ಮೆಚ್ಚಿನ ನಟಿಗೆ ದೇವಸ್ಥಾನ ಕಟ್ಟಿಸಿದ ಅಭಿಮಾನಿ
A fan built a temple for his favorite actress
ಪ್ರಿಯಲಚ್ಛಿ sambramaprabha
ಸಿನಿಮಾ ನಟ-ನಟಿಯರನ್ನು ದೇವರಂತೆ ಆರಾಧಿಸುವ ಅನೇಕ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಕರ್ನಾಟಕದ ಪುನೀತ್ ರಾಜ್‌ಕುಮಾರ್ ಅವರ ಕೆಲವು ಅಭಿಮಾನಿಗಳು ಹುಟ್ಟುಹಬ್ಬದಂದು ಅಪ್ಪು ಮಾಲೆ ಧರಿಸಿ ಸಮಾಧಿಗೆ ಪೂಜೆ ಸಲ್ಲಿಸಿದ್ದರು. ಕೆಲವು ವರ್ಷಗಳ ಹಿಂದೆ ತಮಿಳು ನಟಿ ಖುಷ್ಪೂ, ರಜನಿಕಾಂತ್‌ಗೆ ಫ್ಯಾನ್ಸ್, ದೇವಾಲಯ ಕಟ್ಟಿದ್ದರು. ತೆಲಂಗಾಣದಲ್ಲಿ ಸೋನುಸೂದ್, ಮಂಡ್ಯದಲ್ಲಿ ರೆಬೆಲ್ ಸ್ಟಾರ್ ಅಂಬಿಗೆ ಗುಡಿ ಕಟ್ಟಿದ್ದಾರೆ. ಇದೀಗ ಟಾಲಿವುಡ್ ನಟಿ ಸಮಂತಾಗೆ ಅಭಿಮಾನಿಯೊಬ್ಬರು ದೇವಸ್ಥಾನ ನಿರ್ಮಿಸಿದ್ದಾರೆ.
ಟಾಲಿವುಡ್ ನಟಿ ಸಮಂತಾ ಏಪ್ರಿಲ್ 28 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸವಿನೆನಪಿಗಾಗಿ ಆಂಧ್ರಕ್ಕೆ ಸೇರಿದ ಅವರ ಅಭಿಮಾನಿಯೊಬ್ಬರು ಮೆಚ್ಚಿನ ನಟಿಗಾಗಿ ಆಂಧ್ರದ ಬಾಪಟ್ಲದ ತಮ್ಮ ಮನೆಯ ಮುಂಭಾಗದಲ್ಲಿ ಒಂದು ಪುಟ್ಟ ಗುಡಿಯನ್ನೇ ಕಟ್ಟಿಸುತ್ತಿದ್ದಾರೆ. ಸಮಂತಾಗೆ ಆಂಧ್ರ, ತೆಲಂಗಾಣ ಮಾತ್ರವಲ್ಲದೆ ಕರ್ನಾಟಕ, ತಮಿಳುನಾಡು, ಉತ್ತರದಲ್ಲೂ ಅಭಿಮಾನಿಗಳಿದ್ದಾರೆ. ಒಬ್ಬೊಬ್ಬ ಅಭಿಮಾನಿ ತಮ್ಮ ಮೆಚ್ಚಿನ ನಟಿಯನ್ನು ಒಂದೊಂದು ರೀತಿ ಆರಾಧಿಸುತ್ತಿದ್ದಾರೆ. ಸಿನಿಮಾಗಳ ಜೊತೆಗೆ ಸಮಂತಾ ಸಾಮಾಜಿಕ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಅವರ ಸಮಾಜ ಸೇವೆಯನ್ನು ಮೆಚ್ಚಿ ಇದೀಗ ಸಂದೀಪ್ ಎಂಬ ಯುವಕನೊಬ್ಬ ಸಮಂತಾ ದೇಗುಲ ಕಟ್ಟಿದ್ದು ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಏಪ್ರಿಲ್ 28 ಸಮಂತಾ ಹುಟ್ಟುಹಬ್ಬದಂದು ಈ ದೇವಾಲಯ ಉದ್ಘಾಟನೆ ಆಗಲಿದೆ.
ಅತ್ತ ಅಭಿಮಾನಿ ತಮಗಾಗಿ ದೇವಸ್ಥಾನ ಕಟ್ಟಿಸುತ್ತಿರುವ ಸಮಯದಲ್ಲಿ ಸಮಂತಾ ಮತ್ತೊಮ್ಮೆ ಆಸ್ಪತ್ರೆ ಸೇರಿದ್ಧಾರೆ. ಆಕ್ಸಿಜನ್ ರೀತಿಯ ಮಾಸ್ಕ್ ಧರಿಸಿ ಮಲಗಿರುವ ಫೋಟೋವನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಗಾಬರಿಯಾಗಿದ್ದಾರೆ. ಆದರೆ ಸ್ವತ: ಸಮಂತಾ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ”ನಾನು ಹೈಪರ್ ಬೇರಿಕ್ ಥೆರಪಿ ತೆಗೆದುಕೊಳ್ಳುತ್ತಿದ್ದೇನೆ. ಈ ಚಿಕಿತ್ಸೆ ಅನೇಕ ರೋಗಗಳಿಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಈ ಥೆರಪಿಯಿಂದ ದೇಹದಲ್ಲಿನ ಹಾನಿಕರ ಅಂಗಾಂಶಗಳು ಉತ್ತಮಗೊಳ್ಳುತ್ತವೆ”ಎಂದಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನಿಮ್ಮೊಂದಿಗೆ ನಾವಿದ್ದೇವೆ ಧೈರ್ಯದಿಂದ ಇರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸಮಂತಾ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಗುಣಶೇಖರ್ ನಿರ್ದೇಶನದಲ್ಲಿ ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ಶಾಕುಂತಲಂ’ ಸಿನಿಮಾ ಏಪ್ರಿಲ್ 14ಕ್ಕೆ ತೆರೆ ಕಂಡಿತ್ತು. ಆದರೆ ಸಿನಿಮಾ ಜನರ ಹಾಗೂ ಚಿತ್ರತಂಡದ ನಿರೀಕ್ಷೆ ಮುಟ್ಟಲಿಲ್ಲ. ಸಾಕಷ್ಟು ನಿರೀಕ್ಷೆ ಇದ್ದ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸೋಲು ಕಂಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದ್ದಂತೆ ಟಾಲಿವುಡ್ ನಿರ್ಮಾಪಕ, ನಿರ್ದೇಶಕ ಚಿಟ್ಟಿಬಾಬು, ಸಮಂತಾ ಅವರನ್ನು ಕುರಿತು, ”ಇನ್ನು ಸಮಂತಾ ಅಧ್ಯಾಯ ಮುಗಿಯಿತು” ಎಂದು ವ್ಯಂಗ್ಯವಾಡಿದ್ದರು. ತಮ್ಮನ್ನು ನಿಂದಿಸಿದ ನಿರ್ದೇಶಕನಿಗೆ ಸಮಂತಾ ಭಗವದ್ಗೀತೆಯ ಸಾಲುಗಳನ್ನು ಹೇಳುವ ಮೂಲಕ ತಿರುಗೇಟು ಕೊಟ್ಟಿದ್ದರು.
ಇದನ್ನು ಹೊರತುಪಡಿಸಿ ಸಮಂತಾ ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಸ್ ಖ್ಯಾತಿಯ ರಾಜ್ & ಡಿಕೆ ನಿರ್ದೇಶಿಸುತ್ತಿರುವ ‘ಸಿಟಾಡೆಲ್’ ವೆಬ್ ಸೀರೀಸ್‌ನಲ್ಲಿ ಸಮಂತಾ ನಟಿಸುತ್ತಿದ್ದಾರೆ.