ರಾಜಕೀಯರಾಜ್ಯ

ಜೂನ್​ನಿಂದಲೇ 10 ಕೆಜಿ ಅಕ್ಕಿ ನೀಡಿ, ಮಾತು ತಪ್ಪಿದರೆ ಜನರೊಂದಿಗೆ ಸೇರಿ ಪ್ರತಿಭಟನೆ: ಬೊಮ್ಮಾಯಿ ಎಚ್ಚರಿಕೆ

Give 10 kg of rice from June itself, protest with people if the word goes wrong: Bommai warns

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಕೇಂದ್ರ ಸರ್ಕಾರದ ಕಡೆ ಬೆರಳು ಮಾಡದೇ ಹೊರಗಡೆಯಿಂದ ಖರೀದಿ ಮಾಡಿಯಾದರೂ ಅನ್ನಭಾಗ್ಯ ಯೋಜನೆಯಡಿ ನೀಡಿದ್ದ ಭರವಸೆಯಂತೆ ತಲಾ 10 ಕೆಜಿ ಅಕ್ಕಿಯನ್ನು ಪಡಿತರದಾರರಿಗೆ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು.
ಬೆಂಗಳೂರು: ”ಅನ್ನಭಾಗ್ಯಕ್ಕೆ ಹಣಕಾಸಿನ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರದ ಕಡೆ ಬೆರಳು ಮಾಡದೇ ಹೊರಗಡೆಯಿಂದ ಖರೀದಿ ಮಾಡಿಯಾದರೂ ಅನ್ನಭಾಗ್ಯ ಯೋಜನೆಯಡಿ ನೀಡಿದ್ದ ಭರವಸೆಯಂತೆ ತಲಾ 10 ಕೆಜಿ ಅಕ್ಕಿಯನ್ನು ಪಡಿತರದಾರರಿಗೆ ನೀಡಬೇಕು. ಅಕ್ಕಿ ನೀಡಲು ಆಗದೇ ಇದ್ದರೆ, ಪಡಿತರದಾರರ ಖಾತೆಗಳಿಗೆ ಡಿಬಿಟಿ ಮಾಡಿ. ಹಣಪಾವತಿ ಮಾಡಿ ಇಲ್ಲವಾದರೆ, ಜನರೊಂದಿಗೆ ಸೇರಿ ಪ್ರತಿಭಟನೆ ಮಾಡುತ್ತೇವೆ” ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ”ಅನ್ನಭಾಗ್ಯ ಯೋಜನೆಯಡಿ ಕೇಂದ್ರವು 10 ಕೆಜಿ ಕೊಡಬೇಕೆಂಬ ಬಗ್ಗೆ ಮುಖ್ಯಮಂತ್ರಿಗಳ ಹೇಳಿಕೆಯನ್ನು ಗಮನಿಸಿದ್ದೇನೆ. ಅದನ್ನು ನೋಡಿದಾಗ ರಾಜ್ಯದ ಕಾಂಗ್ರೆಸ್ ಸರ್ಕಾರ 10 ಕೆಜಿ ಅಕ್ಕಿ ವಿಚಾರದಲ್ಲಿ ಮೋಸ ಮಾಡುತ್ತಿರುವುದು ಸ್ಪಷ್ಟವಾಗಿದೆ. ಮಾತು ತಪ್ಪಿ ದೋಖಾ ಕಾರ್ಯಕ್ರಮ ಮುಂದುವರಿಸಿದ್ದಾರೆ. ಅದನ್ನು ಮುಚ್ಚಿಹಾಕಲು ರೈತರ, ಬಡವರ ಬಿಪಿಎಲ್ ಕಾರ್ಡ್‍ದಾರರ ಆಪಾದನೆಯಿಂದ ಪಾರಾಗಲು ಅಕ್ಕಿ ಸರಬರಾಜು ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ” ಎಂದು ಖಂಡಿಸಿದರು.

”ಕೇಂದ್ರ ಸರ್ಕಾರವು ಆಹಾರ ಭದ್ರತಾ ಕಾಯ್ದೆ ಪ್ರಕಾರ, ಎಲ್ಲ ರಾಜ್ಯಗಳಿಗೆ 5 ಕೆಜಿ ಅಕ್ಕಿ ಕೊಡುತ್ತಿದೆ. ಡಿಸೆಂಬರ್​ನಲ್ಲಿ ನಿರ್ವಹಣೆ- ಸಾರಿಗೆ ವೆಚ್ಚವನ್ನೂ ನೀಡಲಾರಂಭಿಸಿದೆ. ಮೊದಲು ಇವೆರಡನ್ನು (ಸುಮಾರು 3 ರೂ.) ರಾಜ್ಯವೇ ಭರಿಸಬೇಕಾಗಿತ್ತು. 10 ಕೆಜಿ ಪೈಕಿ 5 ಕೆಜಿ ಕೇಂದ್ರದ ನರೇಂದ್ರ ಮೋದಿ ಸರ್ಕಾರವೇ ನೀಡುತ್ತಿದೆ. ಆದರೆ, ಮುಚ್ಚಿಟ್ಟು ತಾವೇ ಕೊಡುತ್ತಿರುವುದಾಗಿ ಬಿಂಬಿಸಲು ರಾಜ್ಯದ ಕಾಂಗ್ರೆಸ್ ಸರಕಾರ ಮುಂದಾಗಿತ್ತು” ಎಂದು ಟೀಕಿಸಿದರು. ”2 ವರ್ಷ ಕೇಂದ್ರ- ರಾಜ್ಯ ಸರ್ಕಾರ ಸೇರಿ ಡಿಸೆಂಬರ್​ವರೆಗೆ 10 ಕೆಜಿ ಕೊಟ್ಟಿದ್ದೆವು ಎಂದ ಅವರು, ಮೊದಲ ಸಂಪುಟ ಸಭೆಯಲ್ಲಿ ಈ ಸರ್ಕಾರ ತಾತ್ವಿಕವಾಗಿ 5 ಗ್ಯಾರಂಟಿಗಳಿಗೆ ಮಂಜೂರಾತಿ ಕೊಡಲಾಗಿತ್ತು. ಸರಣಿ ಸಭೆಗಳನ್ನೂ ನಡೆಸಿದ್ದರು. ಟೆಂಡರ್ ಕರೆದು ಅಕ್ಕಿ ಪಡೆಯಬೇಕಿತ್ತಲ್ಲವೇ? ಕುಂಟು ನೆಪ ಹೇಳುವುದೇ ನಿಮ್ಮ ಕ್ರಮವಲ್ಲವೇ” ಎಂದು ಪ್ರಶ್ನಿಸಿದರು.

”ಅಕ್ಕಿ ಕೋರಿಕೆ ವಿನಂತಿಸಲು ಕೇಂದ್ರದ ಸಚಿವರ ಬಳಿಗೆ ನಿಮ್ಮ ಸಚಿವರನ್ನು ಕಳಿಸಬೇಕಿತ್ತಲ್ಲವೇ? ಎಫ್‍ಸಿಐಗೆ ಪತ್ರ ಬರೆದೊಡನೆ ಸಿಗಲು ಸಾಧ್ಯವೇ? ಸಿಎಂ ಅವರು ರಾಜಕೀಯ ಮಾಡುತ್ತಿರುವುದು ಅವರ ಹುದ್ದೆಗೆ ತಕ್ಕದಲ್ಲ” ಎಂದು ಟೀಕಿಸಿದರು. ”ಕಾಂಗ್ರೆಸ್ ಸರ್ಕಾರ ಪಡಿತರ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಮುಕ್ತ ಮಾರುಕಟ್ಟೆ, ಎಫ್‍ಸಿಐ ಸೇರಿ ಇತರ ಕಡೆಗಳಿಂದ ಅಕ್ಕಿ ಖರೀದಿಸಿ ವಿತರಿಸಿ ಎಂದು ಒತ್ತಾಯಿಸಿದರು. ಎಲ್ಲದರಲ್ಲೂ ಕಂಡಿಷನ್ ಗಮನಿಸಿದ ಜನತೆ, ಇದು ಗ್ಯಾರಂಟಿ ಅಲ್ಲ ದೋಖಾ ಸೀರೀಸ್ ಎನ್ನುತ್ತಾರೆ” ಎಂದು ಬೊಮ್ಮಾಯಿ ಕಿಡಿಕಾರಿದರು.

ಕಾಂಗ್ರೆಸ್​ ವಿರುದ್ಧ ಬೊಮ್ಮಾಯಿ ಟೀಕೆ: ”ವಿದ್ಯುತ್ ದರ ಏರಿಕೆಗೆ ನಾವು ಒಪ್ಪಿಕೊಂಡಿರಲಿಲ್ಲ. ಮೇ 12ರಂದು ಕೆಇಆರ್​ಸಿ ನೋಟಿಫಿಕೇಶನ್ ಹೊರಡಿಸಿದೆ. ಅದು ನಮ್ಮ ಸರ್ಕಾರದ ಕ್ರಮವಲ್ಲ. ಅಲ್ಲದೆ, ಜೂನ್ 2ರಂದು ಆದೇಶ ಹೊರಡಿಸಲಾಗಿದೆ. ಆಗ ಯಾವ ಸರ್ಕಾರ ಇತ್ತು ಎಂದು ಪ್ರಶ್ನಿಸಿದರು. ಏಪ್ರಿಲ್‍ನಿಂದ ಪೂರ್ವಾನ್ವಯವಾಗಿ ಇದು ಜಾರಿಯಾಗಿದೆ. ಆದರೂ ನಮ್ಮ ಹಲವು ಆದೇಶಗಳಿಗೆ ತಡೆ ನೀಡಿರುವ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಹೆಚ್ಚಳಕ್ಕೆ ಯಾಕೆ ತಡೆ ನೀಡಬಾರದು” ಎಂದು ಪ್ರಶ್ನಿಸಿದರು. ”ಕರ್ನಾಟಕ ವಿದ್ಯುತ್ ರೆಗ್ಯುಲೇಟರಿ ಸಂಸ್ಥೆ ನಿಮ್ಮಲ್ಲಿ ವಿದ್ಯುತ್ ದರ ಸರಿದೂಗಿಸಿಕೊಂಡು ಹೋಗುವುದನ್ನು ಗಮನಿಸಿಕೊಂಡು ದರ ಹಚ್ಚಳ ಮಾಡುವಂತೆ ಸೂಚಿಸಿದೆ. ಇದಕ್ಕೆ‌ ಎರಡೇ ಆಯ್ಕೆಯಿದೆ. ಒಂದು ರಾಜ್ಯ ಸರ್ಕಾರ ಭರಿಸಬೇಕು ಅಥವಾ ಗ್ರಾಹಕರ ಮೇಲೆ ಹೊರಿಸಬೇಕು. ಕೆಇಆರ್​ಸಿ ಇಂಡಿಪೆಂಡೆಂಟ್ ಬಾಡಿ ಆದರೂ ಸರಿಯಲ್ಲ. ಎರಡೂ ಸರ್ಕಾರ ಇಲ್ಲದಾಗ ದರ ಹೆಚ್ಚಳ ಮಾಡಿದೆ” ಎಂದು ಟೀಕಿಸಿದರು.

”ಉಚಿತ ಪ್ರಯಾಣಕ್ಕೆ ನಾಲ್ಕೇ ದಿನಕ್ಕೆ 10 ಕೋಟಿ ವೆಚ್ಚವಾಗಿದೆ. ಜೊತೆಯಲ್ಲಿ ನಿಗಮದಲ್ಲೇ ಉತ್ಪಾದನೆ ಆಗುವ ಹಣದಲ್ಲೇ ವೇತನ ನೀಡುವಂತೆ ಆದೇಶ ಮಾಡಲಾಗಿದ್ದು, ಇದು ಸಾಧ್ಯವಿಲ್ಲ. ಇದು ಯಾಮಾರಿಸೋ ಕೆಲಸ. ಆಗಲ್ಲ ಅಂತ ಗೊತ್ತಿದ್ದರೂ ಈಗ ಆದೇಶ ಮಾಡಿದ್ದಾರೆ. ಐದು ಉಚಿತ ಯೋಜನೆ ಜಾರಿಗೆ ತರೋದು ಕಾಂಗ್ರೆಸ್ ಸರ್ಕಾರಕ್ಕೆ ದುಸ್ತರವಾಗಿದೆ. 59 ಸಾವಿರ ಕೋಟಿ ಆಗುತ್ತದೆ ಅಂತ ಸಿಎಂ‌ ಅವರೇ ಹೇಳಿಕೊಂಡಿದ್ದಾರೆ. ಮೊದಲೇ ಅವರಿಗೆ ಗೊತ್ತಿರಲಿಲ್ವಾ ಎಂದು ಗರಂ ಆದರು.

comment_count comments
Top rated
Newest
Oldest
Top rated

Comment as a guest:

ಇದನ್ನೂ ಓದಿ...

Back to top button
>