ದಂಪತಿ ಒಂದೇ ಮನೆಯಲ್ಲಿದ್ದ ಕಾರಣಕ್ಕೆ ವಿಚ್ಛೇದನ ನಿರಾಕರಿಸುವಂತಿಲ್ಲ : ಹೈಕೋರ್ಟ್
Divorce cannot be denied because the couple was in the same house: High Court
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಅರ್ಜಿಯನ್ನು ಆಲಿಸಿದ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಆದೇಶವನ್ನು ಹೊರಡಿಸಿದೆ.
ಬೆಂಗಳೂರು : ದಂಪತಿ ಒಂದೇ ಮನೆಯಲ್ಲಿ ನೆಲೆಸಿದ್ದಾರೆ ಎಂಬ ಕಾರಣ ನೀಡಿ ವಿಚ್ಛೇದನ ನಿರಾಕರಿಸುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪರಸ್ಪರ ಒಪ್ಪಿಗೆಯ ವಿಚ್ಛೇದನ ನೀಡುವಂತೆ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹಾಗೂ ವಿಚ್ಛೇದನ ಕೋರಿ ದಂಪತಿ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿ ಆಲಿಸಿದ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ದಂಪತಿ ಪರಸ್ಪರ ಸಮ್ಮತಿಯ ವಿಚ್ಛೇದನಕ್ಕೆ ಒಪ್ಪಿದ್ದರೆ, ಆಂತಹ ಸಂದರ್ಭದಲ್ಲಿ ಅವರು ಒಂದೇ ಮನೆಯಲ್ಲಿ ನೆಲೆಸಿದ್ದಾರೆಂದು ಅವರ ವಿಚ್ಛೇದನಕ್ಕೆ ಅನುಮತಿ ನೀಡುವುದನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಆದೇಶ ನೀಡಿದೆ. ಜೊತೆಗೆ ಕೌಟುಂಬಿಕ ನ್ಯಾಯಾಲಯ 2022ರ ಅ. 15ರಂದು ಹೊರಡಿಸಿದ್ದ ಆದೇಶವನ್ನು ನ್ಯಾಯಪೀಠ ರದ್ದುಗೊಳಿಸಿದೆ. ಹಾಗು ಹೊಸದಾಗಿ ವಿಚಾರಣೆ ನಡೆಸಿ ರಾಜೀ ಅರ್ಜಿಯ ನಿಯಮಗಳಿಗೆ ಅನುಗುಣವಾಗಿ ಮಧ್ಯಸ್ಥಿಕೆದಾರರ ಸಮಕ್ಷಮದಲ್ಲಿ ಆದಷ್ಟು ಶೀಘ್ರ ಹೊಸದಾಗಿ ಆದೇಶ ನೀಡುವಂತೆ ಸೂಚನೆ ನೀಡಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ ವೈಮನಸ್ಯ ಹೊಂದಿದ ದಂಪತಿ ಸಾಮಾನ್ಯವಾಗಿ ಕಿತ್ತಾಡಿಕೊಳ್ಳುತ್ತಾರೆ. ವೈಮನಸ್ಯ ಇದ್ದರೂ ಒಂದೇ ಮನೆಯಲ್ಲಿರುವುದು ಅವರ ಸುಸಂಸ್ಕೃತಿ ತೋರುತ್ತದೆ. ಅದರೆ ಅವರು ಒಂದೇ ಮನೆಯಲ್ಲಿ ವಾಸವಿರುವ ಕಾರಣಕ್ಕೆ ವಿಚ್ಛೇದನ ನಿರಾಕರಿಸುವಂತಿಲ್ಲ. ಈ ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯ ತಪ್ಪೆಸಗಿದೆ ಎಂದು ಪೀಠ ತಿಳಿಸಿದೆ. ದಂಪತಿ ಪರಸ್ಪರ ವಿಚ್ಛೇದನಕ್ಕೆ ಒಪ್ಪಿದ್ದರೂ ಅದಕ್ಕೆ ಅನುಮತಿ ನೀಡದೆ ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸುವ ಮೂಲಕ ಮೇಲ್ನೋಟಕ್ಕೆ ಪ್ರಮಾದ ಎಸಗಿದೆ. ಹಾಗಾಗಿ ಆ ಕುರಿತ ಆದೇಶವನ್ನು ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು ? : ದಂಪತಿ ಇಬ್ಬರೂ ಪರಸ್ಪರ ಸಮ್ಮತಿಯ ಮೇರೆಗೆ ವಿವಾಹ ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿ ಪ್ರಕರಣವನ್ನು ಮಧ್ಯಸ್ಥಿಕೆಗೆ ವಹಿಸಿದ್ದಾಗಲೂ ಅವರು ಪರಸ್ಪರ ಸ್ವಂತ ಇಚ್ಛೆಯಿಂದ ದೂರವಾಗುತ್ತಿರುವುದಾಗಿ ಹೇಳಿದ್ದರು. ಆ ಕುರಿತಂತೆ 2023 ರ ಜ. 2 ರಂದು ಒಪ್ಪಿ ಮಧ್ಯಸ್ಥಿಕೆದಾರರ ಸಮಕ್ಷಮದಲ್ಲಿ ರಾಜೀ ಸಂಧಾನ ಅರ್ಜಿಯನ್ನೂ ಸಹ ಸಲ್ಲಿಸಿದ್ದರು.
ಆದರೆ, ಕೌಟುಂಬಿಕ ನ್ಯಾಯಾಲಯವು ದಂಪತಿ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಆದ ಕಾರಣಕ್ಕೆ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿಯನ್ನು ನಿರಾಕರಿಸಿತ್ತು. ಪ್ರಶ್ನಿಸಿ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ನ್ಯಾಯಪೀಠ ಅರ್ಜಿಯನ್ನು ಮತ್ತೊಮ್ಮೆ ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸುವಂತೆ ಸೂಚನೆ ನೀಡಿದ್ದು, ದಂಪತಿ ಸಲ್ಲಿಸಿದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ರವಾನಿಸಿದೆ.