ರಾಜಕೀಯರಾಜ್ಯ

ನನ್ನ ಖಾಸಗಿ ಜೀವನ ಗೌಪ್ಯ, ಅಂಬರೀಶ್‌ ಸಾವಿಗೆ ಬರದಿದ್ದಕ್ಕೆ ಕೊನೆಗೂ ಕಾರಣ ನೀಡಿದ ನಟಿ ರಮ್ಯಾ

My private life is confidential, actress Ramya is the reason why Ambareesh didn't die

ವರದಿ: ಪ್ರಿಯಲಚ್ಛಿ
ಮಂಡ್ಯ: ಸಿನಿಮಾರಂಗ ಹಾಗೂ ರಾಜಕೀಯ ಎರಡರಲ್ಲೂ ಮತ್ತೆ ಸಕ್ರಿಯರಾಗಿರುವ ನಟಿ ರಮ್ಯಾ ಕಾಂಗ್ರೆಸ್‌ನ ಸ್ಟಾರ್‌ ಪ್ರಚಾರಕರಲ್ಲಿ ಒಬ್ಬರಾಗಿದ್ದಾರೆ. ರಾಜ್ಯದಾದ್ಯಂತ ಪ್ರಚಾರ ಮಾಡುತ್ತಿರುವ ರಮ್ಯಾ ಇಂದು ಮಂಡ್ಯಕ್ಕೆ ಆಗಮಿಸಿದ್ದರು. ಅವರು ಬರುವ ವಿಷಯ ತಿಳಿದಾಕ್ಷಣ ಮಂಡ್ಯದ ಜನರು ಗೋ ಬ್ಯಾಕ್‌ ರಮ್ಯಾ ಅಭಿಯಾನ ಶುರುಮಾಡಿದ್ದರು. ಅಂಬರೀಶ್‌ ಅವರು ನಿಧನರಾದಾಗ ಅಂತಿಮ ದರ್ಶನಕ್ಕೂ ಬರದಿದ್ದ ಇವರು ಚುನಾವಣೆ ಸಮಯದಲ್ಲಿ ಮಾತ್ರ ಬರುವುದು ಬೇಡ ಎಂದು ರೆಬಲ್ ಸ್ಟಾರ್‌ ಅಭಿಮಾನಿಗಳು ಕಿಡಿಕಾರಿದ್ದರು. ರಮ್ಯಾ ಮಂಡ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದು, ಅಂಬರೀಶ್‌ ನಿಧನರಾದಾಗ ತಾವು ಏಕೆ ಬರಲಿಲ್ಲ ಎಂಬುದರ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.

 

ʻಆ ಸಮಯದಲ್ಲಿ ನನಗೆ ಗಂಭೀರ ಆರೋಗ್ಯ ಸಮಸ್ಯೆಯಾಗಿತ್ತು. ನನಗೆ ಟ್ಯೂಮರ್ ಇತ್ತು. ಅದರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಮಾತ್ರವಲ್ಲದೆ ಆಟೊಇಮ್ಯೂನ್ ಸಮಸ್ಯೆಗೂ ತುತ್ತಾಗಿದ್ದೆ. ಆದರೆ ಇದನ್ನೆಲ್ಲ ನಾನು ಕ್ಯಾಮೆರಾ ಮುಂದೆ ಹಂಚಿಕೊಳ್ಳಲಿಲ್ಲ. ಹೀಗೆ ಸಮಸ್ಯೆಗಳನ್ನು ಹಂಚಿಕೊಂಡು ಕನಿಕರ ಗಿಟ್ಟಿಸಿಕೊಳ್ಳುವ ವ್ಯಕ್ತಿತ್ವ ನನ್ನದಲ್ಲ. ನಾನು ಮೊದಲಿನಿಂದಲೂ ನನ್ನ ಖಾಸಗಿ ಜೀವನವನ್ನು ಗೌಪ್ಯವಾಗಿಯೇ ಇಟ್ಟುಕೊಂಡಿದ್ದೇನೆ. ಆದರೆ ನನ್ನ ಪರಿಸ್ಥಿತಿ ಗೊತ್ತಿಲ್ಲದೆ ಕೆಲವರು ಅಪಪ್ರಚಾರ ಮಾಡಿದರು. ಅದು ಬೇಸರ ತಂದಿದ್ದು ನಿಜʼ ಎಂದಿದ್ದಾರೆ ರಮ್ಯಾ.

 

ಇನ್ನು ಮಂಡ್ಯದಲ್ಲಿ ಮನೆ ಮಾಡುತ್ತೀರಿ ಎಂದು ಆಶ್ವಾಸನೆ ಕೊಟ್ಟಿದ್ದಿರಲ್ಲ ಅದೇನಾಯ್ತು? ಎಂಬ ಪ್ರಶ್ನೆಗೆ ಉತ್ತರಿಸಿರುವ ನಟಿ , ʻನನ್ನ ತಾತನವರದು ಇಲ್ಲಿ ಒಂದು ತೊಟ್ಟಿ ಮನೆ ಇದೆ. ನನಗೂ ಇಲ್ಲಿ ಮನೆ ಮಾಡುವ ಆಸೆ ಇದೆ. ಮಾಡ್ತೀನಿ. ಯಾರು ಏನೇ ಹೇಳಿದರು ನಾನು ಮಂಡ್ಯದವಳು. ನನ್ನ ತಾಯಿ, ತಂದೆ ಇಲ್ಲಿನವರು. ನಾನು ಮಂಡ್ಯ ಗೌಡ್ತಿ ಎಂಬುದನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಾನು ಸಂಕಷ್ಟದಲ್ಲಿ ಇದ್ದ ಸಮಯದಲ್ಲಿ ಇಲ್ಲಿನ ಜನ ಪ್ರೀತಿ ತೋರಿದ್ದಾರೆ. ಮಂಡ್ಯ ಜನರ ಬಗ್ಗೆ ಸದಾ ಗೌರವ ಇದೆ. ಮಂಡ್ಯದೊಟ್ಟಿಗೆ ನನ್ನದು ಕೇವಲ ರಾಜಕೀಯ ಸಂಬಂಧವಲ್ಲ. ನನ್ನ ಕುಟುಂಬ ಇಲ್ಲಿದೆʼ ಎಂದಿದ್ದಾರೆ ರಮ್ಯಾ.

 

ರಮ್ಯಾ ಮಂಡ್ಯಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ನಟ ಅಂಬರೀಶ್‌ ಅಭಿಮಾನಿಗಳು ಕೆಂಡಾಮಂಡಲರಾಗಿದ್ದರು. ʻರೆಬೆಲ್ ಸ್ಟಾರ್ ಅಂಬರೀಶ್ ತೀರಿ ಹೋದಾಗ ಮುಖ ನೋಡಲು ಬಾರದ ರಮ್ಯಾ ಈಗ ಬರೋದೇಕೆ? ಅಂದು ಮನೆ ಮಗಳ ರೀತಿ ಸಾಕಿ ಅವರನ್ನು ಸಂಸದೆ ಮಾಡಿದ್ದು ನಮ್ಮ ಅಂಬರೀಶ್ ಅವರು. ಮನೆಮನೆಗೆ ತೆರಳಿ ಪ್ರಚಾರ ನಡೆಸಿದ್ದು ಅಂಬಿ ಅಣ್ಣ. ಮಂಡ್ಯದಲ್ಲಿ ಕಾಂಗ್ರೆಸ್ ಗೆಲ್ಲಲು ಕಾರಣ ಇದೇ ಅಂಬರೀಶ್ ಅಣ್ಣ. ರಮ್ಯಾರಿಗೆ ಕಿಂಚಿತ್ತು ನಿಯತ್ತಿಲ್ಲ, ನಂಬಿಕೆ ವಿಶ್ವಾಸ ದ್ರೋಹ ಮಾಡಿದ್ದು ರಮ್ಯಾ. ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ರಾತ್ರೋ ರಾತ್ರಿ ಮನೆ ಖಾಲಿ ಮಾಡಿ ಪರಾರಿಯಾಗಿದ್ದರು. ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರನ್ನ ಅವರ ಅಭಿಮಾನಿಗಳನ್ನ ಸೈಡ್ ಲೈನ್ ಮಾಡಿದ್ರು. ಮಂಡ್ಯಕ್ಕೆ ರಮ್ಯಾರ ಕೊಡುಗೆ ಶೂನ್ಯ. ಅಂದು ಬೇಡವಾದ ಮಂಡ್ಯ ಈಗ ಯಾಕೆ ಬೇಕು? ಚುನಾವಣೆಗೋಸ್ಕರ ಮಂಡ್ಯ ಕ್ಷೇತ್ರ ರಮ್ಯಾರಿಗೆ ಈಗ ನೆನಪಾಯ್ತಾ?ʼ ಎಂದು ಮಂಡ್ಯದಲ್ಲಿ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ವಾಗ್ದಾಳಿ ನಡೆಸಿದ್ದರು.

 

ಇದನ್ನೂ ಓದಿ...

Back to top button
>