ಕ್ರಿಕೆಟ್ಕ್ರೀಡೆ

ಔಟ್‌ ಎಂಬ ನಿರ್ಧಾರ ಬಂದ ಬೆನ್ನಲ್ಲೇ ಶಫಾಲಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರೆ

Shafali steps towards the pavilion after the decision of out

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು, ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ (WPL) ಗೆದ್ದ ಹೆಗ್ಗಳಿಕೆಗೆ ಪಾತ್ರವಾಯಿತು. ಪಂದ್ಯಾವಳಿಯುದ್ದಕ್ಕೂ ಪ್ರಾಬಲ್ಯ ಸಾಧಿಸಿದ ತಂಡವು, ಫೈನಲ್‌ನಲ್ಲೂ ಅದೇ ರೀತಿಯ ಪ್ರದರ್ಶನ ನೀಡಿತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಳು ವಿಕೆಟ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.

ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್, ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದರು. ಪಂದ್ಯಾವಳಿಯಲ್ಲಿ ಏಕೈಕ ಹ್ಯಾಟ್ರಿಕ್ ಸಾಧಿಸಿದ ಮುಂಬೈನ ಇಸ್ಸಿ ವಾಂಗ್, ತಂಡದ ಪರ ಬೌಲಿಂಗ್‌ ದಾಳಿಯನ್ನು ಮುನ್ನಡೆಸಿದರು. ನಿರ್ಣಾಯಕ ಪಂದ್ಯದಲ್ಲೂ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಅಲ್ಲದೆ ವೆಸ್ಟ್ ಇಂಡೀಸ್ ಆಲ್ ರೌಂಡರ್ ಹೇಯ್ಲಿ ಮ್ಯಾಥ್ಯೂಸ್ ಅವರಿಂದ ಉತ್ತಮ ಬೆಂಬಲ ಪಡೆದರು. ಅಂತಿಮವಾಗಿ ಡೆಲ್ಲಿಯನ್ನು ಮುಂಬೈ 20 ಓವರ್‌ಗಳಲ್ಲಿ 131/9ಗೆ ನಿರ್ಬಂಧಿಸಿತು.

ಇದಕ್ಕೆ ಉತ್ತರವಾಗಿ ಮುಂಬೈ 132 ರನ್ ಗಳ ಗುರಿಯನ್ನು ಇನ್ನೂ ಮೂರು ಎಸೆತಗಳು ಉಳಿದಿರುವಂತೆಯೇ ಪೂರ್ಣಗೊಳಿಸಿತು. ನಟಾಲಿ ಸಿವರ್-ಬ್ರಂಟ್ 55 ಎಸೆತಗಳಲ್ಲಿ ಅಜೇಯ 60 ರನ್ ಗಳಿಸಿದರು. ಅಲ್ಲದೆ ಮೂರನೇ ವಿಕೆಟ್‌ಗೆ ನಾಯಕಿ ಹರ್ಮನ್‌ಪ್ರೀತ್ ಅವರೊಂದಿಗೆ 72 ರನ್‌ಗಳ ಮಹತ್ವದ ಜೊತೆಯಾಟ ನೀಡಿದರು. ಅಂತಿಮವಾಗಿ ತಂಡವು ಏಳು ವಿಕೆಟ್‌ಗಳ ಅಂತರದಿಂದ ಜಯಗಳಿಸಿತು.

ಈ ಫಲಿತಾಂಶವು ಅನೇಕ ಮುಂಬೈ ಬೆಂಬಲಿಗರ ಸಂಭ್ರಮವನ್ನು ಇಮ್ಮಡಿಗೊಳಿಸಿತು. ಆದರೆ, ಪಂದ್ಯದಲ್ಲಿನ ವಿವಾದಾತ್ಮಕ ನಿರ್ಧಾರದಿಂದ ಡೆಲ್ಲಿ ಅಭಿಮಾನಿಗಳು ಕೋಪಗೊಂಡರು. ಅದುವೇ, ಡೆಲ್ಲಿಯ ಸ್ಫೋಟಕ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರ ಔಟ್‌ ಘೋಷಣೆ.

ಇಂಗ್ಲೆಂಡ್ ವೇಗಿ ವಾಂಗ್‌ ಎಸೆತಕ್ಕೆ ಆಕ್ರಮಣಕಾರಿ ಹೊಡೆತಕ್ಕೆ ಶಫಾಲಿ ಮುಂದಾದರು. ಮೊದಲ 4 ಎಸೆತಗಳಲ್ಲಿ 11 ರನ್ ಗಳಿಸಿದರು. ಮುಂದಿನ ಫುಲ್‌ ಟಾಸ್‌ ಎಸೆತವನ್ನು ಕೂಡಾ ಅದೇ ರೀತಿ ಬೌಂಡರಿಗಟ್ಟುವ ಪ್ರಯತ್ನ ಮಾಡಿದರು. ಆದರೆ, ಅಮೆಲಿಯಾ ಕೆರ್ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಅದನ್ನು ಕ್ಯಾಚ್ ಹಿಡಿದರು. ಅಂಫೈಯರ್‌ ಕೂಡಾ ಅದನ್ನು ಔಟ್‌ ಎಂದು ಘೋಷಿಸಿದರು. ಈ ವೇಳೆ ಎಸೆತವು ನೋಬಾಲ್‌ ಹೌದೋ ಅಲ್ವೋ ಎಂಬುದನ್ನು ಥರ್ಡ್‌ ಅಂಪೈಯರ್‌ ಮೂಲಕ ಪರಿಶೀಲಿಸಲಾಯ್ತು.

ಈ ನಿರ್ಧಾರದಿಂದ ಶಫಾಲಿ ಮತ್ತು ನಾಯಕಿ ಲ್ಯಾನಿಂಗ್ ಇಬ್ಬರೂ ಅಸಮಾಧಾನಗೊಂಡರು. ಔಟ್‌ ಎಂಬ ನಿರ್ಧಾರ ಬಂದ ಬೆನ್ನಲ್ಲೇ ಶಫಾಲಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರೆ, ನಾಯಕಿ ಲ್ಯಾನಿಂಗ್ ಅಂಪೈರ್‌ ಜೊತೆಗೆ ಅಸಮಾಧಾನದಿಂದ ಮಾಡುತ್ತಿರುವುದು ಕಂಡುಬಂದಿತು.

ಅಂಪೈಯರ್‌ ತೀರ್ಮಾನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಟ್ವಿಟರ್‌ ಮೂಲಕ ಪ್ರತಿಕ್ರಿಯಿಸಿದೆ. ಅದು “ನೋ ಬಾಲ್ ಅಥವಾ ಸರಿಯಾದ ಎಸೆತವೇ?” ಎಂದು ಕೇಳಿದೆ.

ಅಭಿಮಾನಿಗಳು ಕೂಡ ಇದೇ ರೀತಿಯ ಪ್ರತಿಕ್ರಿಯೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹೊರಹಾಕಿದ್ದಾರೆ. ಡೆಲ್ಲಿ ತಂಡಕ್ಕೆ ಅನ್ಯಾಯವಾಗಿದೆ ಎಂದು ಹಲವರು ಆರೋಪಿಸಿದ್ದಾರೆ.‌ ಇದು ಔಟ್‌ ಅಲ್ಲದೆ ಹೋಗಿದ್ದರೆ, ಪಂದ್ಯದ ಗತಿಯೇ ಬದಲಾಗುತ್ತಿತ್ತು ಎಂಬ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ...

Back to top button
>