
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಮಂಗಳೂರು: ಇತ್ತೀಚೆಗೆ ಗೃಹಸಚಿವ ಡಾ. ಜಿ.ಪರಮೇಶ್ವರ್ ಮಂಗಳೂರಿಗೆ ಬಂದು ಆ್ಯಂಟಿ ಕಮ್ಯೂನಲ್ ಫೋರ್ಸ್ ಆರಂಭಿಸುವ ಹಾಗೂ ಆಗಸ್ಟ್ 15ರೊಳಗೆ ಡ್ರಗ್ಸ್ ಜಾಲವನ್ನು ಮಟ್ಟ ಹಾಕಲು ಸೂಚಿಸಿದ್ದರು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಪ್ರವಾಸೋದ್ಯಮ ಸಚಿವ ದಿನೇಶ್ ಗುಂಡೂರಾವ್ (Minister Dinesh Gundurao) ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪೊಲೀಸ್ ಕಮೀಷನರ್ ಮತ್ತು ಎಸ್ಪಿ ಜೊತೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲ ಘಟನೆಗಳಿಗೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಅಕ್ರಮ ಮಾದಕ ದ್ರವ್ಯ ಬಳಕೆಯೇ ಪ್ರಮುಖ ಕಾರಣವಾಗಿರುವುದು ಗಮನಕ್ಕೆ ಬಂದಿದೆ ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.
ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ
ನಗರ ಪೊಲೀಸ್ ಕಮಿಷನರ್ ಹಾಗೂ ಪೊಲೀಸ್ ಅಧೀಕ್ಷಕರೊಂದಿಗೆ ಸಭೆ ನಡೆಸಿದ ಸಚಿವರು, ಅನೈತಿಕ ಪೊಲೀಸ್ ಗಿರಿ, ಗುಂಡಾಗಿರಿ ಹಾಗೂ ಪ್ರಮುಖವಾಗಿ ಅಕ್ರಮ ಡ್ರಗ್ ಬಳಕೆ ತಡೆಗಟ್ಟಲು ಜಂಟಿ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದಾರೆ. ವಿಶೇಷವಾಗಿ ಅಕ್ರಮ ಮಾದಕ ದ್ರವ್ಯ ಬಳಕೆಯನ್ನು ತಡೆಯಲು ಪೋಲೀಸ್ ಇಲಾಖೆಯು ಜಿಲ್ಲಾಡಳತದೊಂದಿಗೆ ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸೇರಿ ಜಂಟಿ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಗುಂಡೂರಾವ್ ಸೂಚಿಸಿದರು. ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅಧಿಕಾರಿಗಳಿಗೆ ತಿಳಿಸಿದರು.
ಈ ನಿಟ್ಟಿನಲ್ಲಿ ಮಕ್ಕಳ ಪೋಷಕರ ಸಹಕಾರ ಕೋರಿರುವ ಸಚಿವರು, ಈ ಜಾಲದ ಹಿಂದೆ ಪೊಲೀಸ್ ಇಲಾಖೆಯ ಕೆಳ ಹಂತದ ಸಿಬ್ಬಂದಿಗಳು ಕೈಜೋಡಿಸುತ್ತಿರುವ ಬಗ್ಗೆ ಮಾಹಿತಿಗಳು ಬರುತ್ತಿವೆ. ಸಂಬಂಧಿಸಿದ ಸಿಬ್ಬಂದಿಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರಿಗೆ ಗುಂಡೂರಾವ್ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ಗೂಂಡಾಗಿರಿ ಹಾವಳಿಯನ್ನು ನಿಗ್ರಹಿಸಲು ಕಠಿಣ ಕ್ರಮಕ್ಕೆ ಪೋಲೀಸರು ಮುಂದಾಗಬೇಕು. ಅನೈತಿಕ ಪೋಲೀಸ್ ಗಿರಿ ವಿಚಾರದಲ್ಲೂ ಯಾವುದೇ ಶಕ್ತಿಯಾದರೂ, ಕಾನೂನು ಕೈಗೆತ್ತಿಕೊಂಡಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಗುಂಡೂರಾವ್ ಸೂಚಿಸಿದ್ದಾರೆ.
ಕಾನೂನು ಕಾಪಾಡುವುದು ಸವಾಲು:
ದಕ್ಷಿಣ ಕನ್ನಡ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಹೊಂದಲು ವಿಫುಲ ಅವಕಾಶಗಳಿದ್ದು, ಜಿಲ್ಲೆಯ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿಡುವುದು ಸವಾಲಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾಮರಸ್ಯ ಕಾಪಾಡಿದರೆ ಅಭಿವೃದ್ಧಿ ವೇಗೆ ಪಡೆಯಲಿದೆ ಎಂದು ಇದೇ ವೇಳೆ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ನೀಡಿರುವ ಸೂಚನೆಗಳು ಇವು:
ಮಾದಕ ದ್ರವ್ಯ ಬಳಕೆಯನ್ನು ತಡೆಯಲು ಪೋಲೀಸ್ ಇಲಾಖೆಯು ಜಿಲ್ಲಾಡಳಿತದೊಂದಿಗೆ ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸೇರಿ ಜಂಟಿ ಕಾರ್ಯಾಚರಣೆ ನಡೆಸಿ ಮಾದಕ ದ್ರವ್ಯ ಬಳಕೆಯನ್ನು ತಡೆಯಲು ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಸರಕಾರದ ಈ ಕ್ರಮಕ್ಕೆ ಮಕ್ಕಳ ಪೋಷಕರ ಸಹಕಾರ ನೀಡಬೇಕು. ಈ ಜಾಲದ ಹಿಂದೆ ಪೊಲೀಸ್ ಇಲಾಖೆಯ ಕೆಳ ಹಂತದ ಸಿಬ್ಬಂದಿಗಳು ಕೈಜೋಡಿಸಿರುವುದು ಗಮನಕ್ಕೆ ಬಂದಿದ್ದು ಸಂಬಂಧಿಸಿದ ಸಿಬ್ಬಂದಿಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈ ನಿಟ್ಟನಲ್ಲಿ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸೇರಿ ವಿಶೇಷ ಕಾರ್ಯಚಾರಣೆ ನಡೆಸಿ ಈ ಹಾವಳಿಯನ್ನು ನಿಗ್ರಹಿಸಬೇಕು. ಜಿಲ್ಲೆಯಲ್ಲಿ ಗೂಂಡಾಗಿರಿ ಹಾವಳಿಯನ್ನು ನಿಗ್ರಹಿಸಲು ಕಠಿಣ ಕ್ರಮಕ್ಕೆ ಪೋಲೀಸ್ ಮತ್ತು ಜಿಲ್ಲಾಡಳಿತಕ್ಕೆ ಸೂಚನೆ.
ಅನೈತಿಕ ಪೋಲೀಸ್ ಗಿರಿಯನ್ನು ಹತ್ತಿಕ್ಕಲು ಕಠಿಣ ಕ್ರಮಕ್ಕೆ ಪೋಲೀಸ್ ಇಲಾಖೆಗೆ ಸೂಚಿಸಿದ್ದು ಯಾವುದೇ ಶಕ್ತಿಯಾಗಲಿ ಕಾನೂನು ಕೈಗೆತ್ತಿಕೊಂಡಲ್ಲಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಪೊಲೀಸ್ ಮತ್ತು ಜಿಲ್ಲಾಡಳತಕ್ಕೆ ಸೂಚನೆ. ಜಿಲ್ಲೆಯು ಮತ್ತಷ್ಟು ಅಭಿವೃದ್ಧಿ ಹೊಂದಲು ವಿಫುಲ ಅವಕಾಶಗಳಿದ್ದು ಜಿಲ್ಲೆಯ ಕಾನೂನು ಸುವ್ಯವಸ್ಥೆಯು ಇದಕ್ಕೊಂದು ಸವಾಲಾಗಿದ್ದು ಜಿಲ್ಲೆಯ ಕಾನೂನು ಸುವ್ಯವಸ್ಥೆ ಮತ್ತು ಸಾಮರಸ್ಯ ಕಾಪಾಡಲು ನಿಷ್ಪಕ್ಷಪಾತವಾಗಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಮತ್ತು ಜಿಲ್ಲಾಡಳಿತಕ್ಕ ಸೂಚಿಸಲಾಗಿದೆ. ಮುಂದುವರೆದು ಜಿಲ್ಲೆಯ ಎಲ್ಲಾ ಪೊಲೀಸ್ ಸಿಬ್ಬಂದಿಗಳು ಪೊಲೀಸ್ ಮ್ಯಾನ್‌ವಲ್ ಮತ್ತು ಸಾಂವಿಧಾನಿಕವಾಗಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಯಿತು.