ರಾಜ್ಯ

ಹಂಪಿ ಕನ್ನಡ ವಿವಿಗೆ ಮೂರು ತಿಂಗಳ ಕರೆಂಟ್ ಶಾಕ್.. ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಒತ್ತಾಯ

Three months of current shock to Hampi Kannada University.. Forced to waive electricity bill

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ವಿಜಯನಗರ : ನಾಡಿನ ಏಕೈಕ ಭಾಷಾ ಸಂಶೋಧನಾ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಯ ಹಂಪಿ ಕನ್ನಡ ವಿಶ್ವವಿದ್ಯಾಲಯ ಸದ್ಯ ವಿದ್ಯುತ್‌ ಬಿಲ್ ಪಾವತಿಗೂ ಹೆಣಗಾಡುತ್ತಿದ್ದು, ಬಿಲ್ ಮನ್ನಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ವಿವಿ ಮನವಿ ಮಾಡಿದೆ.

ಕಳೆದ ಒಂದು ವರ್ಷದಿಂದ ಕನ್ನಡ ವಿವಿಯ ಒಟ್ಟು 77 ಲಕ್ಷ ರೂಪಾಯಿ ಕರೆಂಟ್ ಬಿಲ್ ಬಾಕಿಯಿದೆ. ಹೀಗಾಗಿ ವಿದ್ಯುತ್‌ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ. ನಿರ್ವಹಣೆಗೆ ಅನುದಾನವಿಲ್ಲದೇ ಪರಿತಪಿಸುತ್ತಿರುವ ವಿವಿ, ಸರ್ಕಾರದ ಅನುದಾನ, ಆದಾಯದ ಇತರ ಮೂಲಗಳು ಇಲ್ಲದೆ ಇನ್ನಿಲ್ಲದ ಸಂಕಷ್ಟ ಅನುಭವಿಸುತ್ತಿದೆ. ಬೋಧಕರ ಕೊರತೆಯಿಂದ ಸಂಶೋಧನಾ ಕೆಲಸಗಳಿಗೆ ಹಿನ್ನಡೆ ಒಂದೆಡೆಯಾದರೆ, ತಾತ್ಕಾಲಿಕ ಸಿಬ್ಬಂದಿ ವೇತನ, ಪುಸ್ತಕ ಪ್ರಕಟಣೆ, ಸಂಬಳ, ಪ್ರೋತ್ಸಾಹಧನ, ವಿದ್ಯಾರ್ಥಿ ವೇತನ ಸೇರಿ ಇತರ ಖರ್ಚು ವೆಚ್ಚ ಸರಿದೂಗಿಸುವುದು ಸಹ ಸವಾಲಾಗಿದೆ.

ಅಲ್ಪಸ್ವಲ್ಪ ಬಾಕಿ ಪಾವತಿಸಲೂ ವಿವಿಗೆ ಸಂಕಷ್ಟ : ಕನ್ನಡ ವಿವಿಯ ಎಲ್ಲ ವಿಭಾಗಗಳು, ಆಡಳಿತಾಂಗ ಸೇರಿ ನಾನಾ ಕಟ್ಟಡಗಳಲ್ಲಿ ಬಳಸುವ ಮಾಸಿಕ ಬಿಲ್ 10 ಲಕ್ಷ ರೂ. ಬರುತ್ತದೆ. ನೂತನ ಕುಲಪತಿಗಳು ಬಂದ ಬಳಿಕ ಪ್ರತಿ ತಿಂಗಳು 10 ಲಕ್ಷ ರೂ. ಪಾವತಿಸಲಾಗುತ್ತಿದೆ. ಆದರೂ ಒಂದು ವರ್ಷದಿಂದ ಅನುದಾನದ ಸಮಸ್ಯೆ ಕಾರಣ ಬಿಲ್ ಪಾವತಿಸಲಾಗದೇ ದೊಡ್ಡ ಮೊತ್ತದ ಬಿಲ್​ ಬಾಕಿ ಉಳಿದಿದೆ. ವಿವಿಗೆ ಬರುವ ಅನುದಾನದಲ್ಲಿ ಅಲ್ಪಸ್ವಲ್ಪ ಬಾಕಿ ಪಾವತಿಸಿ ನಿರ್ವಹಣೆ ಮಾಡಲು ವಿವಿ ಆಡಳಿತ ಹೆಣಗಾಡುತ್ತಿದೆ.

ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಮನವಿ : ಕನ್ನಡ ವಿಶ್ವವಿದ್ಯಾಲಯದ ವಿದ್ಯುತ್ ಬಿಲ್ ಮನ್ನಾ ಮಾಡಲು ವಿವಿಯಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಒಂದು ವರ್ಷದಿಂದ ವಿವಿಯ ವಿದ್ಯುತ್ ಬಿಲ್ ಮನ್ನಾ ಮಾಡಿ ವಿವಿಯ ಬೆಳವಣಿಗೆಗೆ ನೆರವಾಗಬೇಕೆಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಸಚಿವ ಕೆ ಜೆ ಜಾರ್ಜ್ ಅವರಿಗೆ ಪತ್ರ ಬರೆಯಲಾಗಿದೆ ಎಂದು ವಿವಿ ಮೂಲಗಳು ತಿಳಿಸಿವೆ.

ಕನ್ನಡ ವಿವಿ ಕುಲಪತಿ ಸರಕಾರಕ್ಕೆ ಬರೆದಿರುವ ಪತ್ರ
ಬಿಡುಗಾಸಿನ ಅನುದಾನ : ರಾಜ್ಯ ಸರ್ಕಾರ ವಿಶ್ವವಿದ್ಯಾಲಯಕ್ಕೆ ಕೊಡುವ ಅನುದಾನ ವಿದ್ಯುತ್ ಬಿಲ್‌ಗೂ ಸಾಲುತ್ತಿಲ್ಲ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ವಿವಿಗೆ ಪುನಶ್ಚೇತನ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ವಿಧಾನಸಭೆ ಚುನಾವಣೆಗೂ ಮುನ್ನ ವಿದ್ಯುತ್ ಬಿಲ್ ಪಾವತಿಸದ ಕಾರಣ ಒಂದು ವಾರ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ವಿಚಿತ್ರವೆಂದರೆ ಹಳ್ಳಿಕೇರಿ ಬಳಿ ಜೆಸ್ಕಾಂಗೆ ವಿವಿಯ ಅರ್ಧ ಎಕರೆ ಜಮೀನು ನೀಡಲಾಗಿದೆ. ಕಡಿತಗೊಳಿಸಿದ್ದ ಕರೆಂಟ್‌ ಗಾಗಿ ಮನವಿ ಮಾಡಿ 15 ಲಕ್ಷ ರೂ. ಪಾವತಿಸಿ ವಿದ್ಯುತ್ ಸಂಪರ್ಕ ಕೊಡಿಸಲಾಗಿತ್ತು. ಈ ಹಿಂದಿನ ದರ ಪಾವತಿಸಲಾಗದೆ ಸಂಕಷ್ಟ ಅನುಭವಿಸುತ್ತಿರುವ ಕನ್ನಡ ವಿವಿಗೆ ವಿದ್ಯುತ್ ದರ ಏರಿಕೆ ಬಳಿಕ ಕರೆಂಟ್ ಕಷ್ಟ ಮತ್ತಷ್ಟು ದುಬಾರಿಯಾಗುವ ದುಗುಡ ಕಾಯುತ್ತಿದೆ.

ರಾಜ್ಯ ಸರ್ಕಾರಕ್ಕೂ ಮನವಿ ಮಾಡಲಾಗಿದೆ: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅನುದಾನದ ಕೊರತೆಯಿಂದ ಕರೆಂಟ್ ಬಿಲ್ ಬಾಕಿಯಿದೆ. ಜೆಸ್ಕಾಂನವರು ಕೇಳುತ್ತಿರುವುದರಿಂದ ಕಳೆದ ಮೂರು ತಿಂಗಳಿಂದ ವಿದ್ಯುತ್‌ ಬಿಲ್‌ ಪಾವತಿಸಲಾಗುತ್ತಿದೆ. ಈ ಕುರಿತು ರಾಜ್ಯ ಸರ್ಕಾರಕ್ಕೂ ಮನವಿ ಮಾಡಲಾಗಿದೆ ಎಂದು ಹಂಪಿ ಕನ್ನಡ ವಿವಿಯ ಕುಲಪತಿ ಪ್ರೊ ಡಿ ವಿ ಪರಮಶಿವಮೂರ್ತಿ ಹೇಳಿದರು.

ವಿಶ್ವವಿದ್ಯಾಲಯ ಹಂಪಿಯಲ್ಲಿ ಸದ್ಯಕ್ಕೆ 85 ಲಕ್ಷ ವಿದ್ಯುತ್ ಬಿಲ್ ಬಾಕಿ ಇದೆ. ಹೀಗಾಗಿ ಕಳೆದ ವಿಸಿ ಇದ್ದಾಗ ನಮಗೆ ಒಂದು ವಾರಗಳ ಕಾಲ ವಿದ್ಯುತ್ ಕಟ್​ ಆಗಿದ್ದ ಅನುಭವ ನಮ್ಮ ಹಂಪಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಆಗಿದೆ. ಹೀಗಾಗಿ ಸದ್ಯ ಬಾಕಿ ಇರುವ ಕರೆಂಟ್​ ಬಿಲ್​​ ಅನ್ನು ಮನ್ನ ಮಾಡುವ ಮೂಲಕ ವಿವಿಗೆ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಶಿಕ್ಷಣ ಪ್ರೇಮಿ ಶಿವು ಮನವಿ ಮಾಡಿದ್ದಾರೆ.

ಇದನ್ನೂ ಓದಿ...

Back to top button
>