ರಾಜ್ಯ

ಬಂಧನಕ್ಕೂ ಮೊದಲು ಭಿಂದ್ರನ್‌ವಾಲೆ ಜನ್ಮಸ್ಥಳದಲ್ಲಿ ಸಭೆ ನಡೆಸಿದ್ದ ಪ್ರತ್ಯೇಕತಾವಾದಿ ಅಮೃತ್‌ಪಾಲ್‌ ಸಿಂಗ್

Separatist Amritpal Singh held a meeting at Bhindranwale's birthplace before his arrest.

ಮೊಗಾ: ಸತತ ಒಂದು ತಿಂಗಳ ಕಾರ್ಯಾಚರಣೆಯ ಬಳಿಕ, ಮೂಲಭೂತವಾದಿ ಸಿಖ್ ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್‌ನನ್ನು ಬಂಧಿಸುವಲ್ಲಿ ಪಂಜಾಬ್‌ ಪೊಲೀಸರು ಯಶಸ್ವಿಯಾಗಿದ್ದಾರೆ. ಮೊಗಾದಲ್ಲಿ ಅಮೃತ್‌ಪಾಲ್‌ ಸಿಂಗ್‌ ಪೊಲೀಸರಿಗೆ ಶರಣಾಗಿದ್ದಾನೆ. ಅಮೃತಪಾಲ್‌ ಸಿಂಗ್‌ ಬಂಧನದ ಮೂಲಕ, ಮತ್ತೆ ಹೆಡೆಯೆತ್ತಿರುವ ಖಲಿಸ್ತಾನ ಚಳುವಳಿಯ ಮೂಲಕ್ಕೆ ಪೊಲೀಸರು ಪೆಟ್ಟು ನೀಡಿದ್ದಾರೆ.

ಆದರೆ ಅಮೃತ್‌ಪಾಲ್‌ ಸಿಂಗ್‌ ಪೊಲೀಸರಿಗೆ ಶರಣಾಗುವ ಮೊದಲು, ಮೊಗಾ ಜಿಲ್ಲೆಯ ರೋಡ್ ಗ್ರಾಮದ ಗುರುದ್ವಾರದಲ್ಲಿ ತನ್ನ ಬೆಂಬಲಿಗರ ಸಭೆ ನಡೆಸಿದ್ದ ಎಂಬುದು ತಿಳಿದುಬಂದಿದೆ. ಮೊಗಾ ಖಲಿಸ್ತಾನಿ ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯ ಜನ್ಮಸ್ಥಳ ಎಂಬುದು ವಿಶೇಷ.

ಅಮೃತಪಾಲ್ ಸಿಂಗ್ ತನ್ನನ್ನು ಜರ್ನೈಲ್‌ ಸಿಂಗ್‌ ಭಿಂದ್ರನ್‌ವಾಲೆಯ ಅನುಯಾಯಿ ಎಂದು ಹೇಳಿಕೊಂಡಿದ್ದು, ತನ್ನ ಬೆಂಬಲಿಗರಿಂದ “ಭಿಂದ್ರನ್‌ವಾಲೆ 2.0” ಎಂದೇ ಕರೆಸಿಕೊಳ್ಳುತ್ತಾನೆ. ತನ್ನ ಬಂಧನಕ್ಕೂ ಮೊದಲು ಭಿಂದ್ರನ್‌ವಾಲೆಯ ಸ್ವಗ್ರಾಮದಲ್ಲಿ ಅಮೃತ್‌ಪಾಲ್‌ ಸಿಂಗ್‌ ಸಭೆ ನಡೆಸಿರುವುದು ಇದೀಗ ತೀವ್ರ ಕುತೂಹಲ ಕೆರಳಿಸಿದೆ.

ಅಮೃತಪಾಲ್ ಸಿಂಗ್ ರೋಡ್ ಗ್ರಾಮದಲ್ಲಿದ್ದಾನೆ ಎಂಬ ಮಾಹಿತಿ ಪಡೆದ ಪಂಜಾಬ್‌ ಪೊಲೀಸರು, ನಾಲ್ಕೂ ದಿಕ್ಕುಗಳಿಂದ ಗ್ರಾಮವನ್ನು ಸುತ್ತುವರೆದರು. ಬಳಿಕ ಯಾವುದೇ ಪ್ರತಿರೋಧ ತೋರದೆ ಶಾಂತಿಯಿಂದ ಶರಣಾಗುವಂತೆ ಪೊಲೀಸರು ಧ್ವನಿವರ್ಧಕದ ಮೂಲಕ ನಿರ್ದೇಶನ ನೀಡಿದರು.

ಆ ಬಳಿಕ ಅಮೃತ್‌ಪಾಲ್‌ ಸಿಂಗ್‌ ಗುರುದ್ವಾರದಿಂದ ಹೊರಗೆ ಬರುವವರೆಗೂ ಕಾದು ಕುಳಿತ ಪೊಲೀಸರು, ಆತ ಹೊರಬರುತ್ತಿದ್ದಂತೇ ವಶಕ್ಕೆ ಪಡೆದರು. ಗುರುದ್ವಾರದ ಪಾವಿತ್ರತೆ ಕಾಪಾಡಾಲು, ನಾವು ಸಮವಸ್ತ್ರವನ್ನು ಧರಿಸಿ ಒಳಗೆ ಪ್ರವೇಶಿಸದಿರುವ ನಿರ್ಣಯ ಕೈಗೊಂಡೆವು ಎಂದು ಪಂಜಾಬ್‌ನ ಪೊಲೀಸ್ ಮಹಾನಿರೀಕ್ಷಕ ಸುಖಚೈನ್ ಸಿಂಗ್ ಹೇಳಿದ್ದಾರೆ.

ಸದ್ಯ ಅಮೃತ್‌ಪಾಲ್‌ ಸಿಂಗ್‌ನನ್ನು ಅಸ್ಸಾಂನ ದಿಬ್ರುಗಢ ಜೈಲಿಗೆ ಕರೆದೊಯ್ಯಲಾಗಿದೆ. ಅಲ್ಲಿ ಆತನ ಎಂಟು ಸಹಾಯಕರನ್ನು ಈಗಾಗಲೇ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ. ಈ ಕಾಯ್ದೆ ಯಾವುದೇ ಆರೋಪವಿಲ್ಲದೆ ವ್ಯಕ್ತಿಯನ್ನು ಒಂದು ವರ್ಷದವರೆಗೆ ಬಂಧಿಸುವ ಅವಕಾಶ ನೀಡುತ್ತದೆ.
ಕಿರಣ್‌ದೀಪ್ ಕೌರ್ ಲಂಡನ್‌ಗೆ ತೆರಳಲು ವಿಮಾನವೇರಲು ಪ್ರಯತ್ನಿಸಿದಾಗ, ಅಮೃತ್‌ಸರ್ ವಿಮಾನ ನಿಲ್ದಾಣದಲ್ಲಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದರು.

ಅಮೃತಪಾಲ್ ಬಂಧನದ ನಂತರ ಪಂಜಾಬ್ ಪೊಲೀಸರು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಮತ್ತು ಯಾವುದೇ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳದಂತೆ ಜನರಲ್ಲಿ ಮನವಿ ಮಾಡಿದ್ದಾರೆ,.

ಆಮ್ ಆದ್ಮಿ ಪಕ್ಷದ ಆಡಳಿತವಿರುವ ಪಂಜಾಬ್, ಕೇಂದ್ರ ಸರ್ಕಾರ ಮತ್ತು ಬಿಜೆಪಿ-ಆಡಳಿತವಿರು ಅಸ್ಸಾಂ ರಾಜ್ಯಗಳ ನಡುವಿನ ಸಂಘಟಿತ ಪ್ರಯತ್ನದ ಫಲವಾಗಿ ಅಮೃತ್‌ಪಾಲ್‌ ಸಿಂಗ್‌ ಬಂಧನ ಸಾಧ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ಮಾರ್ಚ್ 2ರಂದು ನಡೆದ ಸಭೆಯಲ್ಲಿ, ಅಮೃತಪಾಲ್ ಸಿಂಗ್ ಅವರನ್ನು ಬಂಧಿಸುವ ಯೋಜನೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಚರ್ಚಿಸಿದ್ದರು.

ಅಮೃತಪಾಲ್ ಸಿಂಗ್ ಭಾರತದ ವಿರುದ್ಧ ಸಶಸ್ತ್ರ ಬಂಡಾಯವೇಳುವಂತೆ ಸಿಖ್‌ ಯುವಕರನ್ನು ಪ್ರಚೋದಿಸುತ್ತಿದ್ದ. ಪಂಜಾಬ್ ಅನ್ನು ಭಾರತದಿಂದ ಪ್ರತ್ಯೇಕಿಸುವ ವಿಛಿದ್ರಕಾರಿ ಗುರಿಯನ್ನು ಹೊಂದಿದ್ದ ಎಂಬ ಆರೋಪಗಳನ್ನು ಹೊರಿಸಲಾಗಿದೆ. ಅಮೃತಪಾಲ್ ಸಿಂಗ್ ಯುವಕರನ್ನು “ಬಂದೂಕು ಸಂಸ್ಕೃತಿ” ಯತ್ತ ಕೊಂಡೊಯ್ಯುತ್ತಿದ್ದಾನೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಅಮೃತ್‌ಪಾಲ್‌ ಸಿಂಗ್‌ ಪಾಕಿಸ್ತಾನದ ಬಾಹ್ಯ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದು, ಪಾಕಿಸ್ತಾನದಿಂದ ಅಕ್ರಮವಾಗಿ ಪಡೆದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಡಿ-ಅಡಿಕ್ಷನ್ ಸೆಂಟರ್‌ಗಳನ್ನು ಬಳಸುತ್ತಿದ್ದ ಎಂಬುದು ತನಿಖೆಯಿಂದ ಬಯಲಾಗಿದೆ.

ಇದನ್ನೂ ಓದಿ...

Back to top button
>