ಪಠ್ಯ ಪುಸ್ತಕ ಪರಿಷ್ಕರಣೆ, ಎಪಿಎಂಸಿ ಕಾಯ್ದೆ ರದ್ದುಪಡಿಸಲು ಸಚಿವ ಸಂಪುಟ ಅಸ್ತು
Cabinet moves to repeal Text Book Revision, APMC Act
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಹಾಗೂ ವಿವಾದಿತ ಎಪಿಎಂಸಿ ಕಾಯ್ದೆ ರದ್ದು ಸೇರಿದಂತೆ ಹಲವು ಮಹತ್ವದ ಪ್ರಸ್ತಾವನೆಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದೆ.
ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಜೆಪಿ ಅವಧಿಯಲ್ಲಿ ಮಾಡಿದ್ದ ಪಠ್ಯ ಪರಿಷ್ಕರಣೆಗೆ ಕೊಕ್ ನೀಡಲು ನಿರ್ಧರಿಸಲಾಗಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಚಕ್ರವರ್ತಿ ಸೂಲೆಬೆಲೆ, ವೀರ್ ಸಾವರ್ಕರ್ ಪಠ್ಯವನ್ನು ತೆಗೆಯಲಾಗಿದೆ. ಇನ್ನು ಜವಾಹರ್ ಲಾಲ್ ನೆಹರೂ, ಡಾ. ಬಿಆರ್ ಅಂಬೇಡ್ಕರ್, ಸಾವಿತ್ರಿ ಭಾಯಿ ಪುಲೆ ಸೇರಿದಂತೆ ಕೆಲ ಪಠ್ಯಗಳನ್ನು ಸೇರ್ಪಡೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದರು.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿರುವ ತಪ್ಪುಗಳನ್ನು ಸರಿಪಡಿಸಲಾಗಿದೆ. ಮಕ್ಕಳಿಗೆ ಈಗಾಗಲೇ ಪಠ್ಯ ಪುಸ್ತಕ ವಿತರಿಸಲಾಗಿದೆ. ಹೀಗಾಗಿ ಅವುಗಳನ್ನು ವಾಪಸ್ ಪಡೆದರೆ ಮತ್ತೆ ಕೋಟ್ಯಾಂತರ ರೂಪಾಯಿ ವೆಚ್ಚವಾಗುತ್ತದೆ. ಹೀಗಾಗಿ ಸಪ್ಲಿಮೆಂಟರಿ ಪುಸ್ತಕ ನೀಡಲಾಗುತ್ತದೆ. ಶಿಕ್ಷಣ ತಜ್ಞರ ಸಲಹೆ ಪಡೆದು ಸಪ್ಲಿಮೆಂಟರಿ ಪುಸ್ತಕ ನೀಡಲಾಗುತ್ತದೆ. ಇದರ ಜೊತೆಗೆ ಮಕ್ಕಳಿಗೆ ಯಾವ ಪಾಠ ಮಾಡಬೇಕು ಅನ್ನೋ ಮಾರ್ಗಸೂಚಿಯನ್ನು ಶಿಕ್ಷಕರಿಗೆ ನೀಡಲಾಗುತ್ತದೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.
ಇನ್ನು ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಎಪಿಎಂಸಿ ಕಾಯ್ದೆಯನ್ನು ರದ್ದು ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಹಳೆ ಎಪಿಎಂಸಿ ಕಾಯ್ದೆಯನ್ನೆ ಮರುಜಾರಿಗೊಳಿಸುವ ತೀರ್ಮಾನಕ್ಕೆ ಕಾಂಗ್ರೆಸ್ ಸರ್ಕಾರ ಬಂದಿದೆ.
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಧಾನಸೌಧದಲ್ಲಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ 1 ಲಕ್ಷ ರೈತ ಕುಟುಂಬಗಳಿಗೆ ಸಮಸ್ಯೆಯಾಗಿದೆ. ರಾಜ್ಯದಲ್ಲಿ ಮಾರುಕಟ್ಟೆ ಕೂಡ ಗಣನೀಯವಾಗಿ ಕಡಿಮೆಯಾಗಿದೆ. ತಿದ್ದುಪಡಿ ಕಾಯ್ದೆ ಜಾರಿ ನಂತರ ವ್ಯವಹಾರ 570 ಕೋಟಿಯಿಂದ 200 ಕೋಟಿಗೆ ಕುಸಿದಿದೆ ಎಂದರು.
ಮತಾಂತರ ನಿಷೇಧ ಕಾಯ್ದೆಗೂ ತಿದ್ದುಪಡಿ ತರಲು ಸಂಪುಟ ತೀರ್ಮಾನ
ಮತಾಂತರ ನಿಷೇಧ ಕಾಯ್ದೆಗೂ ತಿದ್ದುಪಡಿ ತರಲು ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿದೆ. ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯಲ್ಲಿ ಸೇರಿಸಿದ್ದ ಅಂಶಗಳನ್ನು ಕೈಬಿಟ್ಟು ತಿದ್ದುಪಡಿ ಮಾಡಲು ನಿರ್ಧಾರ ಮಾಡಲಾಗಿದ್ದು, ಜುಲೈ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡನೆ ಮಾಡಲು ನಿರ್ಧರಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆ ಅಕ್ರಮದ ಬಗ್ಗೆಯೂ ತನಿಖೆಗೆ ತೀರ್ಮಾನಿಸಲಾಗಿದೆ.