ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್; ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ಘೋಷಿಸುವುದಕ್ಕೆ ನನ್ನ ವಿರೋಧವಿದೆ
Finance Minister Nirmala Sitharaman; I am against political parties announcing freebies
ಬೆಂಗಳೂರು: ಚುನಾವಣೆಗಳನ್ನು ಗೆಲ್ಲಲು ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ಘೋಷಿಸುವುದಕ್ಕೆ ತಮ್ಮ ವಿರೋಧವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಥಿಂಕರ್ಸ್ ಫೋರಂ ಕರ್ನಾಟಕದ ವತಿಯಿಂದ ಜಯನಗರದ ಆರ್.ವಿ. ಡೆಂಟಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಚಿತ ಕೊಡುಗೆ ಘೋಷಣೆಗಳಿಂದ ಯಾವ ಪ್ರಯೋಜನವೂ ಇಲ್ಲ ಎಂದು ಅಭಿಪ್ರಾಯಪಟ್ಟರು.
ಸರ್ಕಾರಗಳು ತಮ್ಮ ರಾಜ್ಯ ಬಜೆಟ್‌ಗೆ ಪೂರಕವಾಗಿ ಅಭಿವೃದ್ದಿ ಕೆಲಸಗಳಿಗೆ ಮೊದಲು ಆದ್ಯತೆ ಕೊಡಬೇಕು.ರಾಜ್ಯದ ಹಣಕಾಸು ಸ್ಥಿತಿಗತಿಯನ್ನು ಅರಿತು, ಆ ನಂತರವಷ್ಟೇ ಉಚಿತ ಕೊಡುಗೆಗಳ ಬಗ್ಗೆ ಯೋಚಿಸುವುದು ಜವಾಬ್ದಾರಿಯುತ ರಾಜಕೀಯ ಪಕ್ಷಗಳ ನಿಲುವಾಗಬೇಕು ಎಂದು ನಿರ್ಮಲಾ ಸೀತಾರಾಮನ್ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದರು.
ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಭರವಸೆಗಳನ್ನು ನೀಡಲಾಗುತ್ತದೆ. ಅಧಿಕಾರಕ್ಕೆ ಬಂದು ಬಜೆಟ್ ಪರಿಶೀಲಿಸಿದ ನಂತರ, ಈ ಯೋಜನೆಗಳ ಅನುಷ್ಠಾನ ಸಾಧ್ಯವಿಲ್ಲ ಎಂಬುದು ಗೊತ್ತಾಗುತ್ತದೆ. ರೈತರಿಗೆ, ಬಡವರಿಗೆ ಉಚಿತ ವಿದ್ಯುತ್ ನೀಡುವ ಭರವಸೆ ನೀಡಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಇಂತಹ ಭರವಸೆಗಳನ್ನು ಈಡೇರಿಸಿ, ಉತ್ಪಾದನಾ ಕಂಪನಿಗಳಿಗೆ ಹಣ ಪಾವತಿ ಮಾಡದಿರುವ ಪರಿಸ್ಥಿತಿ ಇದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ರಾಜ್ಯದ ಆರ್ಥಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಭರವಸೆಗಳನ್ನು ನೀಡಬೇಕು ಮತ್ತು ಅದರ ಬಗ್ಗೆ ಸಂಪೂರ್ಣ ಪಾರದರ್ಶಕತೆ ಇರಬೇಕು. ಉಚಿತ ಕೊಡುಗೆಗಳನ್ನು ಸಹ ಬಜೆಟ್‌ನಲ್ಲಿ ತೋರಿಸುವ ಮತ್ತು ವರ್ಷದ ಕೊನೆಯಲ್ಲಿ ಅದನ್ನು ಮತ್ತೆ ಪರಿಶೀಲಿಸುವ ಪರಿಪಾಠ ಬೆಳೆಯಬೇಕಿದೆ ಎಂದು ನಿರ್ಮಲಾ ಸೀತಾರಾಮನ್ ಇದೇ ವೇಳೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯವು ರಾಷ್ಟ್ರಕ್ಕೆ ಸಾಕಷ್ಟು ಚಿಂತಕರು, ಉದ್ಯಮಿಗಳನ್ನು ಕೊಡುಗೆಯಾಗಿ ನೀಡಿದೆ. ವಿಶೇಷವಾಗಿ ಸಿಲಿಕಾನ್ ಸಿಟಿ ಬೆಂಗಳೂರು ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿದೆ. ಸ್ಟಾರ್ಟಪ್‌ಗಳು ಮತ್ತು ಯುನಿಕಾರ್ನ್‌ಗಳ ಕೇಂದ್ರವಾಗಿರುವ ಬೆಂಗಳೂರು, ಈ ಮೂಲಕ ಇಡೀ ಜಗತ್ತನ್ನು ತನ್ನತ್ತ ಸೆಳೆಯುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ಪ್ರಶಂಸೆ ವ್ಯಕ್ತಪಡಿಸಿದರು.
ರಾಜ್ಯದ ಉತ್ಪನ್ನವಾದ ನಂದಿನಿ ಸಂಸ್ಥೆಯ ಬೆಳವಣಿಗೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡಿದೆ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ರಾಜಕೀಯ ಪಕ್ಷಗಳು, ನಂದಿನಿ ವಿಚಾರವಾಗಿ ಅನಾವಶ್ಯಕ ಗೊಂದಲಗಳನ್ನು ಹುಟ್ಟು ಹಾಕುತ್ತಿವೆ. ಗ್ರಾಹಕನಿಗೆ ಕಡಿಮೆ ಬೆಲೆಯಲ್ಲಿ ಉತ್ಕೃಷ್ಟ ಉತ್ಪನ್ನ ದೊರೆಯುವುದು, ಕೇವಲ ಆರೋಗ್ಯಕರ ಸ್ಪರ್ಧೆ ಇದ್ದಾಗ ಮಾತ್ರ. ರೈತರಿಗೂ ಕೂಡ ಹಲವು ಹಾಲು ಉತ್ಪಾದನಾ ಕಂಪನಿಗಳು ರಾಜ್ಯದಲ್ಲಿ ನೆಲೆಯೂರುವುದಿಂದ, ಸಾಕಷ್ಟು ಅನುಕೂಲವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಅಮುಲ್ ರಾಜ್ಯ ಪ್ರವೇಶವನ್ನು ಬೆಂಬಲಿಸಿದರು.
ಕೋವಿಡ್ ಮತ್ತು ಯುದ್ಧದ ಕರಿಛಾಯೇಯ ಸಂದರ್ಭದಲ್ಲಿ ಕೂಡ, ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ ಎನಿಸಿಕೊಂಡಿದ್ದು ಹೆಮ್ಮೆಯ ವಿಚಾರ. ಭಾರತವು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ಜಗತ್ತು ನಿಬ್ಬೆರಗಾಗುವಂತಹ ಸಾಧನೆ ಮಾಡುತ್ತಿದೆ. ಯುರೋಪ್ ಮತ್ತು ಜಗತ್ತಿನ ಇತರ ಹಲವು ದೇಶಗಳು ತಪ್ಪಾದ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ, ಈಗಲೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ. ಆದರೆ ಭಾರತ ಸೂಕ್ತ ಸಮಯದಲ್ಲಿ ಸೂಕ್ತ ಹಣಕಾಸು ನಿರ್ಣಯಗಳನ್ನು ಕೈಗೊಂಡು, ಆರ್ಥಿಕವಾಗಿ ಸದೃಢವಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಕಳೆದ 4 ವರ್ಷಗಳಿಂದ ಜಗತ್ತು ನಾನಾ ರೀತಿಯ ಕಷ್ಟಗಳಿಂದ ಬಳಲಿದೆ. ಕೋವಿಡ್ ಒಂದು ಮುಖ್ಯ ಕಾರಣವಾಗಿದ್ದು, ಅದರ ಕುರುಹುಗಳು ಇನ್ನೂ ಕಂಡುಬರುತ್ತಿವೆ. ಕೋವಿಡ್‌ನಿಂದಾಗಿ ಜಾಗತಿಕ ಆರ್ಥಿಕತೆಯು ಸಹ ನರಳಿತು. ಆದರೆ ಭಾರತವು ಕಠಿಣ ಮತ್ತು ಸಮಯೋಚಿತ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ತನ್ನ ಆರ್ಥಿಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಿತು ಎಂದು ಕೇಂದ್ರ ಹಣಕಾಸು ಸಚಿವೆ ನುಡಿದರು.
ಯುದ್ಧ ಮತ್ತು ಕೋವಿಡ್‌ನ ಕಷ್ಟದ ಸಮಯದಲ್ಲಿ ಭಾರತದ ಆರ್ಥಿಕತೆಗೆ, ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಟ್ಯಾಗ್ ನೀಡಲಾಯಿತು. ವಿಶೇಷವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೋವಿಡ್ ಸಮಯದಲ್ಲಿ ಭಾರತವು ರಾಜ್ಯಗಳೊಂದಿಗೆ ಸಮಾಲೋಚಿಸಿ ವೈರಸ್ ಹರಡುವಿಕೆ, ಲಸಿಕೆಗಳ ಉತ್ಪಾದನೆ ಮತ್ತು ಅಗತ್ಯವಿರುವವರಿಗೆ ಅದನ್ನು ಸಕಾಲಿಕವಾಗಿ ವಿತರಿಸುವುದನ್ನು ಮೇಲ್ವಿಚಾರಣೆ ಮಾಡಲಾಯಿತು. ಹಲವಾರು ಸುಧಾರಣೆಗಳನ್ನು ಹೊರತರುವ ಮೂಲಕ ಕೋವಿಡ್ ಮತ್ತು ಯುದ್ಧದ ನಂತರದ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಲಾಯಿತು ಎಂದು ನಿರ್ಮಲಾ ಸೀತಾರಾಮನ್ ವ್ಯಾಖ್ಯಾನಿಸಿದರು.
ಈ ಕಠಿಣ ಪರಿಸ್ಥಿತಿಯಲ್ಲಿ ರಸಗೊಬ್ಬರಗಳನ್ನು ಸಾಮಾನ್ಯಕ್ಕಿಂತ 8 ರಿಂದ 10 ಪಟ್ಟು ಹೆಚ್ಚಿನ ಬೆಲೆಗೆ ಆಮದು ಮಾಡಿಕೊಳ್ಳಲಾಯಿತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಹೊರೆಯಾಗದಂತೆ ನೋಡಿಕೊಂಡವು. ಇಂಧನವನ್ನು ಕೈಗೆಟುಕುವ ದೇಶಗಳಿಂದ ಆಮದು ಮಾಡಿಕೊಳ್ಳುವ ಬಗ್ಗೆ, ದಿಟ್ಟ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುಲಾಯಿತು. ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಪಡೆದಿರುವುದಕ್ಕೆ ಭಾರತೀಯರು ಹೆಮ್ಮೆಪಡಬೇಕಿದೆ ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.