ರಾಜಕೀಯರಾಜ್ಯ

1999ರಲ್ಲೂ ಚಾಕುವಿನಿಂದ ತಿವಿಯಲು ಯತ್ನಿಸಿದ್ದರು; ಕಲ್ಲೆಸೆತ ಘಟನೆ ಬಗ್ಗೆ ಜಿ ಪರಮೇಶ್ವರ್ ಹೇಳಿದ್ದಿಷ್ಟು

In 1999, he tried to stab himself with a knife; As G. Parameshwar said about the stone pelting incident

ವರದಿ: ಪ್ರಿಯಲಚ್ಛಿ
ತುಮಕೂರು: “ಬೈರೇನಹಳ್ಳಿ ಕ್ರಾಸ್​​ನಲ್ಲಿ ಪ್ರಚಾರ ಮಾಡುವಾಗ ನಮ್ಮ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು, ಜೆಸಿಬಿ ಮೂಲಕ ಹಾರ, ಹೂ ಹಾಕುವಾಗ ತಲೆಗೆ ಏನೋ ಹೊಡೆದಂತೆ ಆಯ್ತು, ಗುಲಾಬಿ ಜೊತೆ ರಕ್ತ ಬರ್ತಾ ಇದ್ದಿದ್ದು ಗೊತ್ತಾಗಲಿಲ್ಲ, ಅಕ್ಕಿರಾಂಪುರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಬಂದೆ, ಹೂವಿನಲ್ಲಿ ಕಲ್ಲು ಬಂದಿರೋಲ್ಲ, ಯಾರೋ ದುಷ್ಕರ್ಮಿಗಳು ಕಲ್ಲು ಹಾಕಿರಬೇಕು” ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ (Dr G Parameshwar) ತಿಳಿಸಿದರು.

ತುಮಕೂರಿನ (Tumkur) ಹೆಗ್ಗೆರೆಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಮೇಶ್ವರ್, “35 ವರ್ಷದ ರಾಜಕೀಯದಲ್ಲಿ ಶತ್ರುಗಳು ಕಡಿಮೆ, ಚುನಾವಣೆ ಜನರ ತೀರ್ಪು, ಜನರ ಮುಂದೆ ಮತ ಕೇಳ್ತೀವಿ, ಆಶ್ವಾಸನೆ ಕೊಡ್ತೀವಿ ಅದನ್ನ ಬಿಟ್ಟು ಬೇರೆ ಮಾಡಬಾರದು, ದ್ವೇಷ ತಿರಿಸಿಕೊಳ್ಳುವುದಕ್ಕೆ ಸಾರ್ವಜನಿಕ ಜೀವನ ಬಳಸಿಕೊಳ್ಳಬಾರದು” ಎಂದರು.

“ಹೂ ಎಸೆಯೋರಿಗೆ ಕಲ್ಲು ಇರೋದು ಗೊತ್ತಾಗುತ್ತೆ, ಪೊಲೀಸರಿಗೆ ತನಿಖೆ ಮಾಡುವಂತೆ ತಿಳಿಸಿದ್ದೇನೆ, 1999ರಲ್ಲೂ ಚಾಕುವಿನಿಂದ ತಿವಿಯಲು ಪ್ರಯತ್ನಿಸಿದ್ದರು. ಈಗ ಮತ್ತೆ ಆಗಿದೆ, ಪಕ್ಷದ ಅಧ್ಯಕ್ಷರು ದೂರು ನೀಡಿದ್ದಾರೆ, ಪೊಲೀಸರು ತನಿಖೆ ನಡೆಸುವಂತೆ ಮನವಿ ಮಾಡಿದ್ದೇನೆ” ಎಂದು ಹೇಳಿದರು.

“ಒಂದೂವರೆ ಇಂಚು ಗಾಯವಾಗಿದೆ, ಸರ್ಜಿಕಲ್ ಬ್ಲ್ಯೂ ಹಾಕಲಾಗಿದೆ, ಕುಮಾರಸ್ವಾಮಿಗೆ ಡ್ರಾಮಾ ಮಾಡಿ ಅಭ್ಯಾಸ ಇರ್ಬೇಕು ಅದಕ್ಕೆ ಹೇಳಿದ್ದಾರೆ, ಏಟು ತಿಂದಿರೋನು ನಾನು, ಡಾಕ್ಟರ್ ಅನುಮತಿ ಕೊಟ್ಟರೆ ನಾಳೆಯಿಂದಲೇ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ನನಗೆ ಡ್ರಾಮಾ ಮಾಡುವ ಅಗತ್ಯವಿಲ್ಲ, ಜನರ ಮುಂದೆ ಹೋಗುತ್ತೇನೆ, ಜನರ ತೀರ್ಮಾನ ತೆಗೆದುಕೊಳ್ಳುತ್ತೇನೆ” ಎಂದು ಹೆಚ್​ಡಿಕೆಗೆ ತಿರುಗೇಟು ನೀಡಿದರು. ಪರಮೇಶ್ವರ್​ ಅವರ ಮೇಲೆ ಕಲ್ಲೆಸೆತ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇದೊಂದು ನಾಟಕ ಎಂದು ಹೇಳಿದ್ದರು.

“ಸೋಲು, ಗೆಲುವು ನೋಡಿದ್ದೇನೆ, ಕ್ರೀಡಾಪಟುವಾಗಿ ಎರಡನ್ನು ಸಮಾನವಾಗಿ ಸ್ವೀಕರಿಸುತ್ತೇನೆ. ಯಾರು ಉದ್ವೇಗಕ್ಕೆ ಒಳಗಾಗಬೇಡಿ, ಶಾಂತಿಯುತವಾಗಿ ಚುನಾವಣೆ ನಡೆಯಬೇಕು, ಭದ್ರತಾ ವೈಫಲ್ಯ ಆಗಿಲ್ಲ, ಕಲ್ಲು ಹಾಕಿದ ತಕ್ಷಣ ಹೆದರುವುದಿಲ್ಲ, ಧೈರ್ಯವಾಗಿ ಪ್ರಚಾರಕ್ಕೆ ಹೋಗುತ್ತೇನೆ, ಪಕ್ಷದ ಮುಖಂಡರು ಆರೋಗ್ಯ ವಿಚಾರಿಸಿದ್ದಾರೆ, ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ” ಎಂದರು.

ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೈರೇನಹಳ್ಳಿ ಗ್ರಾಮದಲ್ಲಿ ನಿನ್ನೆ ( ಏ 28, ಶುಕ್ರವಾರ) ಚುನಾವಣ ಪ್ರಚಾರದಲ್ಲಿ ತೊಡಗಿದ್ದ ಮಾಜಿ ಡಿಸಿಎಂ, ಕಾಂಗ್ರೆಸ್​ ಹಿರಿಯ ನಾಯಕ ಡಾ. ಜಿ ಪರಮೇಶ್ವರ್ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದು, ಅವರ ತಲೆಗೆ ತೀವ್ರ ಗಾಯವಾಗಿದೆ. ಪರಮೇಶ್ವರ್ ಅವರು ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಇಂದು (ಏ 28) ಭೈರೇನಹಳ್ಳಿ ಗ್ರಾಮದಲ್ಲಿ ಚುನಾವಣ ಪ್ರಚಾರದಲ್ಲಿ ತೊಡಗಿದ್ದರು. ಪರಮೇಶ್ವರ್ ಅವರನ್ನು ಎತ್ತಿಕೊಂಡು ಕಾರ್ಯಕರ್ತರು ಕುಣಿಯುತ್ತಿದ್ದ ಸಂದರ್ಭದಲ್ಲಿ ಯಾರೋ ಕಲ್ಲು ಎಸೆದಿದ್ದರು.

ಪರಮೇಶ್ವರ್ ಅವರನ್ನು ತಕ್ಷಣವೇ ಅಕ್ಕಿರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು.

ಇದನ್ನೂ ಓದಿ...

Back to top button
>