ರಾಜಕೀಯರಾಜ್ಯ

ಮಂಗಳೂರಲ್ಲಿ ಪ್ರಧಾನಿ ಮೋದಿ ಕಾರ್ಯಕರ್ತರಿಗೆ ಫ್ಲಾಶ್ ಲೈಟ್ ಹಾಕಿಸಿದ ಹಿಂದಿದೆ ಈ ಕಾರಣ

This is the reason behind Prime Minister Modi putting flash light on workers in Mangalore

ವರದಿ: ಪ್ರಿಯಲಚ್ಛಿ
ಮಂಗಳೂರು: “ನನಗೊಂದು ವೈಯಕ್ತಿಕ ಸಹಾಯ ಮಾಡುವಿರಾ?” ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಹೀಗಂದಾಗ ಎಲ್ಲರೂ ಒಕ್ಕೊರಲಿನಿಂದ “ಹೋ” ಎಂದರು. “ಎಲ್ಲರೂ ನಿಮ್ಮ ನಿಮ್ಮ ಮೊಬೈಲ್ ನಲ್ಲಿರುವ ಫ್ಲಾಶ್ ಲೈಟ್ ಆನ್ ಮಾಡಿ ಹಿಡಿಯಿರಿ” ಎಂದು ಪ್ರಧಾನಿ ಕರೆಕೊಟ್ಟರು.

ತಕ್ಷಣ ಅಲ್ಲಿದ್ದ ಬೃಹತ್ ಕಾರ್ಯಕರ್ತರ ಸಮೂಹ ತಮ್ಮಲ್ಲಿದ್ದ ಮೊಬೈಲ್ ನ ಫ್ಲ್ಯಾಶ್ ಆನ್ ಮಾಡಿ, ಕತ್ತಲಲ್ಲಿ ಬೆಳಕು ನೀಡಲು ಹಿಡಿಯುವಂತೆ ಕೈಯೆತ್ತಿ ಹಿಡಿದರು. ಆಗ ಮಾತನಾಡಿದ ಮೋದಿ, “ದಿಲ್ಲಿಯಿಂದ ನಿಮ್ಮ ಪ್ರಧಾನಿ ನರೇಂದ್ರ ಮೋದಿ ಮೂಲ್ಕಿಗೆ ಬಂದು ನಿಮಗೆ ಪ್ರಣಾಮ, ನಮಸ್ಕಾರ ಹೇಳಿದ್ದಾರೆ ಎಂಬ ಸಂದೇಶವನ್ನು ಮನೆಮನೆಗೆ ತಲುಪಿಸಿ” ಎಂದರು.

ನಿನ್ನೆ (ಮೇ 3) ಮೂಡುಬಿದಿರೆ  ವಿಧಾನಸಭಾ ಕ್ಷೇತ್ರದ ಮುಲ್ಕಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರಲ್ಲಿ ಮೊಬೈಲ್ ಫ್ಲ್ಯಾಶ್‌‌‌ ಲೈಟ್ ಹಾಕಿಸಿ ನನ್ನ ಸಂದೇಶ ಮನೆಮನೆಗೆ ಮುಟ್ಟಿಸಿ ಎಂದು ನರೇಂದ್ರ ಮೋದಿ ಹೇಳಿದ ವಿಚಾರ ಬಳಿಕ ಸಾಕಷ್ಟು ಚರ್ಚೆಗೂ ಕಾರಣವಾಯಿತು. ಅದ್ಭುತ ಭಾಷಣಗಾರರಾಗಿರುವ ಮೋದಿ, ಕಾರ್ಯಕರ್ತರನ್ನಷ್ಟೇ ಅಲ್ಲ, ಅವರ ಮನೆಯವರನ್ನೂ ವಿಚಾರಿಸಿದ್ದೇನೆ ಎಂದು ಕೇಳುವುದರ ಮೂಲಕ ಮನೆ ಮನೆಗೂ ತಲುಪುವ ಯತ್ನ ಮಾಡಿದ್ದಾರೆ ಎಂದು ನಾಯಕರು ಈ ಸಂದರ್ಭ ಹೇಳಿದರು. ಮನೆಮನೆಗೆ ಹೋಗಿ ದಿಲ್ಲಿಯಿಂದ‌ ಮುಲ್ಕಿಗೆ ಬಂದು ನಾನು ನಿಮಗೆ ‌ನಮಸ್ಕಾರ, ಪ್ರಣಾಮ ಹೇಳಿದ್ದಾರೆ ಎಂದು ತಿಳಿಸಿ ಎಂದದ್ದು ಕಾರ್ಯಕರ್ತರಲ್ಲಿ ಪುಳಕವನ್ನೂ ಉಂಟುಮಾಡಿತು.

ಟಿಕೆಟ್ ಸಿಗದವರ ಗೈರು
ಮೋದಿ ಕಾರ್ಯಕ್ರಮದ ವೇದಿಕೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 13 ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು, ಎರಡು ಕ್ಷೇತ್ರದ ಸಂಸದರು ಭಾಗಿಯಾಗಿದ್ದರು. ‌ ಬಿಜೆಪಿ ಟಿಕೆಟ್ ದೊರಕದ ಹಾಲಿ ಶಾಸಕರನ್ನು ಆಹ್ವಾನಿಸಲಾಗಿತ್ತು. ಟಿಕೆಟ್ ತಪ್ಪಿದ ಉಡುಪಿ ಕ್ಷೇತ್ರದ ಶಾಸಕ ರಘುಪತಿ ಭಟ್ ಮತ್ತು ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್ ಭಾಗಿಯಾದರೆ ಪುತ್ತೂರು ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ಸುಳ್ಯ ಕ್ಷೇತ್ರದ ಶಾಸಕ ಸಚಿವ ಅಂಗಾರ, ಬೈಂದೂರು ಕ್ಷೇತ್ರದ ಶಾಸಕ ಸುಕುಮಾರ್ ಶೆಟ್ಟಿ ಗೈರಾಗಿದ್ದರು. ಟಿಕೆಟ್ ಘೋಷಣೆ ಮುಂಚೆಯೆ ನಿವೃತ್ತಿ ಘೋಷಿಸಿದ್ದ ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕೂಡ ಗೈರಾಗಿದ್ದರು.

ಭಾಷಾಂತರ ಬೇಡ ಎಂದ ಕಾರ್ಯಕರ್ತರು
ಮೋದಿ ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರ ಮಾಡಲು ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಮುಂದಾದರು. ಆದರೆ ಆ ಸಂದರ್ಭ ಕಾರ್ಯಕರ್ತರು ಭಾಷಾಂತರ ಬೇಡ ಎಂದು ಮೋದಿ ಮೋದಿ ಎಂದು ಘೋಷಣೆ ಹಾಕಿದರು. ಆಗ ಮಾತನಾಡಿದ ಮೋದಿ ನೀವೆ ನಮ್ಮ ರಿಮೋಟ್ ಕಂಟ್ರೋಲ್. ನಿಮ್ಮ ಆದೇಶವನ್ನು ತಲೆಯ ಮೇಲಿಟ್ಟು ಪಾಲಿಸುತ್ತೇನೆ ಎಂದು ಹೇಳಿದರು.

ಪ್ರಧಾನಿಗೆ ಕಟೀಲು, ಧರ್ಮಸ್ಥಳ, ಬಪ್ಪನಾಡು , ಉಡುಪಿ ಪ್ರಸಾದ
ಕರಾವಳಿ ಜಿಲ್ಲೆ ಗೆ ಬಂದ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪುಣ್ಯಕ್ಷೇತ್ರಗಳ ಪ್ರಸಾದ ವನ್ನು ನೀಡಲಾಯಿತು. ಅವರನ್ನು ಕೇಸರಿ ಶಾಲು ಮತ್ತು ಪೇಟ ಹಾಕಿ ಸ್ವಾಗತಿಸುವ ವೇಳೆ ಗಣಪತಿ ಮೂರ್ತಿ ಮತ್ತು ಉಡುಪಿ ಶ್ರೀಕೃಷ್ಣನ ಮೂರ್ತಿ ಮತ್ತು ಪ್ರಸಾದವನ್ನು ನೀಡಲಾಯಿತು. ಇದೇ ವೇಳೆ ಕಟೀಲು ಮತ್ತು ಬಪ್ಪನಾಡು ಕ್ಷೇತ್ರದ ಪ್ರಸಾದವನ್ನು ಶಾಸಕ ಉಮನಾಥ ಕೋಟ್ಯಾನ್ ನೀಡಿದರೆ, ಡಾ ವೀರೇಂದ್ರ ಹೆಗ್ಗಡೆ ಅವರು ನೀಡಿದ ಧರ್ಮಸ್ಥಳದ ಪ್ರಸಾದವನ್ನು ಶಾಸಕ ಹರೀಶ್ ಪೂಂಜಾ ನೀಡಿದರು.

ಕಾಲಿಗೆ ಬಿದ್ದಿದ್ದಕ್ಕೆ ಗದರಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ತೆರಳುವ ವೇಳೆ ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸಹಿತ ಕೆಲವರು ಪ್ರಧಾನಿ ಕಾಲು‌ಮುಟ್ಟಿ ನಮಸ್ಕರಿಸಿದರು. ಈ ಸಂದರ್ಭದಲ್ಲಿ ಕಾಲಿಗೆ ಬಿದ್ದಿದ್ದಕ್ಕೆ ಮೋದಿ ಗದರಿದ ಘಟನೆಯೂ ನಡೆಯಿತು.

ಟ್ರಾಫಿಕ್ ಜಾಮ್
ನರೇಂದ್ರ ಮೋದಿ ಆಗಮನಕ್ಕೆ ಮುಂಚೆ ಸಭಾಂಗಣಕ್ಕೆ ಬರುವ ಕಾರ್ಯಕರ್ತರು ತಪಾಸಣೆಗಾಗಿ ಗುಂಪು ಗುಂಪಾಗಿ ನಿಂತಿದ್ದರು. ಭದ್ರತೆ ದೃಷ್ಟಿಯಿಂದ ಭದ್ರತಾ ಸಿಬ್ಬಂದಿಗಳು ಒಬ್ಬೊಬ್ಬರನ್ನೆ ತಪಾಸಣೆ ನಡೆಸುತ್ತಿದ್ದರು.ಇದನ್ನು ಗಮನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪೊಲೀಸರಿಗೆ ಜನರನ್ನು ತಪಾಸಣೆ ಮಾಡದೆ ಒಳಗೆ ಕಳುಹಿಸಿ ಎಂದರು.

ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾವಿರಾರು ಜನರು ಆಗಮಿಸಿದ್ದರು. ಈವರೆಗೆ ಪ್ರಧಾನಿ ಕಾರ್ಯಕ್ರಮ ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯುತ್ತಿತ್ತು. ಇದೇ ಮೊದಲ ಬಾರಿಗೆ ಮೂಡಬಿದಿರೆ ಕ್ಷೇತ್ರದ ಮೂಲ್ಕಿಯ ಕೊಳ್ನಾಡು ಮೈದಾನದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಯಲ್ಲಿರುವ ಮೂಲ್ಕಿಯಲ್ಲಿ ಕಾರ್ಯಕ್ರಮ ನಡೆದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸಂಚಾರವನ್ನು ಡೈವರ್ಸನ್ ಮಾಡಲಾಗಿತ್ತು. ಕಾರ್ಯಕ್ರಮ ಮುಗಿದ ಸಂದರ್ಭದಲ್ಲಿ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ನಿಂದ ಜನರು ಸಮಸ್ಯೆಗೊಳಗಾದರು.

ಇದನ್ನೂ ಓದಿ...

Back to top button
>