ರಾಜಕೀಯರಾಜ್ಯ

ನಾಳೆಯಿಂದ 3 ದಿನ ನೂತನ ಶಾಸಕರಿಗೆ ತರಬೇತಿ ಶಿಬಿರ.. ಇಂದು ಸಿಎಂ ಸಿದ್ದರಾಮಯ್ಯರಿಂದ ಕಾರ್ಯಕ್ರಮ ಉದ್ಘಾಟನೆ

3 days training camp for new MLAs from tomorrow.. CM Siddaramaiah will inaugurate the program today

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು: ಹೊಸದಾಗಿ ವಿಧಾನಸಭೆ ಪ್ರವೇಶಿಸುವ ಶಾಸಕರಿಗೆ ಅಗತ್ಯ ತರಬೇತಿ ನೀಡುವುದು ಎಂದಿನ ವಾಡಿಕೆ.

ಅದೇ ರೀತಿ 16ನೇ ವಿಧಾನಸಭೆಗೆ ಆಯ್ಕೆಯಾದ 70 ಶಾಸಕರಿಗೆ ಸಂಸದೀಯ ಕಲಾಪದ ಬಗ್ಗೆ ಅರಿವು ಮೂಡಿಸಲು ಜೂ.26 ರಿಂದ 28ರ ವರೆಗೆ ಮೂರು ದಿನಗಳ ಕಾಲ ತರಬೇತಿ ಶಿಬಿರ ಆಯೋಜಿಸಲಾಗಿದೆ.

ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಆರೋಗ್ಯ ಸುಸ್ಥಿರತೆ ಮತ್ತು ಜ್ಞಾನಾಭಿವೃದ್ಧಿಗೆ ಸಂಬಂಧಿಸಿದಂತೆ ಈ ತರಬೇತಿಯಲ್ಲಿ ಮಾಹಿತಿ ಒದಗಿಸಲಾಗುತ್ತದೆ. ಹೊಸ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಸದೀಯ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಉದ್ದೇಶದಿಂದ, ಯುವಜನರ ಆಲೋಚನೆಗಳು, ದೂರದೃಷ್ಟಿ, ಪ್ರತಿಭೆ ಬಿಂಬಿಸುವ ಉದ್ದೇಶ ಈ ಶಿಬಿರ ಆಯೋಜನೆಯ ಹಿಂದಿದೆ.

ಶಿಬಿರವನ್ನು ನೆಲಮಂಗಲದ ಸಮೀಪದ ಧರ್ಮಸ್ಥಳ ಕ್ಷೇಮವನದಲ್ಲಿ ಹಮ್ಮಿಕೊಳ್ಳಲಾಗಿದೆ. ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಪ್ರತಿಯೊಬ್ಬ ಶಾಸಕರೂ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆಯೋಜನೆಯ ಉದ್ದೇಶ ಈಡೇರಿಸಬೇಕು ಮತ್ತು ಇದರ ಲಾಭ ಪಡೆಯಬೇಕು ಎಂದು ಸ್ಪೀಕರ್ ಯು. ಟಿ. ಖಾದರ್ ಸಹ ಮನವಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ: ಜೂ.25ರಂದು( ಇಂದು) ಸಂಜೆ ಕ್ಷೇಮವನದಲ್ಲಿ ನೂತನ ಶಾಸಕರು ಆಗಮಿಸಿ ನೋಂದಣಿ ಮಾಡಿಕೊಳ್ಳಲಿದ್ದಾರೆ. ಜೂ.26ರಿಂದ ಮೂರು ದಿನಗಳ ಕಾಲ ಬೆಳಗ್ಗೆ 6 ರಿಂದ ಬೆಳಗ್ಗೆ 9ರ ವರೆಗೆ ಆರೋಗ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯಲಿವೆ. ಬೆಳಗ್ಗೆ 10 ರಿಂದ ಸಂಜೆಯವರೆಗೆ ಹಿರಿಯ ಸದಸ್ಯರು ಶಿಬಿರದಲ್ಲಿ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಿದ್ದಾರೆ. ಜೂ.26ರಂದು ಮಧ್ಯಾಹ್ನ 12ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ಪಾಲ್ಗೊಳ್ಳಲಿದ್ದಾರೆ.

27ರಂದು ಸಂಜೆ ವೀರೇಂದ್ರ ಹೆಗ್ಗಡೆರಿಂದ ಭಾಷಣ: ಮೂರು ದಿನಗಳ ಕಾಲ ಪ್ರತಿದಿನ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್‌. ಯಡಿಯೂರಪ್ಪ, ಎಚ್‌. ಡಿ. ಕುಮಾರಸ್ವಾಮಿ ಅವರೊಂದಿಗೆ ನೂತನ ಶಾಸಕರ ಸಂವಾದ ನಡೆಸುವುದು ವಿಶೇಷ. ಮೊದಲ ದಿನ ಸಂಜೆ 6 ರಿಂದ 7ಗಂಟೆಯವರೆಗೆ ಬ್ರಹ್ಮಕುಮಾರೀಸ್‌ ಸಂಸ್ಥೆಯ ಬಿ. ಕೆ. ವೀಣಾ ಮತ್ತು ಬಿ. ಕೆ. ಭುವನೇಶ್ವರಿ ಅವರು ‘ಹಿತವಚನ’ ನೀಡಲಿದ್ದಾರೆ. 27ರಂದು ಸಂಜೆ 4ರಿಂದ 5.30ರವರೆಗೆ ಡಿ. ವೀರೇಂದ್ರ ಹೆಗ್ಗಡೆ ಅವರು ‘ಸಾಮರಸ್ಯ ಸಮಾಜ, ಅಭಿವೃದ್ಧಿ ಕರ್ನಾಟಕ, ಬಲಿಷ್ಠ ಭಾರತ ನಿರ್ಮಾಣದಲ್ಲಿ ಶಾಸಕರ ಪಾತ್ರ’ದ ಬಗ್ಗೆ ಭಾಷಣ ಮಾಡಲಿದ್ದಾರೆ.

28 ಕ್ಕೆ ಮಹಮ್ಮದ್‌ ಕುಂಞಿರಿಂದ ಬಾಂಧವ್ಯದ ಮಾತು: ಕೊನೆಯ ದಿನ (ಜೂನ್‌ 28) ಬೆಳಗ್ಗೆ 11.45ರಿಂದ 1.15ರವರೆಗೆ ‘ಜನಪ್ರತಿನಿಧಿ ಮತ್ತು ಜನರ ಮಧ್ಯೆ ಸಂಬಂಧ/ ಬಾಂಧವ್ಯವನ್ನು ವೃದ್ಧಿಗೊಳಿಸುವುದು’ ವಿಷಯದ ಕುರಿತು ಮಹಮ್ಮದ್‌ ಕುಂಞಿ ಮಾತನಾಡಲಿದ್ದಾರೆ ಎಂದು ಆಮಂತ್ರಣ ಪತ್ರದಲ್ಲಿ ತಿಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಿದರೆ, ವಿಧಾನ ಸಭಾಧ್ಯಕ್ಷ ಯು. ಟಿ. ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಜಮೀರ್ ಅಹಮದ್ ಖಾನ್ ಪಾಲ್ಗೊಳ್ಳಲಿದ್ದಾರೆ.

ಧರ್ಮಸ್ಥಳ ಧರ್ಮಾಧಿಕಾರಿಗಳು ಮತ್ತು ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆ, ಮಹಮದ್ ಕುಂಞ ಅವರಿಗೆ ಮಾತ್ರ ಶಾಸಕರಿಗೆ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಹ್ವಾನ ನೀಡಲಾಗಿದೆ. ಇವರಿಬ್ಬನ್ನು ಹೊರತುಪಡಿಸಿದರೆ ಬೇರಾವುದೇ ಧಾರ್ಮಿಕ ವ್ಯಕ್ತಿಗಳು ಭಾಗವಹಿಸುತ್ತಿಲ್ಲ. 26ರಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ ಅವರು ಸದನದಲ್ಲಿ ಸದಸ್ಯರ ಭಾಗವಹಿಸುವಿಕೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವುದು, ಅಧಿವೇಶನದ ವಿವರ, ಪ್ರಶ್ನೋತ್ತರ ಕಲಾಪ, ಶೂನ್ಯ ವೇಳೆ ಮತ್ತು ಗಮನ ಸೆಳೆಯುವ ಸೂಚನೆ ಕುರಿತು ಮಾಹಿತಿ ನೀಡಲಿದ್ದಾರೆ.

ಶಾಸನ ರಚನೆ ಕುರಿತು ಕಾಗೇರಿಯವರಿಂದ ಉಪನ್ಯಾಸ: ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಸದನದಲ್ಲಿ ಸದಸ್ಯರ ಭಾಗವಹಿಸುವಿಕೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವುದು, ನಿಲುವಳಿ ಸೂಚನೆ, ನಿಯಮ-69, ವಿಶ್ವಾಸ ಮತ್ತು ಅವಿಶ್ವಾಸ ನಿರ್ಣಯ ಕುರಿತು ಮಾರ್ಗದರ್ಶನ ಮಾಡಲಿದ್ದಾರೆ. ಸಂಜೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಸಂವಾದ ಏರ್ಪಡಿಸಲಾಗಿದೆ. 27 ರಂದು ಮಾಜಿ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಾಸನ ರಚನೆ ಹಾಗೂ ಅದರಲ್ಲಿ ಸದಸ್ಯರುಗಳ ಭಾಗವಹಿಸುವಿಕೆ ಮತ್ತು ಉಭಯ ಸದನಗಳ ಸಂಬಂಧ ಕುರಿತು ಉಪನ್ಯಾಸ ನೀಡಲಿದ್ದಾರೆ.

ಹಾಸ್ಯ ಭರಿತ ನಿರ್ವಹಣೆ ಕುರಿತು ಮುಖ್ಯಮಂತ್ರಿ ಚಂದ್ರು ಸಲಹೆ: ಹಿರಿಯ ಸದಸ್ಯರಾದ ಟಿ.ಬಿ. ಜಯಚಂದ್ರ ಅವರು ಶಾಸಕರ ಕರ್ತವ್ಯಗಳು, ಜವಾಬ್ದಾರಿ ಮತ್ತು ಹಕ್ಕು ಬಾಧ್ಯತೆಗಳ ಕುರಿತು ಮಾರ್ಗದರ್ಶನ ಮಾಡಲಿದ್ದಾರೆ. ಮತ್ತೊಬ್ಬ ಹಿರಿಯ ಸದಸ್ಯರಾದ ಅಡಗೂರು ಎಚ್. ವಿಶ್ವನಾಥ್ ಅವರು ಸದಸ್ಯರು ಅಳವಡಿಸಿಕೊಳ್ಳಬೇಕಾದ ನೀತಿ ನಿಯಮಗಳು, ಪಾಲಿಸಬೇಕಾದ ನಿಯಮಗಳು ಸಂಸದೀಯ ಭಾಷೆಯ ಬಳಕೆ ಮತ್ತು ಜನ ಮೆಚ್ಚಿದ ಶಾಸಕನಾಗುವುದು ಹೇಗೆ ಎಂದು ತಿಳಿಸಿಕೊಡಲಿದ್ದಾರೆ. ಮುಖ್ಯಮಂತ್ರಿ ಚಂದ್ರು ಅವರು ಶಾಸನ ಸಭೆಯಲ್ಲಿ ಕರ್ತವ್ಯದ ಹಾಸ್ಯ ಭರಿತ ನಿರ್ವಹಣೆ ಕುರಿತು ತಿಳಿಸಿಕೊಡಲಿದ್ದಾರೆ. ಸಂಜೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರೊಂದಿಗೆ ನೂತನ ಶಾಸಕರು ಸಂವಾದ ನಡೆಸಲಿದ್ದಾರೆ.

ಇದನ್ನೂ ಓದಿ...

Back to top button
>