ರಾಜಕೀಯರಾಜ್ಯ

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಆನ್‌ಲೈನ್‌ ಬೆಟ್ಟಿಂಗ್‌ ದಂಧೆ ಸಂಪೂರ್ಣ ಬಂದ್‌, ಹೆಚ್‌ಡಿ ಕುಮಾರಸ್ವಾಮಿ ಭರವಸೆ

HD Kumaraswamy promises complete ban on online betting if JDS comes to power

ವರದಿ: ಪ್ರಿಯಲಚ್ಛಿ
ಲಿಂಗಸುಗೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಿದ್ದುಬಂಡಿ ಪರ ಇಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಪ್ರಚಾರ ಮಾಡಿದ್ದಾರೆ. ” ಬೆಟ್ಟಿಂಗ್ ದಂಧೆಯಿಂದಾಗಿ ಹಳ್ಳಿಯ ಮಕ್ಕಳು ಬೀದಿಪಾಲಾಗುತ್ತಿದ್ದಾರೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಆನ್ಲೈನ್ ಬೆಟ್ಟಿಂಗ್ ದಂಧೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು” ಎಂದು ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.

ಯಾಕೆ ಬೆಟ್ಟಿಂಗ್‌ಗೆ ನಿಷೇಧ?
“ಬೆಟ್ಟಿಂಗ್ ಇತ್ಯಾದಿ ದಂಧೆಗಳಿಂದ ಬಡವರ ಮಕ್ಕಳು, ಹಳ್ಳಿಯ ಮಕ್ಕಳು ಕೂಡ ಹಾಳಾಗುತ್ತಿದ್ದಾರೆ. ಶೈಕ್ಷಣಿಕವಾಗಿ ಅವರ ಭವಿಷ್ಯವನ್ನು ಭದ್ರ ಮಾಡಬೇಕಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಇಂಥ ಅನಿಷ್ಟಗಳನ್ನು ತೊಳಗಿಸುತ್ತೇನೆ ಎಂದ ಅವರು; ಹಿಂದೆ ತಾಯಂದಿರು ಸಾರಾಯಿ ನಿಷೇಧ ಮಾಡಿ ಎಂದರು. ಅವರ ಕಷ್ಟಕ್ಕೆ ಪರಿಹಾರವಾಗಿ ಸಾರಾಯಿ ನಿಷೇಧ ಮಾಡಿದೆ. ಒಂದಂಕಿ ಲಾಟರಿ ನಿಷೇಧ ಮಾಡಿದೆ. ನಾನು ಸರಕಾರ ಮಾಡಿದ ಸಂದರ್ಭದಲ್ಲಿ ತಾಯಂದಿರು, ಅಕ್ಕತಂಗಿಯರ ಬೇಡಿಕೆ ಈಡೇರಿಸಿದ್ದೇನೆ” ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

“ನಾನು ಕೇವಲ ರಾಜಕೀಯ ಭಾಷಣ ಮಾಡಿ, ಇನ್ನೊಬ್ಬರನ್ನು ನಿಂದನೆ ಮಾಡಲು ಬಂದಿಲ್ಲ. ನನ್ನ ಯೋಜನೆಗಳನ್ನು ಜನರ ಮುಂದಿಟ್ಟು ಮತ ಕೇಳಲು ಬಂದಿದ್ದೇನೆ. ಇವತ್ತು ಕಾಂಗ್ರೆಸ್ ನಾಯಕರು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಈ ನಾಡಿನ ಜನತೆಗೆ ಬೇಡುವ ಸ್ಥಿತಿ ತಂದೊಡ್ಡುವ ರೀತಿ ಇದೆ ಆ ಪ್ರಣಾಳಿಕೆ. ನಮ್ಮ ಪಂಚರತ್ನ ಕಾರ್ಯಕ್ರಮ ಹಾಗಲ್ಲ, ಎಲ್ಲರೂ ಸದೃಢವಾಗಿ ಇರಬೇಕು, ಪ್ರತಿ ಕುಟುಂಬವೂ ಸ್ವಾಭಿಮಾನದಿಂದ ಬದುಕುವಂತೆ ಶಕ್ತಿ ತುಂಬಲಿದೆ. ಒಂದೇ ಒಂದು ಬಾರಿ ಪರೀಕ್ಷೆ ಮಾಡಿ. ನಿಮ್ಮ ಕಷ್ಟಗಳಿಗೆ ಮುಕ್ತಿ ಕೊಡ್ತೇನೆ. ನಾನು ಹೇಳಿದಂತೆ ಮಾಡದಿದ್ದರೆ ಇನ್ನೆಂದು ನಿಮ್ಮೆದುರು ಬರೋದಿ”ಲ್ಲ ಎಂದು ಅವರು ಮನವಿ ಮಾಡಿದರು.

5 ವರ್ಷದ ಆಡಳಿತದ ಸರ್ಕಾರವನ್ನು ಜನತಾದಳಕ್ಕೆ ಕೊಡಿ. ನೀವು ಮೆಚ್ಚುವ ಆಡಳಿತ ಕೊಡುತ್ತೇನೆ. ಅಧಿಕಾರಕ್ಕೇರಿ ನಾನು ಮುಖ್ಯಮಂತ್ರಿ ಆಗಿ ಮೆರೆಯಬೇಕು ಅಂತಲ್ಲ. ಎಲ್ಲರೂ ನೆಮ್ಮದಿಯಿಂದ ಬಾಳುವಂತ ಸರಕಾರ ಕೊಡುತ್ತೇನೆ. ಶ್ರೀಮಂತ ಮಕ್ಕಳಿಗೆ ಸಮಾನವಾದ ಶಿಕ್ಷಣವನ್ನ ಬಡವರ ಮಕ್ಕಳೂ ಪಡೆಯಬೇಕು. ಬಡವರ ಮಕ್ಕಳಿಗೂ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡ್ತೇವೆ ಎಂದು ಕುಮಾರಸ್ವಾಮಿ ಅವರು ನುಡಿದರು.

ಜೆಡಿಎಸ್ ಸರಕಾರ ಬಂದರೆ ಎಂತಹ ಮಾರಣಾಂತಿಕ ಕಾಯಿಲೆ ಬಂದರೂ ಉಚಿತ ಚಿಕಿತ್ಸೆ ಸಿಗಲಿದೆ. ಅಪರೂಪದ ಖಾಯಿಲೆಯಿಂದ ಬಳಲುತ್ತಿರುವವರಿಗೆ ಕೂಡ ಚಿಕಿತ್ಸೆ ಕೊಡಿಸುತ್ತೇವೆ. ನಾನು ಜಾತಿ-ಧರ್ಮ ನೋಡೋಡಿಲ್ಲ. ಸರ್ವರಿಗೂ ಒಳ್ಳೆಯದಾಗಬೇಕು, ಸಮಾನ ಸೌಲಭ್ಯಗಳು ಸಿಗಬೇಕು. ಇದೇ ನನ್ನ ಆಶಯ. ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣವೇ ನನ್ನ ಗುರಿ ಎಂದು ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.

ನೀರಾವರಿ ಯೋಜನೆಗಳನ್ನು ಆದ್ಯತೆಯ ಮೇರೆಗೆ ಕಾರ್ಯಗತ ಮಾಡುತ್ತೇವೆ. ಜನತಾ ಜಲಧಾರೆ ಹೆಸರಿನಲ್ಲಿ ಯೋಜನೆ ರೂಪಿಸಿದ್ದೇವೆ. ಕೃಷಿ, ನೀರಾವರಿಗೆ ಸಮೃದ್ಧ ನೀರು ಕೊಡುವುದು ನಮ್ಮ ಬದ್ಧತೆ. ಅದನ್ನು ಮಾಡಿ ತೋರಿಸುತ್ತೇವೆ. ಜಮೀನಿಲ್ಲದ ಕೂಲಿ ಕಾರ್ಮಿಕರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಕೊಡುತ್ತೇವೆ. ವೃದ್ಧಾಪ್ಯ ವೇತನವಾಗಿ ತಿಂಗಳಿಗೆ 5 ಸಾವಿರ ನೀಡಲಾಗುವುದು. ಈ ನಾಡಿನ ಬಡತನ ಹೋಗಲಾಡಿಸಲು ಜನತಾ ಸರ್ಕಾರ ತನ್ನಿ ಎಂದು ಜನರನ್ನು ಮಾಜಿ ಮುಖ್ಯಮಂತ್ರಿಗಳು ಕೋರಿದರು.

ಸಿದ್ದುಬಂಡಿ ಧೈರ್ಯ ಹೇಳಿದ ಮಾಜಿ ಸಿಎಂ
ಚುನಾವಣೆಗೆ ವಿರೋಧಿ ಪಕ್ಷಗಳ ಹಣವನ್ನು ನೀರಿನಂತೆ ಚೆಲ್ಲುತ್ತಿದ್ದಾರೆ. ನಾನು ದುಡ್ಡನ್ನ ಎಲ್ಲಿಂದ ತರಲಿ ಅಂತಾ ಸಿದ್ದುಬಂಡಿ ಕಣ್ಣೀರು ಹಾಕುತ್ತಿದ್ದಾರೆ ಎಂದ ಕುಮಾರಸ್ವಾಮಿ ಅವರು, ಸಿದ್ದುಬಂಡಿಗೆ ನಾನು ಸಮಾಧಾನ ಹೇಳಿದ್ದೇನೆ. ಧೈರ್ಯ ತುಂಬಿದ್ದೇನೆ. ಜನರೇ ನಿಮ್ಮ ಆಸ್ತಿ ಅಂತಾ ಅವರಿಗೆ ಹೇಳಿ ಸಮಾಧಾನಪಡಿಸಿದ್ದೇನೆ ಎಂದರು. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪಕ್ಷದ ಕಾರ್ಯಾಧ್ಯಕ್ಷ ಆಲ್ಕೊಡ್ ಹನುಮಂತಪ್ಪ, ಮಾಜಿ ಸಚಿವ ಹಾಗೂ ಸಿಂಧನೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೆಂಕಟರಾವ್ ನಾಡಗೌಡ ಸೇರಿದಂತೆ ಅನೇಕ ಹಿರಿಯ ನಾಯಕರು, ಸ್ಥಳೀಯ ಮುಖಂಡರು ಹಾಜರಿದ್ದರು.

ಹೆಚ್‌ಡಿಕೆಗೆ ಓಟ್‌ ಹಾಕಿ ಎಂದ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಯವರು ನುಡಿದಂತೆ ನಡೆಯಲ್ಲ, ಹಾಗಾಗಿ ನುಡಿದಂತೆ ನಡೆಯುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕೈ ಬಲಪಡಿಸಲು ಈ ಬಾರಿ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಹೇಳಿದರು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಸುರೇಶ್‌ಬಾಬು ಪರ ಮತಯಾಚಿಸಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರಿಗೆ ಶಕ್ತಿ ತುಂಬುತ್ತೇನೆ ಅಂತ ಹೇಳುತ್ತಾರೆ, ಆದರೆ ಅವರು ನುಡಿದಂತೆ ನಡೆಯುವುದಿಲ್ಲ ಎಂದರು. ಈ ಕುರಿತಾದ ವರದಿ ಇಲ್ಲಿದೆ ಓದಿ.

ಇದನ್ನೂ ಓದಿ...

Back to top button
>