ರಾಜಕೀಯರಾಜ್ಯ

ಏನೇ ಆಗಲಿ 10 ಕೆಜಿ ಉಚಿತ ಅಕ್ಕಿ ಯೋಜನೆ ಶೀಘ್ರವಾಗಿ ಜಾರಿ: ಜೈರಾಮ್ ರಮೇಶ್

Whatever happens, 10 kg free rice scheme will be implemented soon: Jairam Ramesh

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ನವದೆಹಲಿ: ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆಯನ್ನು ಕೇಂದ್ರ ಸರ್ಕಾರ ಹಾಳು ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಆದರೂ, ರಾಜ್ಯ ಸರ್ಕಾರದ 10 ಕೆಜಿ ಉಚಿತ ಅಕ್ಕಿ ಯೋಜನೆಯನ್ನು ಏನೇ ಆಗಲಿ ಶೀಘ್ರವಾಗಿ ಜಾರಿಗೊಳಿಸಲಾಗುವುದು ಎಂದು ಪಕ್ಷದ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.

ಅನ್ನಭಾಗ್ಯ ಯೋಜನೆಯ ಅಕ್ಕಿ ವಿವಾದ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಜೈರಾಮ್ ರಮೇಶ್, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯು ‘ರೇವಿಡಿ (ಉಚಿತ) ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕದಲ್ಲಿ ಅನ್ನ ಭಾಗ್ಯ 2.0 ಯೋಜನೆಯ ಮೂಲಕ 10 ಕೆಜಿ ಉಚಿತ ಅಕ್ಕಿಯನ್ನು ನೀಡುವ ಕಾಂಗ್ರೆಸ್ ಭರವಸೆಯನ್ನು ಅಪರಾಧ ಎಂದು ಹೇಳಿ ಅದನ್ನು ಹಾಳು ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಬಡವರು ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಮತ ಚಲಾಯಿಸಿದ್ದಕ್ಕಾಗಿ ಶಿಕ್ಷೆ ನೀಡುತ್ತಿದ್ದಾರೆ ಎಂಬುದು ಕರ್ನಾಟಕದ ‘ದುರ್ಭಾಗ್ಯ’ (ದೌರ್ಭಾಗ್ಯ) ಹೊರತು, ಬೇರೇನೂ ಅಲ್ಲ ಎಂದು ದೂರಿದ್ದಾರೆ.

ನಡ್ಡಾ ಬೆದರಿಕೆಯಂತೆ ಅಕ್ಕಿ ಕೊಟ್ಟಿಲ್ಲ: 2023ರ ಜನವರಿ 1ರಿಂದ 2023ರ ಮೇ 24ರ ವರೆಗೆ ಕರ್ನಾಟಕದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವೊಂದೇ ಎಲ್ಲ ರಾಜ್ಯ ಸರ್ಕಾರಗಳು ಸಂಗ್ರಹಿಸಿದ ಅಕ್ಕಿಯ 95 ಪ್ರತಿಶತಕ್ಕಿಂತ ಹೆಚ್ಚಿನದನ್ನು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) ಅಡಿಯಲ್ಲಿ ಪ್ರತಿ ಕ್ವಿಂಟಾಲ್ 3,400 ರೂ. ದರದಲ್ಲಿ ಎತ್ತುವಳಿ ಮಾಡಿದೆ. ಇದಕ್ಕೆ ಬಹುಶಃ ಮೋದಿ ಆಶೀರ್ವಾದ ಇರಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರ ಬೆದರಿಕೆಯಂತೆ ಈ ಆಶೀರ್ವಾದವನ್ನು ಅತಿ ವೇಗದಲ್ಲಿ ಹಿಂಪಡೆಯಲಾಗಿದೆ ಎಂದು ಜೈರಾಮ್​ ರಮೇಶ್​ ಆರೋಪಿಸಿದ್ದಾರೆ.

ಮೋದಿ ಸರ್ಕಾರವು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಆಹಾರ ವಿತರಣಾ ಸಚಿವಾಲಯದ ಆಹಾರ ಮತ್ತು ಆಹಾರ ವಿತರಣೆಯನ್ನು ನಿಲ್ಲಿಸುವ ಬಗ್ಗೆ ಜೂನ್ 13ರಂದು ಆದೇಶ ನೀಡಿದೆ. ಇದು ಮುಖ್ಯವಾಗಿ ಕರ್ನಾಟಕವನ್ನು ಗುರಿಯಾಗಿಸಿಕೊಂಡಿದೆ ಎಂಬುದು ಈಗ ಸಂಪೂರ್ಣವಾಗಿ ಸ್ಪಷ್ಟವಾಗಿದೆ. ಈ ವರ್ಷ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರಗಳು ಖರೀದಿಸಿದ ಎಲ್ಲ ಅಕ್ಕಿಯ ಶೇ.95 ಕ್ಕಿಂತ ಹೆಚ್ಚು ಸಂಗ್ರಹಿಸಿದೆ ಎಂದರು.

ವಾಸ್ತವವಾಗಿ ಜೂನ್ 6 ಮತ್ತು 9ರಂದು ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮಾಡಿದ ಮನವಿಯ ಆಧಾರದ ಮೇಲೆ ಭಾರತೀಯ ಆಹಾರ ನಿಗಮ (ಎಫ್‌ಸಿಐ) ಜೂನ್ 12ರಂದು ಮಾರಾಟಕ್ಕೆ ಆದೇಶ ಹೊರಡಿಸಿದೆ. ಒಂದು ದಿನದ ನಂತರ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಆಹಾರ ವಿತರಣೆ ಸಚಿವಾಲಯವು ರಾಜ್ಯಗಳಿಗೆ ಅಕ್ಕಿ ಮಾರಾಟವನ್ನು ಸ್ಥಗಿತಗೊಳಿಸಿದೆ. ಇದು ಕರ್ನಾಟಕದ ಜನತೆಗೆ ಕಾಂಗ್ರೆಸ್ ಭರವಸೆ ನೀಡಿರುವ ಅನ್ನ ಭಾಗ್ಯ 2.0 ಯೋಜನೆಯ ಅನುಷ್ಠಾನ ಹಾಳುಗೆಡವಬೇಕೆಂಬ ಉದ್ದೇಶವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದರ ನಂತರ ತಕ್ಷಣವೇ ಜೂನ್ 14ರಂದು ಎಫ್‌ಸಿಐ ಪ್ರಧಾನ ವ್ಯವಸ್ಥಾಪಕರು ಜೂನ್ 12ರಂದು ಅಕ್ಕಿ ಮಾರಾಟದ ಹಿಂದಿನ ಆದೇಶವನ್ನು ಹಿಂಪಡೆದಿದ್ದಾರೆ. ಅಷ್ಟೇ ಅಲ್ಲ, ಎಫ್‌ಸಿಐ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಜೂನ್ 23ರಂದು ಪತ್ರಿಕಾಗೋಷ್ಠಿಯಲ್ಲಿ ಖಾಸಗಿ ವ್ಯಾಪಾರಿಗಳು ಬೇರೆ ರಾಜ್ಯಕ್ಕೆ ಮಾರಾಟ ಮಾಡದಂತೆ ಷರತ್ತುಗಳನ್ನು ಹಾಕಲಾಗುವುದು ಎಂದು ಹೇಳಿದ್ದಾರೆ. ಇದು ಯೋಜನೆಯನ್ನು ಹಾಳುಗೆಡವಲು ಮಾಡಿದ ಸ್ಪಷ್ಟ ನಿದರ್ಶನ ಅಲ್ಲವೇ ಎಂದು ಜೈರಾಮ್​ ರಮೇಶ್​ ಪ್ರಶ್ನಿಸಿದ್ದಾರೆ.

ಎಫ್‌ಸಿಐ ಸಾಕಷ್ಟು ದಾಸ್ತಾನು ಹೊಂದಿದೆ: ಮೋದಿ ಸರ್ಕಾರದ ಈ ನಡೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಖಾತರಿಪಡಿಸಿದ ಹೆಚ್ಚುವರಿ 5 ಕೆಜಿ ಉಚಿತ ಅಕ್ಕಿಯನ್ನು ಗುರಿಯಾಗಿಸಿಕೊಂಡಿಲ್ಲ. ಬದಲಿಗೆ ಇದು ಒಟ್ಟು 10 ಕೆಜಿ ಉಚಿತ ಅಕ್ಕಿ ಮೇಲೂ ಪರಿಣಾಮ ಉಂಟಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ನಿಗದಿಪಡಿಸಿದ್ದನ್ನು ಮೀರಿ ಕರ್ನಾಟಕ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಹೆಚ್ಚುವರಿ 39 ಲಕ್ಷ ಫಲಾನುಭವಿಗಳಿಗೆ ನೀಡುತ್ತಿರುವ 5 ಕೆಜಿಯ ಮೂಲ ಅರ್ಹತೆಯ ಮೇಲೂ ಪರಿಣಾಮ ಬೀರುತ್ತದೆ. ಕರ್ನಾಟಕ ಮತ್ತು ದೇಶದ ಅಗತ್ಯಗಳನ್ನು ಪೂರೈಸಲು ಎಫ್‌ಸಿಐ ಸಾಕಷ್ಟು ದಾಸ್ತಾನುಗಳನ್ನು ಹೊಂದಿದೆ ಎಂಬುದು ಸತ್ಯ. ಮೋದಿ ಸರ್ಕಾರವು ಕರ್ನಾಟಕ ಸರ್ಕಾರವು ಕರ್ನಾಟಕದ ಜನರಿಗೆ ತನ್ನ ಭರವಸೆಯನ್ನು ಪೂರೈಸುವ ಪ್ರತಿಯೊಂದು ಮಾರ್ಗವನ್ನು ಮುಚ್ಚಲು ಪ್ರಯತ್ನಿಸುತ್ತಿದೆ ಎಂದು ರಮೇಶ್ ದೂರಿದರು.

ಮೋದಿ ಸರ್ಕಾರ ಹೇಳಿಕೊಂಡಂತೆ ಅಕ್ಕಿ ದಾಸ್ತಾನು ಖಾಲಿಯಾಗಿದ್ದರೆ, ಎಥೆನಾಲ್ ಉತ್ಪಾದನೆ ಮತ್ತು ಪೆಟ್ರೋಲ್ ಮಿಶ್ರಣಕ್ಕಾಗಿ ಎಫ್‌ಸಿಐನ ಸೆಂಟ್ರಲ್ ಪೂಲ್ ಸ್ಟಾಕ್‌ನಿಂದ ಅಕ್ಕಿ ಹಂಚಿಕೆ ಮತ್ತು ಎತ್ತುವಿಕೆಯು ಕ್ವಿಂಟಲ್‌ಗೆ 2,000 ರೂ. ದರದಲ್ಲಿ ಏಕೆ ಮುಂದುವರಿದಿದೆ?. ದಾಸ್ತಾನು ಖಾಲಿಯಾಗಿದ್ದರೆ ಈ ವರ್ಷ ಎಥೆನಾಲ್ ಉತ್ಪಾದನೆಗೆ 1.5 ಲಕ್ಷ ಮಿಲಿಯನ್​ ಅಕ್ಕಿಯನ್ನು ಏಕೆ ಮೀಸಲಿಡಲಾಗಿದೆ?. ಕರ್ನಾಟಕದ ಜನರ ಆಹಾರ ಭದ್ರತೆಗಿಂತ ಎಥೆನಾಲ್ ಉತ್ಪಾದನೆ ಮುಖ್ಯವೇ ಎಂದು ಪ್ರಶ್ನಿಸಿದ್ದಾರೆ.

ಬಡವರ ರಕ್ಷಣೆ ನೀಡಿದ್ದು ಆಹಾರ ಭದ್ರತಾ ಕಾಯ್ದೆ: ಬಡವರಿಗೆ ಅನುಕೂಲವಾಗುವ ಕಾಂಗ್ರೆಸ್‌ನ ಯೋಜನೆಗಳನ್ನು ಪ್ರಧಾನಿ ವಿರೋಧಿಸುತ್ತಿರುವುದು ಇದೇ ಮೊದಲಲ್ಲ. 2013ರ ಆಗಸ್ಟ್ 13ರಂದು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಹಾರ ಭದ್ರತಾ ಮಸೂದೆಯನ್ನು ವಿರೋಧಿಸಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಕೋವಿಡ್ -19 ಸಾಂಕ್ರಾಮಿಕ ಸಂಕಷ್ಟದ ಸಮಯದಲ್ಲಿ ದೇಶದ ಬಡವರ ರಕ್ಷಣೆ ನೀಡಿದ್ದು ಕಾಂಗ್ರೆಸ್ ಪಕ್ಷವು ಜಾರಿಗೆ ತಂದ ಅದೇ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಾಗಿದೆ ಎಂದರು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಆನ್ ಯೋಜನೆಯ ಮರುನಾಮಕರಣ ಪ್ಯಾಕೇಜ್ ಅಡಿಯಲ್ಲಿ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ನೀಡಲಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯು ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವು ಜನರ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಿರುವ ಎಲ್ಲವನ್ನೂ ಪ್ರಯತ್ನ ಮಾಡುತ್ತದೆ. 10 ಕೆಜಿ ಉಚಿತ ಅಕ್ಕಿಯೊಂದಿಗೆ ಅನ್ನ ಭಾಗ್ಯ 2.0 ಖಾತರಿಯನ್ನು ಏನೇ ಆಗಲಿ ಶೀಘ್ರವಾಗಿ ಜಾರಿಗೊಳಿಸಲಾಗುವುದು ಎಂದು ಜೈರಾಮ್ ರಮೇಶ್ ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ...

Back to top button
>