ಪ್ರಿಯಲಚ್ಛಿ sambramaprabha
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚುನಾವಣೆಯ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ (Karnataka Election) ವಿಷಕನ್ಯೆ, ವಿಷಸರ್ಪ ಇತ್ಯಾದಿ ಪದಗಳ ಕುರಿತು ವಾದ ವಿವಾದಗಳು ನಡೆಯುತ್ತಿವೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಈ ಕುರಿತು ಪರೋಕ್ಷವಾಗಿ ಮಾತನಾಡಿದ್ದಾರೆ. ತನ್ನ ವಿರುದ್ಧ ಮತ್ತು ಪಕ್ಷದ ಇತರೆ ನಾಯಕರ ವಿರುದ್ಧ ನಿಂದನಾತ್ಮಕ ಭಾಷೆಯಲ್ಲಿ ಮಾತನಾಡಿರುವ ಕಾಂಗ್ರೆಸ್ ಪಕ್ಷವನ್ನು ನರೇಂದ್ರ ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಚೌಕಿದಾರ್ ಚೋರ್ ಹೈ’, ‘ಮೋದಿ ಚೋರ್’ ಸೇರಿದಂತೆ 91 ವಿವಿಧ ರೀತಿಯ ನಿಂದನೆ ಪದಗಳನ್ನು ಕಾಂಗ್ರೆಸ್ ತನ್ನ ಮೇಲೆ ಎಸೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲಿಂಗಾಯತ ಸಮುದಾಯ ಮತ್ತು ಇತರೆ ಪ್ರಮುಖ ವ್ಯಕ್ತಿಗಳಾದ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ವೀರ್ ಸಾವರ್ಕರ್ ಅವರನ್ನು ಕಾಂಗ್ರೆಸ್ ಅವಮಾನಿಸಿದೆ ಎಂದು ಪ್ರಧಾನಿ ಆರೋಪಿಸಿದ್ದಾರೆ.
“ತಮ್ಮ ಭ್ರಷ್ಟಾಚಾರ ಮತ್ತು ಸ್ವಾರ್ಥ ರಾಜಕಾರಣದ ವಿರುದ್ಧ ಮಾತನಾಡುವವರನ್ನು ಕಾಂಗ್ರೆಸ್ ದ್ವೇಷಿಸುತ್ತದೆ. ಕಾಂಗ್ರೆಸ್ ಇಂತಹ ಶಾಶ್ವತ ದ್ವೇಷವನ್ನು ಹೊಂದಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. “ಇಂತಹ ನಿಂದನಾತ್ಮಕ ಪದಗಳು, ದ್ವೇಷಕ್ಕೆ ಸಮಯ ಹಾಳು ಮಾಡುವ ಬದಲು ಉತ್ತಮ ಆಡಳಿತ ಮತ್ತು ಕಾರ್ಯಕರ್ತರ ನೈತಿಕ ಶಕ್ತಿ ಹೆಚ್ಚಿಸುವತ್ತ ಕಾಂಗ್ರೆಸ್ ಗಮನ ಹರಿಸುತ್ತಿದ್ದರೆ ಆ ಪಕ್ಷ ಇಂದು ಈ ಕೆಟ್ಟ ಸ್ಥಿತಿಯಲ್ಲಿ ಇರುತ್ತಿರಲಿಲ್ಲ” ಎಂದು ಮೋದಿ ಟೀಕಿಸಿದ್ದಾರೆ.
“ಜನಸಾಮಾನ್ಯರ ಕುರಿತು ಮಾತನಾಡುವವರ, ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರವನ್ನು ಬಹಿರಂಗಪಡಿಸುವುವರ ಮತ್ತು ಅವರ ಸ್ವಾರ್ಥ ರಾಜಕಾರಣವನ್ನು ಟೀಕಿಸುವ ಪ್ರತಿಯೊಬ್ಬರನ್ನೂ ಕಾಂಗ್ರೆಸ್ ದ್ವೇಷಿಸುತ್ತದೆ. ಈ ರೀತಿ ತನ್ನ ವಿರುದ್ಧವಿರುವವರ ಕುರಿತು ಕಾಂಗ್ರೆಸ್‌ನ ದ್ವೇಷ ಶಾಶ್ವತವಾಗಿರುತ್ತದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನನ್ನನ್ನು ಮತ್ತೊಮ್ಮೆ ನಿಂದಿಸಲು ಆರಂಭಿಸಿದೆ” ಎಂದು ಮೋದಿ ಹೇಳಿದ್ದಾರೆ.
“ನನ್ನ ವಿರುದ್ಧ ಕಾಂಗ್ರೆಸ್ ಮಾಡಿರುವ ನಿಂದನೆಗಳ ಪಟ್ಟಿಯನ್ನು ಯಾರೋ ಮಾಡಿದ್ದಾರೆ. ಆ ಪಟ್ಟಿಯನ್ನು ನನಗೆ ಕಳುಹಿಸಿ ಕೊಟ್ಟಿದ್ದಾರೆ. ಆ ಪಟ್ಟಿಯ ಪ್ರಕಾರ ಕಾಂಗ್ರೆಸ್‌ನವರು ನನ್ನನ್ನು 91 ವಿವಿಧ ರೀತಿಯಲ್ಲಿ ನಿಂದಿಸಿದ್ದಾರೆ” ಎಂದು ಮೋದಿ ಹೇಳಿದ್ದಾರೆ.
“ಈ ರೀತಿ ನಿಂದನೆಗಾಗಿ ಸಮಯ ವ್ಯರ್ಥ ಮಾಡುವ ಬದಲು ಉತ್ತಮ ಆಡಳಿತಕ್ಕಾಗಿ ಪ್ರಯತ್ನ ಮಾಡುತ್ತಿದ್ದರೆ, ಪಕ್ಷದ ಕಾರ್ಯಕರ್ತರ ನೈತಿಕತೆಯನ್ನು ಹೆಚ್ಚಿಸುವಂತಹ ಪ್ರಯತ್ನ ಮಾಡಿದ್ದರೆ ಕಾಂಗ್ರೆಸ್‌ಗೆ ಇಂತಹ ದಯನೀಯ ದುಸ್ಥಿತಿ ಬರುತ್ತಿರಲಿಲ್ಲ. ಈ ಹಿಂದೆ ಕಾಂಗ್ರೆಸ್ ಪಕ್ಷವು ಇತರೆ ಪ್ರಮುಖ ವ್ಯಕ್ತಿಗಳನ್ನು ಹೇಗೆ ನಿಂದನೆ ಮಾಡುತ್ತಿತ್ತೋ, ಅದೇ ರೀತಿ ನನಗೂ ನಿಂದನೆಯನ್ನು ಉಡುಗೊರೆಯಾಗಿ ನೀಡುತ್ತಿದೆ” ಎಂದು ಪ್ರಧಾನಿ ಹೇಳಿದರು. “ಬಡವರಿಗಾಗಿ ಮತ್ತು ದೇಶಕ್ಕಾಗಿ ದುಡಿಯುವವರನ್ನು ಅವಮಾನಿಸುವುದು ಕಾಂಗ್ರೆಸ್‌ನ ಇತಿಹಾಸ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಈ ರೀತಿ ಕಾಂಗ್ರೆಸ್‌ನ ದಾಳಿಗೆ ಒಳಗಾಗಿರುವುದು ನಾನೊಬ್ಬನೇ ಅಲ್ಲ. ಕಳೆದ ಚುನಾವಣೆ ಸಮಯದಲ್ಲಿ ಚೌಕಿದಾರ್ ಚೋರ್ ಹೇ ಎಂದು ಕಾಂಗ್ರೆಸ್ ಹೇಳಿತ್ತು. ಬಳಿಕ ಮೋದಿ ಚೋರ್ ಎಂದು ಹೇಳಿತು. ಬಳಿಕ ಒಬಿಸಿ ಸಮುದಾಯ ಚೋರ್ ಎಂದು ಹೇಳಿತು. ಇದೀಗ ಲಿಂಗಾಯತ ಸಮುದಾಯದ ಸಹೋದರ ಮತ್ತು ಸಹೋದರಿಯರನ್ನೂ ಕಳ್ಳರೆಂದು ಕಾಂಗ್ರೆಸ್ ಹೇಳುತ್ತಿದೆ” ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
“ಕಾಂಗ್ರೆಸಿಗರೇ, ಕಿವಿ ತೆರೆದು ಆಲಿಸಿ, ನೀವು ಯಾರನ್ನಾದರೂ ನಿಂದಿಸಿದಾಗ ಅವರು ನಿಮಗೆ ತಡೆದುಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಶಿಕ್ಷೆ ನೀಡಿದ್ದಾರೆ. ಈ ಬಾರಿ ಕರ್ನಾಟಕವು ಅವರ ಘನತೆಗೆ ಆಗಿರುವ ನಿಂದನೆಗಳಿಗೆ ಮತಗಳ ಮೂಲಕ ಪ್ರತಿಕ್ರಿಯೆ ನೀಡಲಿದ್ದಾರೆ” ಎಂದು ಮೋದಿ ಹೇಳಿದ್ದಾರೆ.