ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಶಿಕ್ಷಣ ಕ್ಷೇತ್ರಕ್ಕೆ ಕಾರ್ಪೋರೇಟ್ ಕಂಪನಿಗಳ ಸಿಎಸ್‍ಆರ್ ಫಂಡ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಸಂಬಂಧ ಇಂದು ಬೆಳಗ್ಗೆ ಸಿಎಸ್‍ಆರ್ ಸಮಾವೇಶ ಏರ್ಪಡಿಸಲಾಗಿದೆ. ಕಾರ್ಪೋರೇಟ್ ಕಂಪನಿಗಳ ಮುಖ್ಯಸ್ಥರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಶಿಕ್ಷಣ ಸಚಿವರುಗಳು ಸಂವಾದ ನಡೆಸಲಿದ್ದಾರೆ.
‘ಪಾಲುದಾರರ ಸಹಯೋಗ ಮತ್ತು ಸಾಮಾಜಿಕ ಪರಿಣಾಮ’ ವಿಷಯ ಕುರಿತಂತೆ ಇಂದಿನ ಸಿಎಸ್‍ಆರ್ ಸಮಾವೇಶ ನಡೆಯಲಿದೆ. ಶಿಕ್ಷಣವನ್ನು ಜ್ಞಾನ ಪ್ರಸಾರಕ್ಕಾಗಿ ಇರುವ ಒಂದು ಪ್ರಕ್ರಿಯೆಯೆಂದು ಭಾವಿಸದೇ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪ್ರಬಲ ಸಾಧನವಾಗಿ ಬಳಸಿಕೊಳ್ಳಬೇಕೆನ್ನುವ ಉದ್ದೇಶದಿಂದ ಈ ಸಮಾವೇಶ ಸಂಘಟಿಸಲಾಗುತ್ತಿದೆ.
ದೇಶದ ನಾವೀನ್ಯತೆ ಸೂಚ್ಯಂಕದಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ. ನಾವೀನ್ಯತೆಯನ್ನು ಉತ್ತೇಜಿಸಲು, ಡಿಜಿಟಲ್ ಸಾಕ್ಷರತೆ ಕಲಿಸಲು, ಶಾಲೆಯಲ್ಲಿ ಕೌಶಲ್ಯ ನೀಡುವುದರ ಜೊತೆ ಜೊತೆಗೆ ಭವಿಷ್ಯದ ಪೀಳಿಗೆಯು ಕರ್ನಾಟಕದ ಆರ್ಥಿಕ ಬೆಳವಣಿಗೆಗೆ ಸಮರ್ಥವಾಗಿ ಕೊಡುಗೆ ನೀಡಲು ಸಾಕಷ್ಟು ಕೌಶಲ್ಯ ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ಪಾಲುದಾರರು – ಕೈಗಾರಿಕೆ, ಸರ್ಕಾರ, ನಾಗರಿಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕು ಎನ್ನುವ ಸಂದೇಶವನ್ನು ಸಮಾವೇಶದಲ್ಲಿ ರವಾನಿಸಲಾಗುತ್ತದೆ.
ರಾಜ್ಯ ಸರ್ಕಾರವು ತನ್ನ ಬಜೆಟ್‍ನ ಶೇಕಡಾ 13ರಷ್ಟನ್ನು ಶಿಕ್ಷಣಕ್ಕಾಗಿ ವೆಚ್ಚ ಮಾಡುತ್ತಿದೆ. ಇದರ ಜೊತೆಗೆ ಸಿಎಸ್‍ಆರ್ ಫಂಡ್ ಮೂಲಕ ಉದ್ಯಮ ಪಾಲುದಾರಿಕೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ 2021-22ರ ವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಸಿಎಸ್‍ಆರ್ ಅಡಿ 7,456 ಕೋಟಿ ರೂ. ವ್ಯಯಿಸಿದ್ದು, ಶಿಕ್ಷಣಕ್ಕಾಗಿ 3667 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾರೆ.
ಸಿಎಸ್‍ಆರ್ ಕಂಪನಿಗಳ ಕಾಯ್ದೆಯ ಪ್ರಕಾರ, ವಾರ್ಷಿಕ ಸರಾಸರಿ ನಿವ್ವಳ ಲಾಭದ ಶೇ.2ನ್ನು ಕಂಪನಿಗಳು ಸಾಮಾಜಿಕ ಚಟುವಟಿಕೆಗಳಿಗೆ ಖರ್ಚು ಮಾಡುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಿಕ್ಷಣದ ಅಭ್ಯುದಯಕ್ಕಾಗಿ ಕಂಪನಿಗಳ ಸಿಎಸ್‍ಆರ್ ಫಂಡ್ ಆಕರ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಹೆಜ್ಜೆ ಇಟ್ಟಿದೆ.
ಸಿಎಸ್‍ಆರ್ ಶೈಕ್ಷಣಿಕ ಸಮಾವೇಶವು ಸಿಎಸ್‍ಅರ್ ನೀತಿ, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸರ್ಕಾರಿ ಇಲಾಖೆಗಳ ವ್ಯಾಪ್ತಿಯಡಿ ಕಾರ್ಪೋರೇಟ್‍ಗಳಿಗೆ ಕೈ ಜೋಡಿಸಲು ಮತ್ತು ಸಾಮಾಜಿಕ ಪ್ರಗತಿಗೆ, ಸಾಮೂಹಿಕವಾಗಿ ಕೆಲಸ ಮಾಡುವ ಉದ್ದೇಶ ಹೊಂದಲಾಗಿದೆ. ಯುಎನ್‍ಡಿಪಿ, ಯುನಿಸೆಫ್ ಮತ್ತು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‍ಐಸಿಸಿಐ) ಜಂಟಿಯಾಗಿ ಈ ಸಮಾವೇಶ ಆಯೋಜಿಸಿದೆ. ಎಲ್ಲಾ ಪಾಲುದಾರರನ್ನು ಸಕ್ರಿಯವಾಗಿ ಒಂದುಗೂಡಿಸಿ ಮುಂದಿನ ಕ್ರಮಕ್ಕೆ ಸಜ್ಜುಗೊಳಿಸಲಾಗುತ್ತಿದೆ. ನವೀನ ಆಲೋಚನೆಗಳನ್ನು ಹಂಚಿಕೊಳ್ಳುವುದು ಹಾಗೂ ಹೊಸ ಪಾಲುದಾರಿಕೆ ರೂಪಿಸುವುದು ಸಮಾವೇಶದ ಉದ್ದೇಶಗಳಲ್ಲಿ ಒಂದಾಗಿದೆ.
ರಾಜ್ಯ ಸರ್ಕಾರವು ‘ಆಕಾಂಕ್ಷಾ’ ಎಂಬ ಸಮಗ್ರ ಸಿಎಸ್‍ಆರ್ ವೇದಿಕೆಯನ್ನು ರಚಿಸಿದೆ. ಸಂಪೂರ್ಣ ಪಾರದರ್ಶಕತೆ ಮತ್ತು ತಮ್ಮ ಸಿಎಸ್‍ಆರ್ ಬದ್ಧತೆಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಕಾರ್ಪೋರೇಟ್‍ಗಳಿಗೆ ಸಹಾಯವಾಗಲು ರೂಪಿಸಲಾಗಿದೆ. ಸಿಎಸ್‍ಆರ್ ಸಮಾವೇಶದ ವೇಳೆ ಸಿಎಸ್‍ಆರ್ ಉತ್ತಮ ಅಭ್ಯಾಸಗಳನ್ನು ಪ್ರಮುಖ ಸಾಧನಗಳಾಗಿ ಪ್ರಸ್ತುತಪಡಿಸಲಾಗುತ್ತಿದೆ.
ಇಂದು ಬೆಳಗ್ಗೆ 11 ಗಂಟೆಯಿಂದ 1 ಗಂಟೆಯ ತನಕ ಮೂರು ತಾಸುಗಳ ತನಕ ಶಿಕ್ಷಣಕ್ಕಾಗಿ ಸಿಎಸ್‍ಆರ್ ಸಮಾವೇಶ ಜೆ.ಡಬ್ಲ್ಯೂ ಮ್ಯಾರಿಯಟ್‍ನಲ್ಲಿ ನಡೆಯಲಿದೆ. ಕಾರ್ಪೋರೇಟ್ ಕಂಪನಿಗಳ ಜೊತೆ ನಡೆಯುವ ಸಂವಾದದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ. ಪರಮೇಶ್ವರ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ್, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್, ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.