ರಾಜಕೀಯರಾಜ್ಯ

ಗೃಹ ಲಕ್ಷ್ಮಿ ಯೋಜನೆಗೆ ವೇಗ ನೀಡಲು ಸರ್ಕಾರದ ಪ್ಲಾನ್.. ಪ್ರತಿ ಗ್ರಾಮ ಪಂಚಾಯತ್​ಗೆ ಐವರು ​ಕಾರ್ಯಕರ್ತರ ನೇಮಕ ​

Government plan to give speed to Griha Lakshmi Yojana.. Appointment of five workers for each Gram Panchayat.

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು: ಮನೆ ಒಡತಿಗೆ ತಲಾ 2 ಸಾವಿರ ರೂಪಾಯಿ ನೀಡುವ ಗೃಹ ಲಕ್ಷ್ಮಿ ಯೋಜನೆಗೆ ವೇಗ ನೀಡಲು ನಿರ್ಧರಿಸಿರುವ ಸರ್ಕಾರ, ಇದೇ ಕಾರಣಕ್ಕಾಗಿ ರಾಜ್ಯದ ಪ್ರತಿ ಪಂಚಾಯತ್​ಗೆ ತಲಾ ಐದು ಮಂದಿ ಕಾರ್ಯಕರ್ತರ ನೇಮಕ ಮಾಡಲು ಚಿಂತಿಸಿದೆ.

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡಲು ಪ್ರತಿ ಪಂಚಾಯತ್​ಗೆ ಐದು ಮಂದಿ ಕಾರ್ಯಕರ್ತರನ್ನು ನೇಮಿಸಲು ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಪ್ರತಿಯಾಗಿ ಈ ಕಾರ್ಯಕರ್ತರಿಗೆ ಗೌರವಧನ ನೀಡಲು ನಿರ್ಧರಿಸಲಾಗಿದೆ.

ಅಂದಾಜು 30 ಸಾವಿರ ಕೋಟಿ ರೂ. ಭರಿಸಲಿರುವ ಸರ್ಕಾರ: ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಕಾರ್ಯ ಆಗಸ್ಟ್ 25ರಂದು ಪ್ರಾರಂಭವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಜ್ಯದ 1.27 ಕೋಟಿ ಕುಟುಂಬಗಳ ಒಡತಿಯರಿಗೆ ಗೃಹ ಲಕ್ಷ್ಮಿ ಯೋಜನೆಯ ಸೌಲಭ್ಯ ದೊರೆಯಲಿದ್ದು, ಇದಕ್ಕಾಗಿ ಸರ್ಕಾರ ಅಂದಾಜು 30 ಸಾವಿರ ಕೋಟಿ ರೂ.ಗಳನ್ನು ಭರಿಸಲಿದೆ. ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವ ಕಾರ್ಯ ಜೂನ್ 16 ರಂದು ಆರಂಭವಾಗಬೇಕಿತ್ತಾದರೂ, ಅರ್ಜಿ ಸಲ್ಲಿಕೆಯ ಸಂದರ್ಭದಲ್ಲಿ ಸಮಸ್ಯೆಯಾಗಬಹುದು ಎಂಬ ಕಾರಣಕ್ಕಾಗಿ ಮುಂದೂಡಲು ನಿರ್ಧರಿಸಲಾಗಿತ್ತು.

ಅರ್ಜಿ ಸಲ್ಲಿಕೆಗೆ ಸಮಸ್ಯೆಯಾದರೆ ಅದನ್ನು ಸರಿಪಡಿಸಿಕೊಂಡು ಮುಂದಕ್ಕೆ ಹೋಗುವುದು ಕಷ್ಟವಾಗಬಹುದು ಎಂಬ ಕಾರಣದಿಂದ ಈ ಪ್ರಕ್ರಿಯೆಯನ್ನು ಮುಂದೂಡಲು ತೀರ್ಮಾನ ಮಾಡಲಾಗಿತ್ತು. ಆದರೆ, ಇದೀಗ ಹಿರಿಯ ಐಎಎಸ್ ಅಧಿಕಾರಿ ಪೊನ್ನುರಾಜ್ ಅವರ ನೇತೃತ್ವದ ತಂಡ ಅರ್ಜಿ ಸಲ್ಲಿಕೆಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಕಾರ್ಯಕ್ರಮ ರೂಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 25ರಂದು ಗೃಹ ಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಕೆ ಕಾರ್ಯ ಆರಂಭವಾಗಲಿದೆ.

ಪ್ರತಿ ಪಂಚಾಯತ್​ಗೆ ಐವರು ಕಾರ್ಯಕರ್ತರ ನೇಮಕಕ್ಕೆ ಚಿಂತನೆ: ದಿನಕ್ಕೆ ಕನಿಷ್ಠ ಒಂದು ಲಕ್ಷ ಅರ್ಜಿಗಳು ಆನ್​ಲೈನ್ ಮೂಲಕ ಸಲ್ಲಿಕೆಯಾಗಬಹುದು ಎಂಬುದು ರಾಜ್ಯ ಸರ್ಕಾರದ ಸದ್ಯದ ಲೆಕ್ಕಾಚಾರವಾಗಿದೆ. ಇನ್ನು ಗೃಹ ಲಕ್ಷ್ಮಿ ಯೋಜನೆಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಉಚಿತವಾಗಿದ್ದರೂ ಗ್ರಾಮಾಂತರ ಪ್ರದೇಶಗಳಲ್ಲಿ ಅರ್ಜಿ ಸಲ್ಲಿಕೆ ಜನರಿಗೆ ತೊಡಕಾಗಬಹುದು. ಈ ಹಿನ್ನೆಲೆಯಲ್ಲಿ ಜನರಿಗೆ ಸಹಾಯ ಮಾಡಲು ಪ್ರತಿ ಪಂಚಾಯತ್​ಗೆ ಐದು ಮಂದಿ ಕಾರ್ಯಕರ್ತರನ್ನು ನೇಮಕ ಮಾಡುವುದು ಸರ್ಕಾರದ ಯೋಚನೆಯಾಗಿದೆ. ಅರ್ಜಿ ಸಲ್ಲಿಕೆಗೆ ಯಾರಿಗಾದರೂ ತೊಡಕಾಗುತ್ತಿದ್ದರೆ, ಅವರು ಈ ಕಾರ್ಯಕರ್ತರ ಸಹಾಯ ಪಡೆದು ಯಾವುದೇ ತೊಂದರೆ ಇಲ್ಲದಂತೆ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ: ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರೆ ಆಗಸ್ಟ್ ತಿಂಗಳಲ್ಲಿ ಉದ್ದೇಶಿತ ದಿನದಂದು 1.27 ಕೋಟಿ ಕುಟುಂಬಗಳ ಮನೆ ಒಡತಿಯರ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರೂ. ಗಳನ್ನು ಜಮಾ ಮಾಡಬಹುದು ಎಂಬುದು ಸರ್ಕಾರದ ಯೋಚನೆಯಾಗಿದೆ. ಈ ಮೊದಲು ಜೂನ್ 16ರಿಂದ ಅರ್ಜಿ ಸಲ್ಲಿಸಬಹುದು. ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಮೂಲಕ ಭೌತಿಕವಾಗಿ ಕೂಡ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಲಾಗಿತ್ತು. ಆದರೆ, ಇದಕ್ಕಾಗಿ ಸಿದ್ಧಪಡಿಸಲಾಗಿರುವ ಸಾಫ್ಟ್ ವೇರ್​ನಲ್ಲಿ ಕೆಲವು ತಾಂತ್ರಿಕ ದೋಷಗಳು ಕಾಣಿಸಿಕೊಂಡಿವೆ. ಪರಿಶೀಲನೆ ನಡೆಸಿ ಯಾವುದೇ ದೋಷ ಕಂಡು ಬರದಂತೆ ನೋಡಿಕೊಳ್ಳಬೇಕಿದೆ. ಹಾಗಾಗಿ, ಅರ್ಜಿ ಸಲ್ಲಿಕೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇತ್ತೀಚೆಗೆ ತಿಳಿಸಿದ್ದರು.

ಇದನ್ನೂ ಓದಿ...

Back to top button
>