ರಾಜಕೀಯರಾಜ್ಯ

ಮನೆ ಯಜಮಾನಿಗೆ 2 ಸಾವಿರ ರೂ. ಸಿಗುವುದು ಇನ್ನೂ ವಿಳಂಬ; ಗೃಹ ಲಕ್ಷ್ಮಿ ಯೋಜನೆ ನಾಲ್ಕೈದು ದಿನಕ್ಕೆ ಮುಂದೂಡಿದ ಸರ್ಕಾರ

2 thousand for the house owner. There is still a delay in getting it; The government has postponed Griha Lakshmi Yojana for four to five days

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು: ಚುನಾವಣೆ ವೇಳೆ ಘೋಷಿಸಿದಂತೆ ಕಾಂಗ್ರೆಸ್‌ ಸರ್ಕಾರ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳಿಗೆ ರೂ. 2000 ನೀಡುವ ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಯೋಜನೆಗೆ ನಾಳೆಯಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ, ಕೆಲವು ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ನಾಲ್ಕೈದು ದಿನ ವಿಳಂಬವಾಗುವ ಸಾಧ್ಯತೆ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ವಿಧಾನಸೌಧಸಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ಬಳಿಕ ಸ್ಪಷ್ಟನೆ ನೀಡಿದ ಅವರು, “ಕಾಂಗ್ರೆಸ್​ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆ ಬಗ್ಗೆ ಕ್ಯಾಬಿನೆಟ್​ ಮೀಟಿಂಗ್​ನಲ್ಲಿ ಚರ್ಚೆ ಮಾಡಲಾಗಿದೆ. ಹಿರಿಯ ಸಚಿವರು ಮತ್ತು ಅಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಳೆ (ಜೂನ್​ 15) ಈ ಯೋಜನೆಯನ್ನು ಲೋಕಾರ್ಪಣೆ ಮಾಡಲು ಸರ್ಕಾರ ಎಲ್ಲ ರೀತಿಯಿಂದಲೂ ಸಜ್ಜಾಗಿತ್ತು. ಸಾಂಕೇತಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಕ್ತಿ ಭವನದಲ್ಲಿ ಸೇವಾ ಸಿಂಧು ವೆಬ್​​ಸೈಟ್ ಲಾಂಚ್ ಮಾಡುವವರಿದ್ದರು. ಆದರೆ, ಕೆಲವು ಕಾರಣಾಂತರಗಳಿಂದ ಅರ್ಜಿ ಸಲ್ಲಿಕೆಗೆ ನಾಲ್ಕೈದು ದಿನ ವಿಳಂಬವಾಗುವ ಸಾಧ್ಯತೆ ಇದೆ” ಎಂದರು.

“ನಾವು ಈಗಾಗಲೇ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಮೂಲಕ ಭೌತಿಕವಾಗಿ ಕೂಡ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದೆವು. ಆದರೆ, ಜನಸಾಮಾನ್ಯರಿಗೆ ಇದರಿಂದ ಬಹಳ ತೊಂದರೆಯಾಗುತ್ತದೆ ಎಂಬುದನ್ನು ಅಧಿಕಾರಿಗಳು ಹಾಗೂ ಸಚಿವರು ತಿಳಿಸಿದ್ದಾರೆ. ನಾಡಕಚೇರಿ, ಬಾಪುಜಿ ಸೇವಾ ಕೇಂದ್ರದಲ್ಲಿಯೂ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲು ತೀರ್ಮಾನ ಮಾಡಲಾಗಿದೆ. ಈ ಯೋಜನೆಯಿಂದ 1.28 ಕೋಟಿ ಜನರಿಗೆ ಅನುಕೂಲವಾಗಲಿದೆ. ಫಲಾನುಭವಿಗಳು ಅರ್ಜಿ ಸಲ್ಲಿಸುವಿಕೆಯ ಒತ್ತಡ ಹೆಚ್ಚಾಗಲಿದೆ ಎಂಬ ಸಲಹೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತು ಯೋಜನೆ ಇನ್ನೂ ಸ್ವಲ್ಪ ಸರಳವಾಗಿ ದೊರೆಯಲಿ ಎಂಬ ಸದುದ್ದೇಶದಿಂದ ನಾಲ್ಕೈದು ದಿನ ವಿಳಂಬವಾಗಲಿದೆ”.

“ಗೃಹ ಲಕ್ಷ್ಮಿ ಯೋಜನೆಗೆ ಆನ್‍ಲೈನ್ ಹಾಗೂ ಆಫ್‍ಲೈನ್ ಎರಡಕ್ಕೂ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇ-ಗವರ್ನರ್ಸ್​ಗೆ ಆಯಪ್ ವಿನ್ಯಾಸ ಮಾಡಿಕೊಡುವಂತೆ ನಮ್ಮ ಇಲಾಖೆ ವತಿಯಿಂದ ಈ ಮೊದಲೇ ಕೇಳಿಕೊಂಡಿದ್ದೆವು. ಅವರು ನಾಲ್ಕೈದು ದಿನ ಸಮಯಾವಕಾಶ ಕೇಳಿಕೊಂಡಿದ್ದಾರೆ. ಅರ್ಜಿ ಹಾಕುವ ಮಹಿಳೆಯರಿಗೆ ತೊಂದರೆಯಾಗಬಾರದು. ಅಂತಹ ಸರಳ ಆಯಪ್ ವಿನ್ಯಾಸಗೊಳ್ಳಬೇಕಿದೆ. ಇಂದು ಸಂಜೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಈ ಸಂಬಂಧ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಯ ದಿನಾಂಕ ನಿಗದಿಯಾಗಲಿದೆ. ಈ ಯೋಜನೆಯನ್ನು ಆದಷ್ಟು ಬೇಗ ತರಲು ಸತತವಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಇನ್ನು ಸಚಿವ ಸಂಪುಟ ಸಭೆಗೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್, “ಶುಭ ಶುಕ್ರವಾರ ಎಂಬಂತೆ ನಾಳೆಯಿಂದ ಈ ಯೋಜನೆಯನ್ನು ಲೋಕಾರ್ಪಣೆ ಮಾಡಲು ಸರ್ಕಾರ ಸಜ್ಜಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಉಚಿತವಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಕೊನೆಯ ದಿನಾಂಕ ನಿಗದಿ ಮಾಡಿಲ್ಲ. ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಮನೆಯ ಯಜಮಾನಿ ಶಕ್ತಿಶಾಲಿಯಾಗುತ್ತಾಳೆ. ಆಗ ಸಮಾಜದ ಶಕ್ತಿ ವೃದ್ಧಿಯಾಗುತ್ತದೆ. ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್​ನವರಿಗೆ ಈ ಯೋಜನೆಯ ಲಾಭ ಸಿಗುತ್ತದೆ” ಎಂದಿದ್ದರು.

ಇದನ್ನೂ ಓದಿ...

Back to top button
>