ಅಂತಾರಾಷ್ಟ್ರೀಯಕ್ರೀಡೆ

ಸ್ವಿಸ್ ಓಪನ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಸಾತ್ವಿಕ್-ಚಿರಾಗ್ ಜೋಡಿ

Sathwik-Chirag pair made it to the Swiss Open semi-finals

ಭಾರತದ ಡೈನಾಮಿಕ್ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಸ್ವಿಸ್ ಓಪನ್ ಸೂಪರ್ ಸಿರೀಸ್ 300 ಬ್ಯಾಡ್ಮಿಂಟನ್(Swiss Open Super Series 300 badminton)ನ ಸೆಮಿಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಮೂರು ಸುತ್ತಿನಲ್ಲಿ ನಡೆದ ಕಠಿಣ ಪೈಪೋಟಿಯಲ್ಲಿ ಡೆನ್ಮಾರ್ಕ್‌ ಜೋಡಿಯಾದ ಜೆಪ್ಪೆ ಬೇ (Jeppe Bay) ಮತ್ತು ಲಾಸ್ಸೆ ಮೊಲ್ಹೆಡೆ (Lasse Molhede) ಅವರನ್ನು ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ, ಭಾರತದ ಈ ಜೋಡಿಯು ಬರೋಬ್ಬರಿ 54 ನಿಮಿಷಗಳ ಕಾಲ ಗೆಲುವಿಗಾಗಿ ಹೋರಾಡಿತು. ಮೊದಲ ಸುತ್ತಿನಲ್ಲಿ ಸೋತ ಜೋಡಿಯು, ಯಾವುದೇ ರೀತಿಯಲ್ಲೂ ಕುಗ್ಗದೆ ಮುಂದಿನ ಎರಡೂ ಸುತ್ತುಗಳಲ್ಲಿ ಭರ್ಜರಿಯಾಗಿ ಗೆದ್ದು ಅಗ್ರ ನಾಲ್ಕರ ಹಂತಕ್ಕೆ ಬಡ್ತಿ ಪಡೆದರು. ಮೊದಲ ಸುತ್ತಿನ್ಲಲಿ 15-21ರಿಂದ ಸೋತ ಜೋಡಿ, ನಂತರದ ಎರಡೂ ಸುತ್ತುಗಳಲ್ಲಿ ಕ್ರಮವಾಗಿ 21-11, 21-14 ರಲ್ಲಿ ಜಯಗಳಿಸಿತು.

ಈ ಜೋಡಿಯು ಶನಿವಾರ ತಡರಾತ್ರಿ ನಡೆಯಲಿರುವ ಪಂದ್ಯದಲ್ಲಿ ಮಲೇಷ್ಯಾದ ಓಂಗ್ ಯೂ ಸಿನ್ (Ong Yew Sin) ಮತ್ತು ಟಿಯೊ ಈ ಯಿ (Teo Ee Yi ) ಅವರನ್ನು ಎದುರಿಸಲಿದ್ದಾರೆ.‌ ಅಲ್ಲಿಯೂ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕುವ ಭರವಸೆಯಲ್ಲಿ ಜೋಡಿ ಇದೆ.

ಸ್ವಿಸ್ ಓಪನ್ ಸೂಪರ್ ಸಿರೀಸ್‌ನಲ್ಲಿ ಸದ್ಯ ಪ್ರಶಸ್ತಿಯ ಭರವಸೆ ನೀಡಿರುವ ಭಾರತದ ಶಟ್ಲರ್‌ಗಳು ಇವರಿಬ್ಬರೇ. ಈಗಾಗಲೇ ಪಿವಿ ಸಿಂಧು ಮತ್ತು ಲಕ್ಷ್ಯ ಸೇನ್ ಅವರಂತಹ ಬಲಿಷ್ಠ ಆಟಗಾರರು ಆರಂಭಿಕ ಸೋಲು ಅನುಭವಿಸಿದ್ದಾರೆ. ಹೀಗಾಗಿ ಪಂದ್ಯಾವಳಿಯಲ್ಲಿ ಉಳಿದಿರುವ ಭಾರತೀಯ ಸ್ಪರ್ಧಿಗಳು ಸಾತ್ವಿಕ್(Satwiksairaj Rankireddy) ಮತ್ತು ಚಿರಾಗ್ (Chirag Shetty) ಮಾತ್ರ.

ಮೊದಲ ಗೇಮ್ ಅನ್ನು 15-21ರಲ್ಲಿ ಸುಲಭವಾಗಿ ಕಳೆದುಕೊಂಡ ಭಾರತದ ಜೋಡಿಗೆ ಉತ್ತಮ ಆರಂಭ ಸಿಗಲಿಲ್ಲ. ಒಂದು ಹಂತದಲ್ಲಿ 15-16 ಅಂತರದಿಂದ ಕೇವಲ ಒಂದು ಅಂಕಗಳ ಹಿನ್ನಡೆಯಲ್ಲಿದ್ದ ಜೋಡಿಯು, ಮತ್ತೆ ಮುನ್ನುಗ್ಗಲು ವಿಫಲವಾಯ್ತು. ಡೆನ್ಮಾರ್ಕ್ ಜೋಡಿಯು ಸತತ ಆರು ಪಾಯಿಂಟ್‌ಗಳನ್ನು ಗೆದ್ದು ಮೊದಲ ಗೇಮ್ ಅನ್ನು ಸುಲಭವಾಗಿ ವಶಪಡಿಸಿಕೊಂಡಿತು.

ಆ ಬಳಿಕ ಎರಡನೇ ಸೆಟ್‌ನಲ್ಲಿ ಭಾರತದ ಜೋಡಿಯು ವೇಗವನ್ನು ಹೆಚ್ಚಿಸಿಕೊಂಡಿತು. ಮೊದಲ ವಿರಾಮದ ವೇಳೆಗೆ 11-4ರ ಮುನ್ನಡೆಯೊಂದಿಗೆ ಸಾಗಿದರು. ಮತ್ತೆ 10 ಅಂಕಗಳನ್ನು ಸಂಪಾದಿಸಿ ಸೆಟ್‌ ವಶಪಡಿಸಿಕೊಂಡರು. ಮೂರನೇ ಗೇಮ್ ಸಮಬಲದಲ್ಲಿ ಪ್ರಾರಂಭವಾಯಿತು. ಆದರೆ ಭಾರತೀಯರು ನೆಟ್‌ನಲ್ಲಿ ಅದ್ಭುತವಾಗಿ ಆಡಿದರು. ಮೊದಲು 11-7ರಿಂದ ಮುನ್ನಡೆ ಪಡೆದರು. ನಂತರ ಪಂದ್ಯದ ಅಂತ್ಯದವರೆಗೆ ಏಳು ಅಂಕಗಳ ಅಂತರ ಕಾಯ್ದುಕೊಂಡು ಅಗ್ರ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರು.

ಇದನ್ನೂ ಓದಿ...

Back to top button
>