ರಾಜ್ಯವಾಹನ

ವಿಮಾನ ಸೇವೆಗೆ ಡಿಜಿಸಿಐನಿಂದ ಗ್ರೀನ್​ ಸಿಗ್ನಲ್

Green signal from DGCI for flight service

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಬಹುದಿನಗಳ ನಿರೀಕ್ಷೆಯಾಗಿದ್ದ ಕಲಬುರಗಿ ವಿಮಾನ ನಿಲ್ದಾಣದಿಂದ ರಾತ್ರಿ ವಿಮಾನ ಸೇವೆ ಆರಂಭಕ್ಕೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ದಿಂದ ಅನುಮತಿ ದೊರೆತಿದೆ.

ಕಲಬುರಗಿ ವಿಮಾನ ನಿಲ್ಧಾಣ ಆರಂಭವಾಗಿ ಮೂರು ವರ್ಷಗಳಾಗಿದ್ದರೂ ಸಹ ಇದುವರೆಗೆ ರಾತ್ರಿ ಸೇವೆ ಆರಂಭವಾಗರಲಿಲ್ಲ. ಇದರಿಂದ ರಾತ್ರಿ ಸಮಯದಲ್ಲಿ ವಿಮಾನಗಳ ಹಾರಾಟ ವ್ಯವಸ್ಥೆಗೆ ತೊಂದರೆಯಾಗಿತ್ತು. ಇದೀಗ ರಾತ್ರಿ ವಿಮಾನ ಹೊರಡುವುದು ಮತ್ತು ಆಗಮನಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳು ಸಿದ್ದವಾಗಿದ್ದು, ತಾಂತ್ರಿಕ ತಂಡ ಇತ್ತೀಚೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ನೈಟ್ ಲ್ಯಾಂಡಿಗ್ ಮತ್ತು ಟೇಕಾಪ್​ಗೆ ಗ್ರೀನ್ ಸಿಗ್ನಲ್ ನೀಡಿತ್ತು. ಇದೀಗ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಬುಧವಾರ ( ಮೇ 17) ರಾತ್ರಿ ಸೇವೆ ಆರಂಭಕ್ಕೆ ಅನುಮತಿ ನೀಡಿರುವುದು ಈ ಭಾಗದ ಜನರಿಗೆ ಅನುಕೂಲವಾಗಲಿದೆ.

ರಾತ್ರಿ ವಿಮಾನ ಹಾರಾಟದಿಂದಾಗುವ ಅನುಕೂಲ
ಕಲಬುರಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ಸೇವೆ ಆರಂಭವಾದರೆ ಜನರಿಗೆ ಅನೇಕ ಅನುಕೂಲತೆಗಳು ಸಿಗಲಿವೆ. ವಿಮಾನಗಳ ಹಾರಾಟ ಸಂಖ್ಯೆ ಹೆಚ್ಚಾಗಲಿದ್ದು, ರಾತ್ರಿ ಸಮಯದಲ್ಲಿ ಕೂಡ ಜನರು ಪ್ರಯಾಣ ಮಾಡಬಹುದು, ಬಂದಿಳಿಯಬಹುದು. ಸದ್ಯ ಮುಂಜಾನೆ ಏಳರಿಂದ ಸಂಜೆ ಆರರವರಗೆ ಮಾತ್ರ ವಿಮಾನಗಳ ಹಾರಾಟಕ್ಕೆ ಅವಕಾಶವಿತ್ತು. ಇನ್ನು ರಾತ್ರಿ ಹೊರಡುವುದು ಮತ್ತು ಬರುವುದರಿಂದ ರೋಗಿಗಳನ್ನು ದಿನದ 24 ಗಂಟೆ ಕೂಡ ಏರ್ ಲಿಪ್ಟ್ ಮಾಡಲು ಅನಕೂಲವಾಗಲಿದೆ. ಈ ಮೊದಲು ಹಗಲೊತ್ತಿನಲ್ಲಿ ಮಾತ್ರ ಏರ್‌ ಲಿಪ್ಟ್ ಮಾಡಲು ಅವಕಾಶವಿತ್ತು.

ಅತ್ಯಗತ್ಯವಾಗಿ ಬೇಕಾಗಿರುವ ರಾತ್ರಿ ಇಳಿಯುವಿಕೆ (ನೈಟ್ ಲ್ಯಾಂಡಿಂಗ್) ಸೌಕರ್ಯದ ಮಂಜೂರಾತಿಯಿಂದಾಗಿ ವಾಣಿಜ್ಯ ಮತ್ತು ಕೈಗಾರಿಕಾ ವಲಯದ ಸದಸ್ಯರು ಹಾಗೂ ಸರಕಾರದ ಅಧಿಕಾರಿಗಳು ಬೆಂಗಳೂರು, ಮುಂಬೈ, ಚೆನೈ, ಗೋವಾ, ದೆಹಲಿಯಂತಹ ನಗರಗಳಿಗೆ ಬೆಳಗ್ಗೆ ಹೊತ್ತಿನಲ್ಲಿ ಪ್ರಯಾಣ ಬೆಳೆಸಿ ಅಂದೇ ದಿನ ರಾತ್ರಿಗೆ ನಗರಕ್ಕೆ ವಾಪಸ್ಸಾಗಲು ಸಹಾಯವಾಗಿದ್ದು, ಪ್ರಯಾಣದ ಸಮಯದ ಉಳಿವಿನಿಂದಾಗಿ ಅವರವರ ಕೆಲಸ ಕಾರ್ಯಗಳಿಗೆ ಅದು ಸಹಕಾರಿಯಾಗಲಿದೆ.

ಮೂರು ಮಾರ್ಗದಲ್ಲಿ ವಿಮಾನ ಹಾರಾಟ
ಇನ್ನು ಸದ್ಯ ಕಲಬುರಗಿ ವಿಮಾನ ನಿಲ್ದಾಣದಿಂದ ಮೂರು ಮಾರ್ಗದಲ್ಲಿ ಮಾತ್ರ ವಿಮಾನಗಳ ಹಾರಾಟ ಸೇವೆಯಿದೆ. ಕಲಬುರಗಿ ಬೆಂಗಳೂರು, ಕಲಬುರಗಿ ಹಿಂಡನ್, ಕಲಬುರಗಿ ತಿರುಪತಿಗೆ ಸ್ಟಾರ್ ಮತ್ತು ಅಲೈನ್ಸ್ ಕಂಪನಿಗಳು ಸೇವೆ ನೀಡುತ್ತಿವೆ. ಇದರ ಜೊತೆಗೆ ಇನ್ನು ಐದು ವಿಮಾನಗಳ ಕಂಪನಿಗೆ ಇಲ್ಲಿಂದ ಸೇವೆ ಆರಂಭಿಸಲು ಮನವಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಲಬುರಗಿ ಸಂಸದ ಡಾ ಉಮೇಶ್ ಜಾಧವ್​​ ಸಂತಸ
ಇಂದು ನಾಗರಿಕ ವಿಮಾನಯಾನ ಸಚಿವಾಲಯದಡಿಯಲ್ಲಿ ಬರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಅಧಿಕೃತವಾಗಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಪೂರ್ಣಗೊಂಡಿದೆ ಎಂದು ಪ್ರಮಾಣೀಕರಿಸದ್ದಾರೆ. ಈ ಸೌಲಭ್ಯದಿಂದ ಮುಂಬರುವ ದಿನಗಳಲ್ಲಿ ಹಲವಾರು ವಿಮಾನಯಾನ ಸಂಸ್ಥೆಗಳು ಕಲ್ಬುರ್ಗಿಯಿಂದ ದೇಶದ ವಿವಿಧ ಕಡೆ ಸೇವೆ ಆರಂಭಿಸುವ ನಿಟ್ಟಿನಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆಯಾಗಿದೆ. ಸುಮಾರು ಎರಡು ವರ್ಷಗಳ ಹಿಂದೆಯೆ ಪೂರ್ಣಗೊಳ್ಳಬೇಕಾಗಿದ್ದ ಈ ಸೌಲಭ್ಯವು ಕೋವಿಡ್ ಹಾಗೂ ಇತರೆ ಕಾರಣಗಳಿಂದ ವಿಳಂಬವಾಗಿತ್ತು. ನಾನು ಇದರ ಬಗ್ಗೆ ಕೇಂದ್ರದ ಸಚಿವರ ಗಮನಕ್ಕೆ ಹಲವಾರು ಬಾರಿ ಲೋಕಸಭೆಯಲ್ಲಿ ಪ್ರಶ್ನೆ ಕೇಳುವ ಮೂಲಕ ಹಾಗೂ ಲಿಖಿತವಾಗಿ ಪತ್ರ ಬರೆಯುವ ಮೂಲಕ ತಂದಿದ್ದೆ ಅದರ ಪ್ರತಿಫಲವಾಗಿ ಇಂದು ನೈಟ್ ಲ್ಯಾಂಡಿಂಗ್ ಸೌಲಭ್ಯ ಪೂರ್ಣಗೊಂಡಿದೆ ಎಂದು ಕಲಬುರ್ಗಿ ಸಂಸದ ಡಾ ಉಮೇಶ್ ಜಾಧವ್​ ಸಂತಸ ವ್ಯಕ್ತಪಡಿಸಿದ್ದಾರೆ.

ಕೆಕೆಸಿಸಿಐ ಒತ್ತಾಯ
ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಕಲಬುರಗಿಯಿಂದ ತಿರುಪತಿ, ಹೈದರಾಬಾದ್ ಮತ್ತು ಸುರತ್ ಮಾರ್ಗವಾಗಿ‌ ಅಹಮದಾಬಾದ್ ನಗರಕ್ಕೆ ಹೊಸ ವಿಮಾನಯಾನ‌ ಆರಂಭಿಸಬೇಕೆಂದು ಹಾಗೂ ಕಲಬುರಗಿ ವಿಮಾನ ನಿಲ್ದಾಣದಿಂದ ಕಾರ್ಗೋ ಹ್ಯಾಂಡ್ಲಿಂಗ್ ಸೌಕರ್ಯ ಮಂಜೂರಿಸಬೇಕೆಂದು ಕೆಕೆಸಿಸಿಐ ಒತ್ತಾಯಿಸಿದೆ..

ಇದನ್ನೂ ಓದಿ...

Back to top button
>