ರಾಜಕೀಯರಾಜ್ಯ

ಕನಕಪುರದವರು ಸಿಎಂ ಆದ್ರೆ ಮತ್ತಷ್ಟು ಲುಲು ಮಾಲ್ ಸ್ಥಾಪನೆ ಆಗಲಿವೆ; ಡಿಕೆಶಿ ವಿರುದ್ಧ ವ್ಯಂಗ್ಯವಾಡಿದ ಎಚ್‌ಡಿಕೆ

If Kanakapura is CM, more Lulu Mall will be established; HDK sneered at DK

ವರದಿ: ಪ್ರಿಯಲಚ್ಛಿ
ತುಮಕೂರು: ʼಜೈಲಿಗೆ ಹೋಗಿ ಬಂದಿದ್ದೆ ಸಾಧನೆ ಎಂದುಕೊಂಡಿರುವ ಕನಕಪುರದವರೊಬ್ಬರು ಈ ಬಾರಿ ಸಿಎಂ ಆಗುತ್ತೇನೆ, ಕಾಂಗ್ರೆಸ್‌ಗೆ ಮತ ನೀಡಿ ಎನ್ನುತ್ತಿದ್ದಾರೆ, ಅವರು ಸಿಎಂ ಆದರೆ ಮತ್ತಷ್ಟು ಲುಲು ಮಾಲ್ ಸ್ಥಾಪನೆಯಾಗುತ್ತದೆ ಅಷ್ಟೆ. ಅವರ ರಾಜಕೀಯ ಇತಿಹಾಸದಲ್ಲಿ ಎಂದಿಗೂ ಬಡಜನರ ಬಗ್ಗೆ ಚಿಂತನೆ ಮಾಡಿದ್ದೇ ಇಲ್ಲ, ಹೀಗಾಗಿ ಜನರು ಕಾಂಗ್ರೆಸ್‌ಗೆ ಮತ ಹಾಕಿ ಭ್ರಷ್ಟರನ್ನು, ಕೆಟ್ಟವರನ್ನು ಅಧಿಕಾರದಲ್ಲಿ ಕೂರಿಸುವುದರಲ್ಲಿ ಅರ್ಥವಿಲ್ಲʼ ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.

ಶುಕ್ರವಾರ ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಡಾ. ರವಿ ಪರ ಮತಯಾಚನೆ ಮಾಡಿ ಮಾತನಾಡಿದ ಎಚ್‌ಡಿಕೆ, ʼಎರಡೂ ರಾಷ್ಟ್ರೀಯ ಪಕ್ಷಗಳು ಉತ್ತರ ಭಾರತದವರನ್ನು ಸ್ಟಾರ್ ಪ್ರಚಾರಕರೆಂದು ಕರೆತಂದು ಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್ ಪ್ರಾದೇಶಿಕ ಪಕ್ಷ, ನಮಗೆ ರಾಜ್ಯದ ಮತದಾರರೆ ಸ್ಟಾರ್ ಪ್ರಚಾರಕರು, ಕಾಂಗ್ರೆಸ್ ನಮ್ಮ ಪಕ್ಷವನ್ನು ಬಿಜೆಪಿ ಬಿ ಟೀಂ ಎಂತಲೂ, ಬಿಜೆಪಿ ನಮ್ಮ ಪಕ್ಷವನ್ನು ಕಾಂಗ್ರೆಸ್ ಬಿ ಟೀಂ ಎಂತಲೂ ಹೇಳುತ್ತಾರೆ. ಆದರೆ ವಾಸ್ತವವಾಗಿ ಜೆಡಿಎಸ್ ಕರ್ನಾಟಕ ಮತದಾರರು ಹೇಳಿದಂತೆ ಕೇಳುವ ಟೀಂ ಆಗಿದೆ, ರಾಜ್ಯದ ಸ್ವಾಭಿಮಾನ ಕಾಪಾಡಲು, ಬಡ ರೈತರ, ಬಡ ಜನರ ಪರ ಚಿಂತನೆ ಮಾಡುವ ಪಕ್ಷ ಜೆಡಿಎಸ್. ತಾಲೂಕಿನ ಜನರು ಜೆಡಿಎಸ್ ಅಭ್ಯರ್ಥಿಗೆ ಆಶೀರ್ವಾದ ಮಾಡಿ ಮತ ನೀಡಬೇಕುʼ ಎಂದು ಮನವಿ ಮಾಡಿದರು.

ʼತುಮಕೂರು ಜಿಲ್ಲೆ ಜೆಡಿಎಸ್ ಭದ್ರಕೋಟೆಯಾಗಿದ್ದು ಈ ಹಿಂದೆ ದೇವೇಗೌಡರಿಗೆ ಶಕ್ತಿ ತುಂಬಿದ್ದ ಜಿಲ್ಲೆ, ಈ ಬಾರಿ ಕುಣಿಗಲ್ ಸೇರಿದಂತೆ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನದಲ್ಲಿ ಜೆಡಿಎಸ್ ಗೆಲ್ಲಿಸುವ ಮೂಲಕ ದೇವೇಗೌಡರ ಹುಟ್ಟುಹಬಕ್ಕೆ ಕೊಡುಗೆ ನೀಡಬೇಕೆಂದುʼ ಎಂದರು.

ʼನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ಆದರೆ ಸಮ್ಮಿಶ್ರ ಸರ್ಕಾರದ ಪರಿಣಾಮ ಪಕ್ಷದ ಜನಪರ ಯೋಜನೆ ಜಾರಿ ಮಾಡಲು ಆಗಿಲ್ಲ, ಈ ಬಾರಿಯಾದರೂ ಬಹುಮತದ ಜೆಡಿಎಸ್ ಸರ್ಕಾರ ರಚನೆಗೆ ಜೆಡಿಎಸ್ ಬೆಂಬಲಿಸಿ, ಹಿಂದೆ ಜಿಲ್ಲೆಯ 11 ಸ್ಥಾನದ ಪೈಕಿ 10 ಸ್ಥಾನದಲ್ಲಿ ಜೆಡಿಎಸ್ ಗೆಲ್ಲಿಸಿ ಜಿಲ್ಲೆಯ ಜನ ಜೆಡಿಎಸ್‌ಗೆ ಆಶೀರ್ವಾದ ಮಾಡಿದ್ದರು. ಈ ಬಾರಿ ಇತಿಹಾಸ ಮರು ಕಳಿಸಲು ಸಹಕರಿಸಿ. ರೈತರ ಸಾಲ ಮನ್ನಾ ಯೋಜನೆ, ಬಡ ಮಹಿಳೆಯರ ಸ್ತ್ರೀಶಕ್ತಿ ಸಾಲಮನ್ನಾ, ವರ್ಷಕ್ಕೆ ಐದು ಉಚಿತ ಸಿಲಿಂಡರ್, ತಾಲೂಕು ಹಾಗೂ ರಾಜ್ಯದ ಸಮಗ್ರ ನೀರಾವರಿ ಯೋಜನೆ ಅನುಷ್ಠಾನ, ಉಚಿತ ಶಿಕ್ಷಣ, ವೈದ್ಯಕೀಯ ವ್ಯವಸ್ಥೆ, ರೈತರು ಸಾಲ ಮಾಡಿ ಆತ್ಮಹತ್ಯೆ ತಪ್ಪಿಸಲು ಎಕರೆಯೊಂದಕ್ಕೆ ಹತ್ತು ಸಾವಿರದಂತೆ ಸಹಾಯಧನ, ಭೂ ರಹಿತರಿಗೆ ಮಾಸಾಶನ ಇತರೆ ಜನಪರ ಯೋಜನೆ ಅನುಷ್ಠಾನಕ್ಕೆ ಜೆಡಿಎಸ್ ಸರ್ಕಾರ ರಚನೆಯಾಗುವ ನಿಟ್ಟಿನಲ್ಲಿ ಮತದಾರರು ಆಶೀರ್ವಾದ ಮಾಡಬೇಕುʼ ಎಂದರು.

ಜೆಡಿಎಸ್ ಅಭ್ಯರ್ಥಿ ಡಾ.ರವಿ ಮಾತನಾಡಿ, ʼತಾಲೂಕಿನಲ್ಲಿ ಕನಕಪುರದವರು ಬಂದು ತಾಲೂಕಿನ ಜನರ ಸ್ವಾಭಿಮಾನ ಪ್ರಶ್ನಿಸುತ್ತಿದ್ದಾರೆ, ಸಂಸದರು ತಾಲೂಕಿನಲ್ಲಿ ಗಂಡಸರು ಯಾರೂ ಇಲ್ಲ ಎನ್ನುತ್ತಿದ್ದಾರೆ, ಇದು ತಾಲೂಕಿನ ಜನರ, ಮತದಾರರ ಸ್ವಾಭಿಮಾನದ ಪ್ರಶ್ನೆ, ತಾಲೂಕಿನ ಗಂಡಸರು ಏನೆಂದು ಹತ್ತನೆ ತಾರೀಕು ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಿ, ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಬೇಕುʼ ಎಂದರು.

ರಾಜ್ಯ ಉಪಾಧ್ಯಕ್ಷ ಶಫಿ ಅಹಮದ್, ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿದರು, ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ಮುಖಂಡರಾದ ಲೋಕೇಶ, ಹರೀಶ್, ಹರೀಶ ನಾಯಕ, ಜಿಯಾವುಲ್ಲಾ, ಅನ್ಸರ್‌ಪಾಶ, ಹೇಮರಾಜು, ಸುಬಾನ್ ಖುರೇಷಿ, ಲಿಯಾಖತ್, ಪ್ರಕಾಶ್, ಮಹಾದೇವ, ಶಿವಣ್ಣ, ಪ್ರಸನ್ನ, ನಿಖಿಲ್‌ಗೌಡ, ಮನೋಜ, ಮಾರುತಿ, ರಾಘು, ನಾಗರಾಜ, ಸುರೇಶ, ವಸಂತ, ಗಂಗಾಧರ, ರುದ್ರೇಶ ಇತರರು ಇದ್ದರು.

ಇದನ್ನೂ ಓದಿ...

Back to top button
>