ಲಿ ಜನರ ನಷ್ಟದ ಕಡೆ ಗಮನ ಹರಿಸುವುದಿಲ್ಲ.
ಪ್ರಯೋಜನಗಳು
ಆಫರ್ ಹಾಗೂ ಚಿನ್ನಾಭರಣಗಳ ಮೇಲಿನ ರಿಯಾಯಿತಿ: ಅಕ್ಷಯ ತೃತೀಯ ಸಮೀಪಿಸುತ್ತಿದ್ದಂತೆ ಆಭರಣ ಮಳಿಗೆಗಳಲ್ಲಿ ವಿಶೇಷ ರಿಯಾಯಿತಿಗಳನ್ನು ಘೋಷಿಸುತ್ತಾರೆ. ರಿಯಾಯಿತಿ ದರದಲ್ಲಿ ಚಿನ್ನ ಖರೀದಿ ಮಾಡಲು ಈ ಸಮಯ ಹೇಳಿ ಮಾಡಿಸಿದ್ದು.
ಶುಭದಿನ: ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡುವುದು ಅದೃಷ್ಟ ಹಾಗೂ ಸಮೃದ್ಧಿಯ ಸಂಕೇತ ಎಂದೇ ಭಾವಿಸಲಾಗಿದೆ. ಏಕೆಂದರೆ ಈ ದಿನವನ್ನು ಮಂಗಳಕರ ಎಂದು ಪರಿಗಣಿಸಲಾಗಿದೆ. ಮದುವೆಯಂತಹ ಶುಭದಿನಗಳು ಇಂದು ನಡೆಯುವುದು ಸಾಮಾನ್ಯ. ಮದುವೆ, ಗೃಹಪ್ರವೇಶದಂತಹ ಕಾರ್ಯಕ್ರಮಗಳಿಗೆ ಚಿನ್ನವನ್ನು ಉಡುಗೊರೆ ರೂಪದಲ್ಲಿ ನೀಡಬಹುದು. ದರವೂ ಕಡಿಮೆ ಇರುವುದರಿಂದ ಅಷ್ಟೊಂದು ಹೊರೆಯಾಗುವುದಿಲ್ಲ.
ಬಂಡವಾಳ ಹೂಡಿಕೆಗೆ ಒಳ್ಳೆಯ ಸಮಯ: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಚಿನ್ನ ಖರೀದಿ ಮಾಡುವುದು ನಿಜಕ್ಕೂ ಸಂಪತ್ತನ್ನು ಕೂಡಿಟ್ಟಂತೆ. ಮುಂದಿನ ದಿನಗಳಲ್ಲಿ ಚಿನ್ನದ ದರ ಇನ್ನಷ್ಟು ಏರಿಕೆಯಾಗುತ್ತದೆ ಎನ್ನಲಾಗುತ್ತಿದ್ದು, ಚಿನ್ನದ ಮೇಲೆ ಹೂಡಿಕೆ ಮಾಡುವುದು ನಿಜಕ್ಕೂ ಸುರಕ್ಷಿತ ಮಾರ್ಗವಾಗಿದೆ. ಕಾಲಾ ನಂತರದಲ್ಲಿ ಚಿನ್ನದ ಬೆಲೆ ಏರಿಕೆಯಾದ ನಂತರ ನಿಮ್ಮ ಇಂದಿನ ಹೂಡಿಕೆ ಉಪಯೋಗಕ್ಕೆ ಬರಬಹುದು.
ಅನಾನುಕೂಲಗಳು
ಹೆಚ್ಚಿದ ಬೇಡಿಕೆ: ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದರಿಂದ ಶುಭವಾಗುತ್ತದೆ ಎಂಬ ನಂಬಿಕೆಯಿರುವ ಕಾರಣ ಆ ದಿನ ಚಿನ್ನದ ನಾಣ್ಯ ಹಾಗೂ ಆಭರಣಗಳ ಖರೀದಿ ಜೋರಾಗಿರುತ್ತದೆ. ಯಾವುದೇ ಚಿನ್ನದ ಮಳಿಗೆಗೆ ಹೋದರೂ ಗಂಟೆಗಟ್ಟಲೇ ಕಾಯಬೇಕು. ಅಲ್ಲದೆ ಎಲ್ಲರೂ ಖರೀದಿಸುವ ಕಾರಣ ನಿಮಗೆ ಆಯ್ಕೆ ಇಲ್ಲದೇ ಇರಬಹುದು. ಖರೀದಿಸಲೇಬೇಕು ಎನ್ನುವ ಕಾರಣಕ್ಕೆ ಸಿಕ್ಕದ್ದನ್ನು ಖರೀದಿ ಮಾಡುವಂತಾಗಬಹುದು.
ದರದ ಏರಿಳಿತ: ಅಕ್ಷಯ ತೃತೀಯದಂದು ಸಾಮಾನ್ಯವಾಗಿ ಚಿನ್ನದ ಬೆಲೆ ಏರಿಕೆಯಾಗುತ್ತದೆ. ಈ ದಿನ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೇ ಚಿನ್ನದ ಬೆಲೆ ಏರಿಳಿಕೆಯಾಗುತ್ತಲೇ ಇರುತ್ತದೆ. ಹಾಗಾಗಿ ಚಿನ್ನ ಖರೀದಿಗೂ ಮೊದಲೇ ಯಾವ ಮಳಿಗೆಯಲ್ಲಿ ಕಡಿಮೆ ಇದೆ, ಯಾವ ಮಳಿಗೆಯಲ್ಲಿ ಆಫರ್ ಇದೆ, ಕಲೆಕ್ಷನ್ ಪ್ರಮಾಣ ಜಾಸ್ತಿ ಇರುತ್ತದೆ ಎಂಬುದನ್ನೆಲ್ಲಾ ಸಂಶೋಧಿಸಿ ನಂತರ ಖರೀದಿಗೆ ಹೋಗುವುದು ಉತ್ತಮ. ಮಳಿಗೆಯ ಮೌಲ್ಯಮಾಪನದ ಬಗ್ಗೆ ತಿಳಿಯುವುದೂ ಮುಖ್ಯವಾಗಿದೆ.
ತಯಾರಿ ಇಲ್ಲದ ಖರೀದಿ: ಕೆಲವೊಮ್ಮೆ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಯ ಬಗ್ಗೆ ನಾವು ಯೋಚಿಸಿರುವುದಿಲ್ಲ ಅಥವಾ ದಿನಾಂಕ ಮರೆತಿರುತ್ತೇವೆ. ನಿಮ್ಮ ಆತ್ಮೀಯರು ಬಂದು ಈ ದಿನ ಚಿನ್ನ ಖರೀದಿ ಮಾಡುವುದರಿಂದ ಶುಭವಾಗುತ್ತದೆ ಎಂದ ಕೂಡಲೇ ಸಾಲ, ಸೋಲ ಮಾಡಿಯಾದರೂ ಚಿನ್ನ ಕೊಳ್ಳಲು ಮನಸ್ಸು ಮಾಡುತ್ತೇವೆ. ಇದರಿಂದ ಇದ್ದಕ್ಕಿದ್ದಂತೆ ಖರ್ಚು ಸಂಭವಿಸಬಹುದು. ಅಲ್ಲದೆ ಇದು ಖರ್ಚಿನ ಹೊರೆಯನ್ನು ನಿಮ್ಮ ತಲೆಯ ಮೇಲೆ ಹೊರಿಸಬಹುದು.