ರಾಜಕೀಯರಾಜ್ಯ

ಸಮಯಕ್ಕೆ ಸರಿಯಾಗಿ ಸಿ ವಿಜಿಲ್ ದೂರುಗಳ ವಿಲೇವಾರಿ ಮಾಡಿ: ಡಿಸಿ ನಲಿನ್ ಅತುಲ್

Timely disposal of C Vigil complaints: DC Nalin Atul

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ 

ಕೊಪ್ಪಳ: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣೆಗೆ ಸಂಬಂಧಿಸಿದ ಸಿ ವಿಜಿಲ್‌ಗೆ ಬರುವ ದೂರುಗಳನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಲಿನ್ ಅತುಲ್, ಎ.ಆರ್.ಒ. ಹಾಗೂ ತಹಸೀಲ್ದಾರರಿಗೆ ಸೂಚನೆ  ನೀಡಿದರು.

ಲೋಕಸಭೆ ಚುನಾವಣೆ 2024ರ ಹಿನ್ನಲೆಯಲ್ಲಿ ಎ.ಆರ್.ಒ.ಗಳು ಮತ್ತು ತಹಸೀಲ್ದಾರರೊಂದಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮತದಾನ ಕೇಂದ್ರಗಳಲ್ಲಿ ಖಚಿತವಾದ ಕನಿಷ್ಠ ಸೌಲಭ್ಯಗಳನ್ನು ಒದಗಿಸಬೇಕಾಗಿದ್ದು, ಎಲ್ಲ ಮತಗಟ್ಟೆಗಳಿಗೆ ರ‍್ಯಾಂಪ್, ಶೌಚಾಲಯಗಳು, ಕುಡಿಯುವ ನೀರು, ವಿದ್ಯುತ್ ಮತ್ತು ನೆರಳು ಒದಗಿಸಲಾಗಿದೆಯೇ ಎಂದು ಮರು-ಪರಿಶೀಲಿಸಿ ಈ ಎಲ್ಲ ಸೌಲಭ್ಯಗಳ ಕುರಿತು ಖಚಿತಪಡಿಸಿಕೊಳ್ಳಬೇಕು. ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಎಲ್ಲ ಅನಧಿಕೃತ ರಾಜಕೀಯ ಜಾಹೀರಾತುಗಳನ್ನು ತೆಗೆದುಹಾಕಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಚೆಕ್‌ಪೋಸ್ಟ್‌ಗಳ ಮೂಲಕ ಹಾದುಹೋಗುವ ಎಲ್ಲ ವಾಹನಗಳನ್ನು ಸರಿಯಾದ ಕಾರ್ಯವಿಧಾನದೊಂದಿಗೆ ಪರಿಶೀಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಎಲ್ಲ ಅನುಮತಿಗಳನ್ನು ಏಕ ಗವಾಕ್ಷಿ ಸಮಿತಿಯ ಮೂಲಕ ನೀಡಲಾಗುವುದು. ಅಂತಹ ಎಲ್ಲ ಅನುಮತಿಗಳ ಬಗ್ಗೆ ವಿಡಿಯೊ ಕಣ್ಗಾವಲು ತಂಡಗಳಿಗೆ ತಿಳಿಸಬೇಕು ಎಂದು ಹೇಳಿದರು.

ಉಪ ವಿಭಾಗಾಧಿಕಾರಿಗಳ ಹಂತದಲ್ಲಿ ಸ್ಟ್ರಾಂಗ್ ರೂಂಗಳ ತಯಾರಿ, ಸಿಸಿಟಿವಿ 24*7 ವ್ಯವಸ್ಥೆ ಹಾಗೂ ಒಂದು ವಿಭಾಗದ ಪೊಲೀಸ್ ಭದ್ರತೆಯನ್ನು ನಿಯೋಜಿಸಬೇಕು. ಇವಿಎಂಗಳು ಮತ್ತು ವಿವಿಪ್ಯಾಟ್‌ಗಳ ರ‍್ಯಾಂಡಂಮೈಜೆಷನ್ ಮತ್ತು ವಿತರಣೆಗೂ ಕ್ರಮ ಕೈಗೊಳ್ಳಬೇಕು. ಇವಿಎಂಗಳನ್ನು ಪೊಲೀಸ್ ಬೆಂಗಾವಲುವಿನೊಂದಿಗೆ ಜಿಪಿಎಸ್ ಅಳವಡಿಸಿದ ಕಂಟೈನರ್‌ಗಳ ಮೂಲಕ ಮಾತ್ರ ಸಾಗಿಸಬೇಕು. ಎಲ್ಲ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಕಳುಹಿಸುವ ಮೊದಲು ಇಎಂಎಸ್ ಅಪ್ಲಿಕೇಶನ್ ಮೂಲಕ ಸ್ಕ್ಯಾನ್ ಮಾಡಬೇಕು ಎಂದರು.

ರಾಷ್ಟ್ರೀಯ ಮತ್ತು ರಾಜ್ಯ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಲಿಖಿತವಾಗಿ ಸೂಚನೆ ನೀಡಬೇಕು. ಇವಿಎಂಗಳು ಮತ್ತು ವಿವಿಪ್ಯಾಟ್‌ಗಳನ್ನು ಸಂಗ್ರಹಿಸಬೇಕು ಮತ್ತು ಸ್ಟ್ರಾಂಗ್ ರೂಮ್‌ಗಳನ್ನು ಅವರ ಉಪಸ್ಥಿತಿಯಲ್ಲಿ ಸೀಲ್ ಮಾಡಬೇಕು. ಇವಿಎಂಗಳನ್ನು ಪ್ರತ್ಯೇಕ ಸ್ಟ್ರಾಂಗ್ ರೂಮ್‌ನಲ್ಲಿ ಇರಿಸಿ, ಈ ಕಾರ್ಯದ ಸಂಪೂರ್ಣ ಪ್ರಕ್ರಿಯೆಯ ವಿಡಿಯೊಗ್ರಫಿಯನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ, ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಮಲ್ಲಪ್ಪ ತೊದಲಬಾಗಿ, ಟಿ.ಎಸ್.ರುದ್ರೇಶಪ್ಪ, ರೇಷ್ಮಾ ಹಾನಗಲ್ ಹಾಗೂ ಅನ್ನಪೂರ್ಣ ಮುದುಕಮ್ಮನವರ ಸೇರಿದಂತೆ ವಿವಿಧ ತಾಲೂಕುಗಳ ತಹಸೀಲ್ದಾರರು, ಜಿಲ್ಲಾ ಚುನಾವಣಾ ಶಾಖೆಯ ತಹಸೀಲ್ದಾರರು ಹಾಗೂ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ...

Back to top button
>