ರಾಜ್ಯ

ಹೆಡ್ಗೇವಾರ್, ಸಾವರ್ಕರ್ ಕುರಿತಾದ ಪಠ್ಯ ಹಿಂತೆಗೆತ.. ಶಾಲಾ, ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದಲು ತೀರ್ಮಾನ

Withdrawal of text on Hedgewar, Savarkar.. Decision to read preamble of constitution in schools and colleges

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗಿದ್ದು, ಸದ್ಯ 6 ರಿಂದ 10ನೇ ತರಗತಿಯವರೆಗೆ ಸಪ್ಲಿಮೆಂಟರಿ ಪುಸ್ತಕ ಕೊಡುವ ಬಗ್ಗೆ ಸಂಪುಟವು ಒಪ್ಪಿಗೆ ನೀಡಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಹೆಡ್ಗೇವಾರ್, ಸಾವರ್ಕರ್ ಕುರಿತಾದ ಪಾಠ ತೆಗೆಯಲಾಗಿದೆ: ಸಚಿವ ಮಧು ಬಂಗಾರಪ್ಪ
ಬೆಂಗಳೂರು:​ ಸರ್ಕಾರವು ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದು, ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡ್ಗೇವಾರ್‌, ಹಿಂದೂ ಮಹಾಸಭಾ ಮುಖಂಡ ವಿ.ಡಿ ಸಾವರ್ಕರ್‌ ಹಾಗೂ ಚಿಂತಕ ಸೂಲಿಬೆಲೆ ಚಕ್ರವರ್ತಿ ಕುರಿತಾದ ಪಾಠ ತೆಗೆಯಲು ತೀರ್ಮಾನಿಸಿದೆ.

ಈ ಹಿಂದಿನ ಬಿಜೆಪಿ ಸರ್ಕಾರ ಶಾಲಾ ಪಠ್ಯದಲ್ಲಿ ಸೇರಿಸಿದ್ದ ಆರ್‌ಎಸ್‌ಎಸ್‌ ಮುಖಂಡ ಹೆಡ್ಗೇವಾರ್‌, ಹಿಂದೂ ಮಹಾಸಭಾ ಮುಖಂಡ ವಿ.ಡಿ ಸಾವರ್ಕರ್‌ ಹಾಗೂ ಚಿಂತಕ ಸೂಲಿಬೆಲೆ ಚಕ್ರವರ್ತಿಯವರ ಪಠ್ಯವನ್ನು ಕೈಬಿಡಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಸಚಿವ ಸಂಪುಟ ಸಭೆ ನಂತರ ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ಹಿಂದೆ ಇದ್ದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಸಾವಿತ್ರಿ ಪುಲೆ ಅವರ ವಿಷಯವನ್ನು ತೆಗೆದಿತ್ತು, ಅದನ್ನು ಮರಳಿ ಸೇರಿಸಲಾಗಿದೆ. ನೀ ಹೋದ ಮರುದಿನ ಅಂಬೇಡ್ಕರ್ ಅವರ ಬಗೆಗಿನ ಕವನ, ಮಗಳಿಗೆ ಬರೆದ ಪತ್ರ ಎಂಬ ನೆಹರೂ ಅವರದ್ದನ್ನೂ ಸಹ ಮರಳಿ ಸೇರಿಲಾಗುತ್ತಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ರಾಜಪ್ಪ ದಳವಾಯಿ, ರಮೇಶ್ ಕುಮಾರ್, ಪಿ.ಆರ್. ಚಂದ್ರಶೇಖರ್, ಅಶ್ವತ್ಥನಾರಾಯಣ ಹಾಗೂ ರಾಜೇಶ್ ಸೇರಿದಂತೆ ಐದು ಮಂದಿಯ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ. ಈ ಸಮಿತಿ ಮುಂದಿನ ದಿನಗಳಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ವರದಿ ನೀಡಲಿದೆ ಎಂದರು.

ಸಾಹಿತಿಗಳೆಲ್ಲ ಹೇಳಿದಾಗ ಈ ಹಿಂದಿನ ಪಠ್ಯದಲ್ಲಿದ್ದ ವಿಚಾರಗಳ ಕುರಿತಂತೆ 45 ಬದಲಾವಣೆಗಳನ್ನು ಮಾಡಲು ಯೋಚಿಸಲಾಗಿತ್ತು. ಪದಗಳು, ವಾಕ್ಯಗಳ ಬದಲಾವಣೆ ಹಾಗೂ ಚಾಪ್ಟರ್​ ಬಗ್ಗೆ ಬದಲಾವಣೆ ಮಾಡುವ ಅಗತ್ಯವಿತ್ತು. ಆದರೆ ಪ್ರಿಂಟ್​ ಆಗಿರುವ ಹಿನ್ನೆಲೆಯಲ್ಲಿ ಬದಲಾವಣೆ ಮಾಡಲು ತಾಂತ್ರಿಕವಾಗಿ ಸಮಸ್ಯೆ ಇದೆ. ಹೀಗಾಗಿ ಈ ಬಾರಿ 6 ರಿಂದ 10 ನೇ ತರಗತಿಯವರೆಗೆ ಸಪ್ಲಿಮೆಂಟರಿ ಪುಸ್ತಕ ಕೊಡುವ ಬಗ್ಗೆ ಸಂಪುಟವು ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

6ರಿಂದ ರಿಂದ 10ನೇ ತರಗತಿ ವರೆಗಿನ ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ ಹಿಂದಿನ ಸರ್ಕಾರ ಮಾಡಿದ್ದ ಕೆಲವು ಬದಲಾವಣೆಗಳನ್ನು ಕೈಬಿಡಲಾಗುವುದು. ಪ್ರಸಕ್ತ ಸಾಲಿನ ಪಠ್ಯ ಪುಸ್ತಕ ಈಗಾಗಲೇ ಮುದ್ರಣವಾಗಿದ್ದು, ರಾಜ್ಯದ ಎಲ್ಲ ಶಾಲೆಗಳಿಗೆ ತಲುಪಿದೆ. ಹೀಗಾಗಿ ಆ ಪಠ್ಯಪುಸ್ತಕಗಳನ್ನು ವಾಪಸ್ ತರಿಸಲು ಸಾಧ್ಯವಿಲ್ಲ. ಹಾಗೇನಾದರೂ ಮಾಡಲು ಹೋದರೆ ಕೋಟ್ಯಾಂತರ ರೂಪಾಯಿ ವೆಚ್ಚವಾಗುತ್ತದೆ. ಹೀಗಾಗಿ ಮುಂದಿನ ಎರಡು ವಾರಗಳಲ್ಲಿ ಸಪ್ಲಿಮೆಂಟರಿ ಹೊತ್ತಿಗೆಯೊಂದನ್ನು ಎಲ್ಲ ಶಾಲೆಗಳಿಗೆ ರವಾನಿಸಿ, ಮಕ್ಕಳ ಹಿತದೃಷ್ಟಿಯಿಂದ ಈಗಿರುವ ಪಠ್ಯದಲ್ಲಿ ಯಾವುದನ್ನು ಮಕ್ಕಳಿಗೆ ಭೋಧಿಸಬಾರದು ಮತ್ತು ಯಾವುದನ್ನು ಭೋಧಿಸಬೇಕು ಎಂಬುದರ ಬಗ್ಗೆ ಸೂಚಿಸುತ್ತೇವೆ. ಈಗ ಯಾವ್ಯಾವ ಪಠ್ಯವನ್ನು ತೆಗೆದುಹಾಕಬೇಕು, ಯಾವ್ಯಾವ ಪಠ್ಯವನ್ನು ಸೇರಿಸಬೇಕು ಎಂದು ತೀರ್ಮಾನಿಸಿದ್ಧೇವೋ? ಆ ಕುರಿತ ಮಾಹಿತಿ ಸಪ್ಲಿಮೆಂಟರಿ ಹೊತ್ತಿಗೆಯಲ್ಲಿ ಇರಲಿದೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಸರ್ಕಾರ ತನ್ನ ಉದ್ದೇಶದಷ್ಟು ತಿದ್ದುಪಡಿ ಮಾಡಲು ಹೆದರಿಕೊಂಡಿದ್ದರಿಂದ, ಶೇ.75ರಷ್ಟು ಉದ್ದೇಶಿತ ಪಠ್ಯಗಳನ್ನು ಅಳವಡಿಸಿರಲಿಲ್ಲ. ಅದು ಅಳವಡಿಸಿರುವ ಪಠ್ಯವನ್ನು ನಾವು ಉಳಿಸಿಕೊಳ್ಳಲು ಬಯಸುವುದಿಲ್ಲ. ಇನ್ನು 10-15 ದಿನಗಳಲ್ಲಿ ಪಠ್ಯ ಪುಸ್ತಕ ಸಮಿತಿಯನ್ನು ರಚನೆ ಮಾಡಲಾಗುವುದು. ಮಕ್ಕಳ ಹಿತದೃಷ್ಟಿಯಿಂದ ಎಲ್ಲಾ ವಿಚಾರಗಳನ್ನು ಪರಿಷ್ಕರಣೆಗೆ ಒಳಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಶಾಲಾ, ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದಲು ಜಾರಿ : ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆ ಓದುವುದನ್ನು ಜಾರಿಗೆ ತರಲು ಇಂದು ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸಚಿವ ಸಂಪುಟ ಸಭೆಯ ನಂತರ ಈ ವಿಷಯ ತಿಳಿಸಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್. ಮಹದೇವಪ್ಪ ಅವರು, ಖಾಸಗಿ, ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಲ್ಲೂ ಸಂವಿಧಾನದ ಪೀಠಕೆ ಓದಬೇಕು, ಈ ಸಂಬಂಧ ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಾಗುವುದು ಎಂದು ತಿಳಿಸಿದರು.

ಪ್ರತಿಯೊಬ್ಬರೂ ಪರಸ್ಪರ ಸಮಾನತೆ, ಪ್ರೀತಿ, ಸೋದರತ್ವದಿಂದ ಇರಬೇಕು ಎಂಬ ಉದ್ದೇಶದಿಂದ ಸಂವಿಧಾನದ ಪೀಠಿಕೆಯನ್ನು ಓದುವುದನ್ನು ಜಾರಿಗೆ ತರುತ್ತಿದ್ದೇವೆ. ಇದರಿಂದ ನೈತಿಕತೆಯ ಮಟ್ಟ ಹೆಚ್ಚಾಗುವುದಲ್ಲದೆ, ಎಲ್ಲಾ ಜಾತಿ, ಧರ್ಮವನ್ನು ಸಮಾನ ದೃಷ್ಟಿಯಿಂದ ಕಾಣುವಂತಾಗುತ್ತದೆ. ಪ್ರತಿ ದಿನ ಕಡ್ಡಾಯವಾಗಿ ಓದಬೇಕು. ಅದೇ ರೀತಿ ಗ್ರಾಪಂ, ತಾಪಂ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನದ ಪೀಠಿಕೆಯ ಫೋಟೊವನ್ನು ಹಾಕಬೇಕು ಎಂದು ಹೇಳಿದರು.

ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆ ರದ್ದು : ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ರದ್ದು ಮಾಡಲು ಸಚಿವ ಸಂಪುಟ ಸಭೆ ತೀರ್ಮಾನ ಮಾಡಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ ತಿಳಿಸಿದರು. ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ಹಕ್ಕು ಕಾಯ್ದೆಯ ಹಿಂದಿನ ತಿದ್ದುಪಡಿ ವಾಪಸ್ ಪಡೆದು, ಜುಲೈ 3ರಿಂದ ಆರಂಭವಾಗುವ ಅಧಿವೇಶನದಲ್ಲಿ ಬಿಲ್ ಮಂಡಿಸಲಾಗುತ್ತದೆ ಎಂದು ಹೇಳಿದರು. ಇದೇ ವೇಳೆ, ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಎಪಿಎಂಸಿ ಕಾಯ್ದೆ ವಿಚಾರದಲ್ಲಿ ಕೇಂದ್ರ ಇಟ್ಟುಕೊಂಡ ಉದ್ದೇಶ ಸಾಬೀತಾಗಿಲ್ಲ. ಎಪಿಎಂಸಿ ವಹಿವಾಟು 600 ಕೋಟಿಯಿಂದ ನೂರು ಕೋಟಿಗೆ ಬಂದಿದೆ. ಸಂಪುಟ ಸಭೆಯಲ್ಲಿ ಈ ಕಾನೂನು ಹಿಂಪಡೆಯಲು ಒಪ್ಪಿಗೆ ಪಡೆಯಲಾಗಿದೆ ಎಂದರು.

ಇದನ್ನೂ ಓದಿ...

Back to top button
>