ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತಾಂತರವನ್ನು ನಿಷೇಧಗೊಳಿಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದರು. ಈ ತಿದ್ದುಪಡಿಯನ್ನು ರದ್ದುಪಡಿಸಲು ಇಂದು ನಡೆದ ಸಚಿವ ಸಂಫುಟ ಸಭೆ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್. ಕೆ. ಪಾಟೀಲ್ ತಿಳಿಸಿದರು.
ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2023ಕ್ಕೆ ಸಂಪುಟ ಅನುಮೋದನೆ ನೀಡಿದೆ. ಈ ಕಾಯ್ದೆಗೆ 2020-22ರಲ್ಲೇ ತಂದಿದ್ದ ತಿದ್ದುಪಡಿಯನ್ನು ರದ್ದುಪಡಿಸಲಾಗುವುದು ಎಂದು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆಯನ್ನು ಜಾರಿ ತರಲಾಗಿತ್ತು. ಈ ಸಂದರ್ಭದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೂ, ಹಿಂದಿನ ಸರ್ಕಾರ ಅಧಿವೇಶನದಲ್ಲಿ ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿ ಪಾಸ್ ಮಾಡಿಕೊಂಡಿತ್ತು. ಆದರೆ, ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಅಧಿಕಾರಕ್ಕೆ ಬಂದ ಒಂದು ತಿಂಗಳ ಮುನ್ನವೇ ಬಿಜೆಪಿ ಜಾರಿ ಮಾಡಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಿದೆ.
ಕೆಪಿಎಸ್ಸಿಗೆ ಸದಸ್ಯರ ನೇಮಕ, ಸಿಎಂಗೆ ಅಧಿಕಾರ : ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ ಸಿ) ಖಾಲಿ ಇರುವ ಮೂರು ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿಗಳಿಗೆ ಅನುಮತಿ ನೀಡಲಾಗಿದೆ. ರಾಜ್ಯ ಹೈಕೋರ್ಟ್‍ನ ಆಡಳಿತ ವೆಚ್ಚ ಮಿತಿಗೆ ಸಂಬಂಸಿದಂತೆ ಹಣಕಾಸು ಅಧಿಕಾರ ಹೆಚ್ಚಳ ಮಾಡಲು ಮತ್ತು ಹೆಚ್ಚಿನ ಅಧಿಕಾರಿಗಳ ನಿಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಡಾ. ಮೈತ್ರಿ ಎಂಬುವರು ಕೆಎಎಸ್ ಜೂನಿಯರ್ ಹುದ್ದೆಗೆ ಮನವಿ ಮಾಡಿದ್ದು, 2011ರ ಕೆಎಎಸ್ ನೇಮಕಾತಿಗೆ ಸಂಬಂಸಿದಂತೆ ಕಾನೂನು ಇಲಾಖೆಗೆ ವರ್ಗಾವಣೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಬೆಂಗಳೂರು ಟೆಕ್ ಸಮ್ಮಿಟ್ ನಡೆಸಲು ಹಾಗೂ ಅದಕ್ಕೆ ತಗಲುವ ವೆಚ್ಚ 17.9 ಕೋಟಿ ರೂ.ಗೆ ಒಪ್ಪಿಗೆ ನೀಡಲಾಗಿದೆ. ವೃಷಭಾವತಿ ನದಿಯ ನೀರನ್ನು 70 ಕೆರೆಗಳಿಗೆ ತುಂಬಿಸುವ ಪರಿಷ್ಕೃತ ಯೋಜನೆಗೆ ಒಪ್ಪಿಗೆ ನೀಡಲಾಯಿತು. 1,081 ಕೋಟಿ ರೂ. ವೆಚ್ಚದಲ್ಲಿ 243 ಎಂಎಲ್‍ಡಿ ನೀರನ್ನು ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ ಕೆರೆಗಳ ಭರ್ತಿ ಮಾಡಲು ಯೋಜನೆ ರೂಪಿಸಲಾಗಿದೆ. ಸಂಸದೀಯ ವ್ಯವಹಾರಗಳ ಇಲಾಖೆಯ ಅನರ್ಹತೆ ಕಾಯ್ದೆ ತಿದ್ದುಪಡಿ ಮಾಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ನೈಸರ್ಗಿಕ ವಿಕೋಪ ನಿರ್ವಹಣೆ ಸಂಬಂಧ ನಿರ್ದೇಶನ ನೀಡಲು ಸಚಿವ ಸಂಪುಟ ಉಪ ಸಮಿತಿ ರಚಿಸಲು ಒಪ್ಪಿಗೆ ನೀಡಲಾಗಿದೆ. ಸಾರಿಗೆ ನಿಗಮಗಳಿಂದ ವಾಹನ ತೆರಿಗೆ ಬಾಕಿ 79.85 ಕೋಟಿ ರೂ. ಇದ್ದು, ಅದಕ್ಕೆ ವಿನಾಯಿತಿ ನೀಡಲಾಗಿದೆ. ಈ ಹಣವನ್ನು ಸರ್ಕಾರವೇ ತುಂಬಿಕೊಡಲಿದೆ. ಅಲ್ಲದೆ, 10 ಡಬಲ್ ಡೆಕ್ಕರ್ ಬಸ್ ಖರೀದಿಗೆ 28.13 ಕೋಟಿ ರೂ. ನೀಡಲು ಒಪ್ಪಿಗೆ ಹಾಗೂ ಸಾರಿಗೆ ನಿಗಮಗಳ ಸಿಬ್ಬಂದಿಯ ವೇತನವನ್ನು ಶೇ.15ರಷ್ಟು ಹೆಚ್ಚಿಸಲು ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಎಪಿಎಂಸಿ ಕಾಯ್ದೆ ರದ್ದುಪಡಿಸಲು ತೀರ್ಮಾನ : ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಸಂಪುಟ ಸಭೆ ನಂತರ ಮಾಧ್ಯಮಗೋಷ್ಟಿಯಲ್ಲಿ ಸಚಿವ ಶಿವಾನಂದ ಪಾಟೀಲ್ ಮಾಹಿತಿ ನೀಡಿದರು. ಹಿಂದಿನ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿತ್ತು. ಆದರೆ ಈ ತಿದ್ದುಪಡಿಯಿಂದ ರೈತರಿಗೆ ಹಾನಿ ಹಾಗೂ ಹಮಾಲರಿಗೆ ಸಮಸ್ಯೆಯಾಯಿತು. ಹೀಗಾಗಿ ಈ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಲು ತೀರ್ಮಾನಿಸಿದ್ದೇವೆ ಎಂದರು.
ಈ ತಿದ್ದುಪಡಿಯಿಂದ ಮಾರುಕಟ್ಟೆಗೆ ತುಂಬ ಅನುಕೂಲವಾಗುತ್ತದೆ ಎಂದು ಬಿಜೆಪಿ ಸರ್ಕಾರ ಹೇಳಿತ್ತು. ಆದರೆ ಅವರು ಕಾಯ್ದೆಗೆ ತಿದ್ದುಪಡಿ ಮಾಡುವ ಕಾಲದಲ್ಲಿ 670 ಕೋಟಿ ರೂಪಾಯಿಗಳಷ್ಟಿದ್ದ ಕೃಷಿ ಮಾರುಕಟ್ಟೆಗಳ ಲಾಭ ಈಗ 200 ಕೋಟಿ ರೂಪಾಯಿಗಳಿಗೂ ಕಡಿಮೆಯಾಗಿದೆ. ಹೀಗಾಗಿ ರಾಜ್ಯದ ಕೃಷಿ ಮಾರುಕಟ್ಟೆಗಳಿಗೆ ಹಿಂದಿನ ಶಕ್ತಿ ದೊರಕಿಸಿಕೊಡಲು ಸದರಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಲು ತೀರ್ಮಾನಿಸಿದ್ದೇವೆ. ಮತ್ತು ಪ್ರಾಂಗಣದೊಳಗೆ ಕೃಷಿ ವಸ್ತುಗಳನ್ನು ಮಾರಾಟ ಮಾಡಬೇಕು ಎಂಬ ಅಂಶವನ್ನು ತೆಗೆದು ಮಾರುಕಟ್ಟೆ ವ್ಯಾಪ್ತಿಯಲ್ಲಿ ಎಲ್ಲಿ ಬೇಕಾದರೂ ರೈತರು ಮಾರಾಟ ಮಾಡಬಹುದು ಎಂದು ಸೇರಿಸಲಾಗಿದೆ ಎಂದು ವಿವರಿಸಿದರು.
ಹಿಂದಿನ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದ ರೈತರಿಗಾಗಲಿ, ವರ್ತಕರಿಗಾಗಲಿ ಅನುಕೂಲವಾಗಲಿಲ್ಲ. ರೈತರಿಗೂ ಒಳ್ಳೆಯ ಬೆಲೆ ಸಿಗಲಿಲ್ಲ. ಎಪಿಎಂಸಿ ಆದಾಯ ವರ್ಷದಿಂದ ವರ್ಷಕ್ಕೆ ಇಳಿಮುಖವಾಗಿದೆ. ಹೀಗಾಗಿ ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸಿ ಮೂಲ ಕಾಯ್ದೆಯನ್ನು ಸುಧಾರಿತ ರೂಪದಲ್ಲಿ ತಿದ್ದುಪಡಿ ತಂದು ಜುಲೈ ಅಧಿವೇಶನದಲ್ಲಿ ಮಂಡಿಸಲಾಗುವುದು. ಕಾಯ್ದೆಯಲ್ಲಿ ನಾಲ್ಕು ಪ್ರಮುಖ ಬದಲಾವಣೆ ಮಾಡಲಾಗಿದೆ. ಮಾರುಕಟ್ಟೆಯ ಪ್ರಾಂಗಣದಲ್ಲಿ ನಡೆಯುವ ವಹಿವಾಟಿಗೆ ವಿಧಿಸುವ ಶುಲ್ಕವೇ ಎಪಿಎಂಸಿ ವ್ಯಾಪ್ತಿಯಲ್ಲಿ ನಡೆಯುವ ವಹಿವಾಟಿಗೂ ಅನ್ವಯವಾಗಲಿದೆ ಎಂದು ಸಚಿವ ಶಿವಾನಂದ ಪಾಟೀಲ್ ವಿವರಿಸಿದರು.