ಪ್ರಿಯಲಚ್ಛಿ sambramaprabha
ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಗಳು ಘಟಿಸುತ್ತಿವೆ. ಹಲವು ಕುತೂಹಲಗಳಿಗೆ ಈ ಸಲದ ವಿಧಾನಸಭೆ ಚುನಾವಣೆ ಸುದ್ದಿಯಲ್ಲಿದೆ. ಆ ಪೈಕಿ ಡಾ. ರಾಜ್‌ಕುಮಾರ್ ಸೊಸೆ ಗೀತಾ ಶಿವರಾಜ್‌ಕುಮಾರ್ ಇಂದು (ಏ. 28) ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಪತ್ನಿಯ ಈ ನಿರ್ಧಾರಕ್ಕೆ ನಟ ಶಿವರಾಜ್‌ಕುಮಾರ್ ಸಹ ಬೆಂಬಲ ಸೂಚಿಸಿದ್ದಾರೆ.
ಗೀತಾ ಶಿವರಾಜ್‌ಕುಮಾರ್ ಇದೇ ಮೊದಲ ಸಲ ರಾಜಕೀಯ ಅಖಾಡಕ್ಕೆ ಇಳಿಯುತ್ತಿಲ್ಲ. ಈ ಹಿಂದೆ ಅಂದರೆ 2014ರಲ್ಲಿ ಜೆಡಿಎಸ್ ಪಕ್ಷದಿಂದ ಗುರುತಿಸಿಕೊಂಡು, ಚುನಾವಣೆಗೂ ಸ್ಪರ್ಧಿಸಿ ಸೋತಿದ್ದರು. ಇದೀಗ ಶಿವಮೊಗ್ಗದ ಸೊರಬ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಹೋದರ ಮಧು ಬಂಗಾರಪ್ಪ ಪರ ಪ್ರಚಾರಕ್ಕಿಳಿಯಲು ಸಿದ್ಧರಾಗಿದ್ದಾರೆ. ಆ ಕಾರಣಕ್ಕೆ ತಾವೂ ಕೈ ಪಡೆ ಸೇರುತ್ತಿದ್ದಾರೆ.
ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರ ಕಾಂಗ್ರೆಸ್ ಸೇರ್ಪಡೆ ನಿರ್ಧಾರಕ್ಕೆ ಶಿವರಾಜ್‌ಕುಮಾರ್ ಸಹ ಬೆಂಬಲ ಸೂಚಿಸಿದ್ದಾರೆ. ಈ ಸಂಬಂಧ ತಮ್ಮ ಬೆಂಗಳೂರಿನ ನಾಗವಾರದಲ್ಲಿನ ಮನೆ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, “ಗೀತಾ ಇವತ್ತು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಕ್ವೀನ್ಸ್ ರಸ್ತೆಯಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರಲಿದ್ದಾರೆ. ಗೀತಾ ಅವರ ನಿರ್ಧಾರಕ್ಕೆ ನನ್ನ ಸಹಮತಿಯೂ ಇದೆ” ಎಂದಿದ್ದಾರೆ ಶಿವರಾಜ್‌ಕುಮಾರ್.
ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಂತೆ, ನೇರವಾಗಿ ಸೊರಬ ಕ್ಷೇತ್ರಕ್ಕೆ ತೆರಳುವುದಾಗಿಯೂ ಶಿವಣ್ಣ ಹೇಳಿದ್ದಾರೆ. “ಸೇರ್ಪಡೆ ಕೆಲಸ ಮುಗಿಯುತ್ತಿದ್ದಂತೆ, ನಾಳೆಯಿಂದಲೇ ಪ್ರಚಾರ ಕಾರ್ಯ ಶುರುವಾಗಲಿದೆ. ಸೊರಬದಲ್ಲಿ ಮಧು ಬಂಗಾರಪ್ಪ ಅವರ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಆ ಪ್ರಚಾರದಲ್ಲಿ ನಾನೂ ಸಹ ಭಾಗವಹಿಸಲಿದ್ದೇನೆ” ಎಂದಿದ್ದಾರೆ.
ಸೊರಬದಲ್ಲಿ ಸಹೋದರರ ಸವಾಲ್..
ಶಿವಮೊಗ್ಗದ ಸೊರಬ ವಿಧಾನ ಸಭಾ ಕ್ಷೇತ್ರ ಜಿದ್ದಾಜಿದ್ದಿನ ಕಣ ಎಂದೇ ಫೇಮಸ್. ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಇಬ್ಬರು ಪುತ್ರರಾದ ಮಧು ಬಂಗಾರಪ್ಪ ಕಾಂಗ್ರೆಸ್ ಪರವಾಗಿದ್ದರೆ, ಇತ್ತ ಕುಮಾರ ಬಂಗಾರಪ್ಪ ಬಿಜೆಪಿಯಿಂದ ಕಣದಲ್ಲಿದ್ದಾರೆ. 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಧು ಬಂಗಾರಪ್ಪ, ಕುಮಾರ ಬಂಗಾರಪ್ಪ ಎದುರು ಗೆದ್ದಿದ್ದರು. ಅದಾದ ಬಳಿಕ, 2018ರಲ್ಲಿ ಕಾಂಗ್ರೆಸ್ ಸೇರಿದ್ದ ಮಧು ಅವರನ್ನು ಬಿಜೆಪಿಯ ಸ್ಪರ್ಧಿ ಕುಮಾರ ಬಂಗಾರಪ್ಪ ಸೋಲಿಸಿದ್ದರು. ಇದೀಗ ಈ ಸಲದ ರಣಕಣದಲ್ಲಿ ಯಾರಿಗೆ ಗೆಲುವಿನ ಮಾಲೆ ಎಂಬುದನ್ನು ಕ್ಷೇತ್ರದ ಜನತೆ ನಿರ್ಧರಿಸಲಿದ್ದಾರೆ.
.