ಪ್ರಿಯಲಚ್ಛಿ sambramaprabha
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ಪ್ರಚಾರ ಅಬ್ಬರದಿಂದ ಸಾಗುತ್ತಿದ್ದು, ಇದರ ಜೊತೆಗೆ ಆರೋಪ, ಪ್ರತ್ಯಾರೋಪಗಳು ಕೂಡ ಜೋರಾಗಿಯೇ ನಡೆಯುತ್ತಿವೆ.ನಿನ್ನೆ (ಏ.28, ಶುಕ್ರವಾರ) ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ ಜಿ ಪರಮೇಶ್ವರ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದ ಘಟನೆ ನಡೆದಿತ್ತು. ಇದೀಗ ಇದೇ ವಿಚಾರವಾಗಿ ಇದೀಗ ಕಾಂಗ್ರೆಸ್ ಬಿಜೆಪಿ ನಡುವೆ ವಾಕ್ಸಮರ ನಡೆಯುತ್ತಿದ್ದು,
ಅಮಿತ್ ಶಾ ಹೇಳಿಕೆ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ನಡೆಯುತ್ತಿರುವ ದಾಳಿಗಳ ಹಿಂದೆ ಬಿಜೆಪಿ ಷಡ್ಯಂತ್ರವಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಕೆಪಿಸಿಸಿ ಕಚೇರಿಯಲ್ಲಿಂದು (ಏ.29, ಶನಿವಾರ) ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ನಿನ್ನೆ ಕೊರಟಗೆರೆಯಲ್ಲಿ ನಮ್ಮ ಮಾಜಿ ಉಪಮುಖ್ಯಮಂತ್ರಿ ಹಾಗೂ ಪಕ್ಷದ ಪ್ರಣಾಳಿಕೆ ಸಮಿತಿ ಮುಖ್ಯಸ್ಥ ಡಾ ಜಿ ಪರಮೇಶ್ವರ್ ಅವರ ಮೇಲೆ ಕಲ್ಲುತೂರಾಟ ಮಾಡಲಾಗಿದೆ.
ಅವರು ನಾಮಪತ್ರ ಸಲ್ಲಿಸುವ ವೇಳೆಯೂ ಇದೇ ಪ್ರಯತ್ನ ನಡೆದಿದ್ದು, ಅಂದು ಅವರ ಬದಲಿಗೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ಕಲ್ಲು ತಾಗಿ ಗಾಯಗೊಂಡಿದ್ದರು. ಇದಕ್ಕೂ ಮುನ್ನ ವರುಣಾದಲ್ಲೂ ಇಂತಹ ಪ್ರಯತ್ನ ಮಾಡಲಾಗಿದೆ. ಇನ್ನು ಹೊಸಕೋಟೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಪತ್ನಿ ಕಾರಿನ ಮೇಲೆ ದಾಳಿ ಮಾಡಿದ್ದಾರೆ.
ಇದಕ್ಕೆ ಪೂರಕವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಗಲಭೆಗಳಾಗುತ್ತವೆ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ದೂರು ದಾಖಲಿಸಿದೆ. ಅಮಿತ್ ಶಾ ಹೇಳಿಕೆ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ನಡೆಯುತ್ತಿರುವ ದಾಳಿಗಳ ಹಿಂದೆ ಬಿಜೆಪಿ ಷಡ್ಯಂತ್ರವಿದೆ ಎಂದು ರಮೇಶ್ ಬಾಬು ಆರೋಪಿಸಿದ್ದಾರೆ.