ವರದಿ: ಪ್ರಿಯಲಚ್ಛಿ
ಕರ್ನಾಟಕ ವಿಧಾನಸಭಾ ಚುನಾವಣೆ ದಿನೆ ದಿನೇ ರಂಗೇರುತ್ತಿದೆ. ಕಣದಲ್ಲಿರುವ ಅಭ್ಯರ್ಥಿಗಳ ಪ್ರಚಾರದ ಭರಾಟೆ ಜೋರಾಗಿದೆ. ಮತ ಬೇಟೆಗೆ ಅಖಾಡದಲ್ಲಿ ರಾಷ್ಟ್ರದ ನಾಯಕರು, ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಸಿಕ್ಕ ಒಂದು ಕ್ಷಣವನ್ನೂ ವ್ಯರ್ಥ ಮಾಡದೇ ಜನರ ಮಧ್ಯೆ ಬೆರೆಯುತ್ತಿದ್ದಾರೆ. ಆದರೆ ಅಭ್ಯರ್ಥಿಗಳ ಪ್ರಚಾರದ ಕುರಿತು ಮತದಾರರಲ್ಲಿ ಕೆಲವು ಗೊಂದಲಗಳು ಉಂಟಾಗಿವೆ. ಅವುಗಳಿಗೆ ಉತ್ತರವನ್ನು ಈ ಮುಂದೆ ನೋಡೋಣ.
ಅಭ್ಯರ್ಥಿ ಎಷ್ಟು ಖರ್ಚು ಮಾಡಬೇಕು?
ವಿಧಾನಸಭಾ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಗೆ ಖರ್ಚು ವೆಚ್ಚದ ಮಿತಿಯನ್ನು ಚುನಾವಣಾ ಆಯೋಗ 40 ಲಕ್ಷಕ್ಕೆ ನಿಗದಿಪಡಿಸಿದೆ. ಗೋವಾ, ಮಣಿಪುರದಲ್ಲಿ ತಲಾ 28 ಲಕ್ಷ, ಪಂಜಾಬ್, ಉತ್ತರ ಪ್ರದೇಶ, ಕರ್ನಾಟಕ ಮತ್ತು ಉಳಿದಂತೆ ಭಾರತದ ಎಲ್ಲಾ ರಾಜ್ಯಗಳಲ್ಲಿ ಪ್ರತಿ ಅಭ್ಯರ್ಥಿ 40 ಲಕ್ಷ ಖರ್ಚು ಮಾಡಬಹುದು.
ಖರ್ಚು-ವೆಚ್ಚದ ಮಿತಿ ಏರಿದರೆ ಶಿಕ್ಷೆ ಏನು?
ಅಭ್ಯರ್ಥಿಯ ಖರ್ಚು ವೆಚ್ಚ 40 ಲಕ್ಷ ಮೀರಬಾರದು ಎಂದು ಆಯೋಗ ಸೂಚಿಸಿದೆ. ಒಂದು ವೇಳೆ ಇದರ ಮಿತಿ ಮೀರಿದರೆ, ಅವರು ಗೆದ್ದ ಅಭ್ಯರ್ಥಿ ಆಗಿದ್ದರೂ ಸ್ಥಾನ ರದ್ದಾಗುವ ಸಾಧ್ಯತೆ ಹೆಚ್ಚಿದೆ. ಅಭ್ಯರ್ಥಿಯ ಖರ್ಚು ವೆಚ್ಚಗಳ ಮತ್ತು ನೀತಿ ಸಂಹಿತೆಯ ಉಲ್ಲಂಘನೆ ಮೇಲೆ ನಿಗಾ ಇಡಲು ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗುತ್ತದೆ. ಅಭ್ಯರ್ಥಿಯು 10 ಸಾವಿರಕ್ಕಿಂತಲೂ ಹೆಚ್ಚಿನ ಹಣ ಸಂದಾಯ ಮಾಡುವುದಿದ್ದರೆ, ಚೆಕ್ ಮೂಲಕವೇ ನೀಡಬೇಕು.
ಕಾನೂನು ಬದ್ಧ ಖರ್ಚು ವೆಚ್ಚಗಳು ಯಾವುವು?
*ಪೋಸ್ಟರ್, ಬ್ಯಾನರ್ಗಳಿಗೆ
*ಬಟ್ಟೆಗಳು, ಆಹಾರ-ಪಾನೀಯಗಳು, ಪ್ರವಾಸಗಳು ಇತ್ಯಾದಿ
*ಸಭೆ-ಸಮಾರಂಭಕ್ಕೆ, ರೋಡ್ ಶೋಗಳಿಗೆ (ಜನರು ಕರೆತರಲು ತಗುಲುವ ವೆಚ್ಚ)
*ಓಡಾಟದ ವಾಹನಗಳ ಖರ್ಚು ವೆಚ್ಚ (ಡೀಸೆಲ್, ಪೆಟ್ರೋಲ್, ಊಟ, ಉಪಚಾರ)
*ಫುಲ್ ಟೈಮ್ – ಪಾರ್ಟ್ ಟೈಮ್ ಕೆಲಸಗಾರರಿಗೆ ಸಂಬಳ ನೀಡಲು
*ಪಕ್ಷದ ತಾತ್ಕಾಲಿಕ ಕಚೇರಿಗಳ ನಿರ್ವಹಣೆಗೆ
ನಿಯಮ ಉಲ್ಲಂಘಿಸಿದರೆ ದೂರು ಯಾರಿಗೆ ಕೊಡಬೇಕು?
ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡುವುದು, ಬೆದರಿಸುವುದು, ಉಡುಗೊರೆ ನೀಡುವುದು, ಹಣ ಹಂಚುವುದು ಕಂಡು ಬಂದರೆ ಸಾರ್ವಜನಿಕರು ಫೋಟೋ ಅಥವಾ ವಿಡಿಯೋ ತೆಗೆದುಕೊಂಡು ರಿಟರ್ನಿಂಗ್ ಆಫಿಸರ್ಗೆ (RO) ದೂರು ನೀಡಬಹುದು. ಅಥವಾ ಜಿಲ್ಲಾ ಚುನಾವಣಾ ಅಧಿಕಾರಿಗೆ ದೂರು ಕೊಡಬಹುದು. ಸರ್ಕಾರದ ಸಿ-ವಿಜಿಲ್ ಆ್ಯಪ್ನಲ್ಲಿ ನಿಮ್ಮ ದೂರನ್ನು ದಾಖಲಿಸಬಹುದು. ಇಲ್ಲಿ ಮಾಹಿತಿ ಸಂಪೂರ್ಣವಾಗಿ ಗೌಪ್ಯವಾಗಿ ಇಡಲಾಗುತ್ತದೆ.