ರಾಜಕೀಯರಾಜ್ಯರಾಷ್ಟ್ರೀಯ

ಬಿಹಾರದ ಪಾಟ್ನಾದಲ್ಲಿ ಇಂದು ವಿರೋಧ ಪಕ್ಷಗಳ ಒಗ್ಗಟ್ಟು ಪ್ರದರ್ಶನ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ತಂತ್ರ

Opposition unity show in Bihar's Patna today: Strategy to defeat BJP in Lok Sabha elections

 

ಪ್ರಿಯಲಚ್ಛಿ ಗಂಧನಹಳ್ಳಿ

ಪಾಟ್ನಾ(ಬಿಹಾರ): ಮುಂದಿನ ವರ್ಷ ಏಪ್ರಿಲ್ ಹೊತ್ತಿಗೆ ಲೋಕಸಭೆ ಚುನಾವಣೆ 2024 ನಡೆಯಲಿದೆ. ಭಾರತೀಯ ಜನತಾ ಪಾರ್ಟಿಯನ್ನು ಈ ಬಾರಿ ಸೋಲಿಸಲು ವಿರೋಧ ಪಕ್ಷಗಳು ತಮ್ಮದೇ ಆದ ತಂತ್ರ ಹೆಣೆಯಲು ಮುಂದಾಗಿವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸೇರಿದಂತೆ ಸ್ಥಳೀಯ ಪಕ್ಷಗಳು ಕಾರ್ಯಪ್ರವೃತ್ತವಾಗಿವೆ.

ಇಂದು ಪಾಟ್ನಾದಲ್ಲಿ ಸಭೆ: ಈ ನಿಟ್ಟಿನಲ್ಲಿ ಇಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ವಿರೋಧ ಪಕ್ಷಗಳ ಸಭೆ ನಡೆಯಲಿದ್ದು, ಎಲ್ಲಾ ಪಕ್ಷಗಳು ಒಟ್ಟಾಗಿ ಬಿಜೆಪಿಯನ್ನು ಮಣಿಸಲು ತಂತ್ರ ಉಪಾಯ ರೂಪಿಸುವುದು ಸಭೆಯ ಉದ್ದೇಶವಾಗಿದೆ.

1974ರಲ್ಲಿ ಅಂದಿನ ಇಂದಿರಾ ಗಾಂಧಿ ನೇತೃತ್ವದ ಬಹುಮತದ ಸರ್ಕಾರವನ್ನು ಉರುಳಿಸಲು ಕ್ರಾಂತಿಕಾರಿ ನಾಯಕ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಇದೇ ಪಾಟ್ನಾದಲ್ಲಿ ಎಲ್ಲಾ ಪಕ್ಷಗಳ ನಾಯಕರು ಸಭೆ ಸೇರಿ ತಂತ್ರ ಹೆಣೆದಿದ್ದರು. ಇಂದು 2023ರಲ್ಲಿ ನಿತೀಶ್ ಕುಮಾರ್ ಅವರು ಅದೇ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಹಲವು ಪಕ್ಷಗಳ ನಾಯಕರು ನಿನ್ನೆಯೇ ಪಾಟ್ನಾಗೆ ತಲುಪಿದ್ದರೆ ರಾಷ್ಟ್ರೀಯ ಲೋಕ ದಳ(RLD) ಅಧ್ಯಕ್ಷ ಜಯಂತ್ ಚೌಧರಿ ತಮ್ಮ ಪೂರ್ನ ನಿರ್ಧರಿತ ಕುಟುಂಬ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ವಿರೋಧ ಪಕ್ಷಗಳ ಒಗ್ಗಟ್ಟಿನಲ್ಲಿ ಇಂದಿನ ಸಭೆ ಮಹತ್ವದ ಹೆಜ್ಜೆಯನ್ನಿಡಲಿದೆ ಎಂದು ಚೌಧರಿಯವರು ನಂಬಿದ್ದಾರೆ.

ಬಿಹಾರದ ಸಂಯುಕ್ತ ಜನತಾ ದಳ ಸಭೆಯನ್ನು ಆಯೋಜಿಸಿದ್ದು ಬಿಎಸ್ ಪಿ ನಾಯಕಿ ಮಾಯಾವತಿಯವರಿಗೆ ಆಹ್ವಾನ ನೀಡಿಲ್ಲ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮನ್, ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಈಗಾಗಲೇ ಪಾಟ್ನಾಗೆ ತಲುಪಿದ್ದು ಇಂದು ಬೆಳಗ್ಗೆ ದೆಹಲಿಯಿಂದ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಹೊರಟಿದ್ದಾರೆ.

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಸಂಸದ ಸಂಜಯ್ ರಾವತ್, ಎನ್ ಸಿಪಿ ನಾಯಕ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಈಗಾಗಲೇ ತಮ್ಮ ನಿವಾಸದಿಂದ ಪಾಟ್ನಾಗೆ ಹೊರಟಿದ್ದಾರೆ.

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನಾವೆಲ್ಲರೂ ಬಿಜೆಪಿ ವಿರುದ್ಧ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೋರಾಡುತ್ತಿದ್ದು, ನಮ್ಮ ಅಜೆಂಡಾ ಬಿಜೆಪಿಯನ್ನು ಮಣಿಸುವುದು ಆಗಿದೆ. ಎಲ್ಲರೂ ಸೇರಿ ಕೆಲಸ ಮಾಡಬೇಕಿದೆ. ಪಾಟ್ನಾದಲ್ಲಿ ಇಂದು ಸಭೆಯಲ್ಲಿ ಅದಕ್ಕೆ ಬೇಕಾದ ಕುರಿತು ನಿರ್ಧರಿಸುತ್ತೇವೆ. ಕೇಂದ್ರದ ವಿಧೇಯಕ ಕುರಿತು ಆಪ್ ನಿರ್ಧಾರಕ್ಕೆ ಬೆಂಬಲಿಸುವ ಕುರಿತು ಸಂಸತ್ತು ಅಧಿವೇಶನದಲ್ಲಿ ಕಾಂಗ್ರೆಸ್ ನಿರ್ಧರಿಸಲಿದೆ ಎಂದರು.

ಇದನ್ನೂ ಓದಿ...

Back to top button
>