ರಾಜಕೀಯರಾಜ್ಯ

ಸೋನು ಗೌಡ ದತ್ತು ಪಡೆದ ಪ್ರಕರಣ; ಮಗುವಿನ ಪಾಲಕರಿಗೂ ಸಂಕಷ್ಟ; ಕಾನೂನು ಏನು ಹೇಳುತ್ತದೆ?

Sonu Gowda adoption case; Difficulty for the child's parents; What does the law say?

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ 

ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಒಟಿಟಿ 1’ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅವರು 7 ವರ್ಷದ ಬಡ ಹುಡುಗಿಯನ್ನು ದತ್ತು ತೆಗೆದುಕೊಂಡಿರುವ ವಿಚಾರ ಸದ್ಯ ಸದ್ದು ಮಾಡುತ್ತಿದೆ. ನಿಯಮ ಉಲ್ಲಂಘನೆ ಕಾರಣಕ್ಕೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆಯಿಂದ ಸೋನು ಗೌಡ ವಿರುದ್ಧ ದೂರ ದಾಖಲಾಗಿತ್ತು. ಅದರಂತೆ ಮಾರ್ಚ್‌ 23ರಂದು ಪೊಲೀಸರು ಸೋನು ಗೌಡ ಅವರನ್ನು ಬಂಧಿಸಿದ್ದಾರೆ. ಜೆಜೆ ಕಾಯ್ದೆ ಅಡಿಯಲ್ಲಿ ಸೋನು ಗೌಡ ಅವರನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಜತೆಗೆ ಈ ಪ್ರಕರಣದಲ್ಲಿ ಬಾಲಕಿಯ ತಂದೆ ತಾಯಿಗೂ ಸಂಕಷ್ಟ ಎದುರಾಗಿದೆ. ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ ಮಗುವಿನ ತಂದೆ ತಾಯಿಗೆ ನೋಟಿಸ್ ನೀಡಿದೆ.

ನಿಯಮ ಏನು ಹೇಳುತ್ತದೆ?

ದತ್ತು ತೆಗೆದುಕೊಳ್ಳಬೇಕಾದರೆ‌ ಕೆಲವೊಂದು ನಿಯಮ ಪಾಲಿಸಬೇಕಾಗುತ್ತದೆ. ದತ್ತು ತೆಗೆದುಕೊಳ್ಳುವ ತಾಯಿ ಮತ್ತು ಮಗುವಿಗೆ 25 ವರ್ಷಗಳ ಅಂತರವಿರಬೇಕು. ಆದರೆ ಇಲ್ಲಿ ಮಗುವಿಗೆ 8 ವರ್ಷ ಮತ್ತು ಆಕೆಗೆ 26 ವರ್ಷ. ಹೀಗಾಗಿ ಅದು ನಿಯಮ ಉಲ್ಲಂಘನೆ ಮಾಡಿದಂತಾಗುತ್ತದೆ. ಇನ್ನು ರೀಲ್ಸ್‌ ಮಾಡುವ ಉದ್ದೇಶದಿಂದ ಸೋನು ಮಗುವನ್ನು ತನ್ನಿಷ್ಟ ಬಂದಂತೆ ಬಳಸಿಕೊಂಡಿದ್ದಾರೆಂಬ ಆರೋಪ ಕೂಡ ಇದೆ. ಮಕ್ಕಳ ಕಲ್ಯಾಣ ಸಮಿತಿ ಈ ಎಲ್ಲ ಆಧಾರದ ಮೇಲೆ ಸೋನು ವಿರುದ್ಧ ದೂರು ದಾಖಲಿಸಿದೆ.

ಮಗುವಿನ ತಂದೆ ತಾಯಿಗೆ ಏಕೆ ನೋಟಿಸ್‌?

ತಾವು ಮಗುವನ್ನು ಹೆತ್ತರೂ ಅದನ್ನು ಬೇರೆಯವರಿಗೆ ವಹಿಸಬೇಕಾದರೆ ಕಾನೂನಿನ ನಿಯಮಗಳು ಹಾಗೂ ಪ್ರಕ್ರಿಯೆಗಳನ್ನು ಪಾಲಿಸುವುದು ಕಡ್ಡಾಯ. ಆದರೆ ಈ ಪ್ರಕರಣದಲ್ಲಿ ಇಂತಹ ಯಾವುದೇ ನಿಯಮಗಳ ಪಾಲನೆ ಆಗಿಲ್ಲ. ಹೀಗಾಗಿ ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ ಅಧಿಕಾರಿಗಳು ಮಗುವನ್ನು ದತ್ತು ಕೊಟ್ಟಿದ್ದಕ್ಕೆ ಕಾರಣ ಕೇಳಿ ನೋಟಿಸ್‌ ಕಳುಹಿಸಿದ್ದಾರೆ ಎನ್ನಲಾಗಿದೆ.

ಏನಾಗಲಿದೆ?

ಮಗುವಿನ ಪಾಲಕರ ವಿಚಾರಣೆ ವೇಳೆ ಅಧಿಕಾರಿಗಳು ಮಗುವನ್ನು ಕೊಟ್ಟಿದ್ದಕ್ಕೆ ಕಾರಣ ಕೇಳಲಿದ್ದಾರೆ. ಒಂದು ವೇಳೆ ಹಣ ಪಡೆದು ಮಗುವನ್ನು ಕೊಟ್ಟಿದ್ದರೆ ಪಾಲಕರ ವಿರುದ್ಧ ಕಾನೂನು ಪ್ರಕಾರ ದೂರು ದಾಖಲಾಗುವ ಸಾಧ್ಯತೆ ಇದೆ. ಬಡತನದ ಕಾರಣದಿಂದ ಮಗುವನ್ನ ನೋಡಿಕೊಳ್ಳಲು ಕೊಟ್ಟಿದ್ದು ಎಂದು ಹೇಳಿದರೆ ಹೆಚ್ಚೇನೂ ಸಮಸ್ಯೆಯಾಗದು ಎನ್ನುತ್ತಾರೆ ತಜ್ಞರು. ಬಡತನದ ಕಾರಣ ಕೊಟ್ಟರೆ ಅಧಿಕಾರಿಗಳು ಪಾಲಕರು ಹಾಗೂ ಮಗುವಿಗೆ ಕೌನ್ಸಿಲಿಂಗ್ ನಡೆಸಲಿದ್ದಾರೆ. ಈ ವೇಳೆ ಮಗುವನ್ನು ನೋಡಿಕೊಳ್ಳಲು ಸಾಧ್ಯವಿಲ್ಲ ಎಂದರೆ ಮಗುವಿನ ಭವಿಷ್ಯಕ್ಕೆ ಸರ್ಕಾರದಿಂದ ಅರ್ಥಿಕ ಸಹಾಯ ಒದಗಿಸುವ ಬಗ್ಗೆಯೂ ಪ್ರಸ್ತಾವ ನಡೆಸುವ ಸಾಧ್ಯತೆ ಇದೆ. ಇದಕ್ಕೂ ಪಾಲಕರು ಒಪ್ಪದಿದ್ದರೆ ಮಗುವನ್ನು ಸರ್ಕಾರ ಪೋಷಿಸಲಿದೆ.

ಸೋನು ಗೌಡ ಅವರನ್ನು ನಾಲ್ಕು ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶಿಸಿದೆ. ಹೀಗಾಗಿ ಅವರನ್ನು ಪೊಲೀಸರು ಕೋರ್ಟ್‌ನಿಂದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದಾರೆ. ಸೋಮವಾರ ಮತ್ತೆ ಕೋರ್ಟ್​ಗೆ ಹಾಜರುಪಡಿಸಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ...

Back to top button
>