16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಅದ್ಧೂರಿಯಾಗಿ ಪ್ರಾರಂಭಗೊಂಡಿದೆ. ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಾಗುತ್ತಿದೆ. ಬ್ಯಾಟ್ - ಬಾಲ್ ನಡುವೆ ಯುದ್ಧ ಜೋರಾಗಿದೆ. ಆಟಗಾರರ ನಡುವೆಯೂ ಜಿದ್ದಾಜಿದ್ದಿನ ಕಾಳಗ ಏರ್ಪಟ್ಟಿದೆ. ಫ್ಯಾನ್ಸ್ ನಡುವೆಯೂ ವಾರ್ ನಡೀತಿದೆ. ಈ ಕ್ರೇಜ್ನಿಂದಲೇ ಕಳೆದ ಆವೃತ್ತಿಗಿಂತಲೂ ಈ ಬಾರಿಯೇ ಅತಿ ಹೆಚ್ಚು TRP ದಾಖಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ (Chennai Super Kings vs Gujarat Titans) ನಡುವಿನ ಮೊದಲ ಪಂದ್ಯವನ್ನು ವೀಕ್ಷಿಸಿದ್ದು ಬರೋಬ್ಬರಿ 20 ಕೋಟಿ ಜನರು. ಇದು ನೆರೆಯ ರಾಷ್ಟ್ರ ಪಾಕಿಸ್ತಾನದ ಜನಸಂಖ್ಯೆಗೆ ಸಮ ಎಂದರೆ ನೀವು ನಂಬಲೇಬೇಕು. ಸ್ಟಾರ್ಸ್ಪೋರ್ಟ್ ನೆಟ್‌ವರ್ಕ್‌ನಲ್ಲೂ ಮುಗಿಬಿದ್ದು ಐಪಿಎಲ್ ಪಂದ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಮೊಬೈಲ್ ಆ್ಯಪ್, ಸ್ಮಾರ್ಟ್ ಫೋನ್ಗಳಲ್ಲೂ ಹೆಚ್ಚಿನ ಮಂದಿ ನೋಡುವ ಮೂಲಕ ಆನಂದಿಸುತ್ತಿದ್ದಾರೆ.
ಹಿಂದಿನ ಸೀಸನ್‌ಗೆ ಹೋಲಿಸಿದರೆ, TRP ರೇಟಿಂಗ್ ಅದ್ಭುತವಾಗಿ ಬಂದಿದೆ. ಪಂದ್ಯಗಳು ಹೆಚ್ಚಾದಂತೆ IPL ಕುತೂಹಲವೂ ಡಬಲ್ ಆಗುತ್ತಿದೆ. ಇದರಿಂದ ವೀಕ್ಷಕರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಆದರೆ, ಅಸಾಧಾರಣವಾಗಿ ಕೆಲವು ಅಭಿಮಾನಿಗಳು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಪಂದ್ಯಗಳನ್ನು ನೋಡದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೆರೈಟಿ ಕ್ಯಾಂಪೇನ್ ನಡೆಯುತ್ತಿದೆ. ಹೀಗೆ ಅಭಿಯಾನ ಮಾಡುತ್ತಿರುವುದು ಬೇರೆ ಯಾರೂ ಅಲ್ಲ, ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್.
ಅದಕ್ಕೆ ಕಾರಣ MS ಧೋನಿ (MS Dhoni) ದಾಖಲೆಯನ್ನು ವಿರಾಟ್ ಕೊಹ್ಲಿ (Virat Khli) ಮುರಿಯಲಿದ್ದಾರೆ ಎಂಬ ಆತಂಕಕ್ಕೆ ಸಿಲುಕಿರುವುದು. ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ MS ಧೋನಿ ಆಡಿದ್ದು ಮೂರೇ ಎಸೆತ. 2 ಭರ್ಜರಿ ಸಿಕ್ಸರ್ ಸಿಡಿಸಿ ಇಡೀ ಕ್ರಿಕೆಟ್ ಲೋಕವನ್ನೇ ತಲ್ಲಣಗೊಳಿಸಿದ್ದರು. ಅವರು ಬ್ಯಾಟಿಂಗ್ ನಡೆಸುತ್ತಿದ್ದಾಗ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ 1.7 ಮಿಲಿಯನ್ ನೈಜ ವೀಕ್ಷಣೆ ಪಡೆದಿತ್ತು. ಇದೊಂದು ಹೊಸ ದಾಖಲೆಯಾಗಿ ಉಳಿದುಕೊಂಡಿದೆ.
ಇನ್ನು ಉದ್ಘಾಟನಾ ಪಂದ್ಯದಲ್ಲಿ ಧೋನಿ ಕ್ರೀಸ್ ಬಂದಾಗಲೂ ಸಹ ವೀಕ್ಷಕರ ಸಂಖ್ಯೆ ಡಬಲ್ ಆಗಿತ್ತು. ಅಂತಿಮ ಓವರ್ನಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದಾಗ, 1.6 ಮಿಲಿಯನ್ ಪ್ರೇಕ್ಷಕರು ಜಿಯೋ ಸಿನಿಮಾ ಆ್ಯಪ್ ಮೂಲಕ ಧೋನಿ ಬ್ಯಾಟಿಂಗ್ ವೈಭವವನ್ನು ಕಣ್ತುಂಬಿಕೊಂಡಿದ್ದರು. ಹಾಗೆಯೇ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗಲೂ 1.6 ಮಿಲಿಯನ್ ವೀಕ್ಷಣೆ ದಾಖಲಾಗಿತ್ತು. ಹಾಗಾಗಿ ಸಿಎಸ್ಕೆ ಫ್ಯಾನ್ಸ್ ಧೋನಿ ದಾಖಲೆಯನ್ನು ಮುರಿಯದಂತೆ ನೋಡಿಕೊಳ್ಳಲು ಹೀಗೆ ಅಭಿಯಾನ ಆರಂಭಿಸಿದ್ದಾರೆ.
ಕೊಹ್ಲಿ ಫ್ಯಾನ್ಸ್ಗೆ ಧೋನಿ ಫ್ಯಾನ್ಸ್ ಗೇಲಿ
ಅಭಿಯಾನದ ನಡುವೆ ಫ್ಯಾನ್ಸ್ ವಾರ್ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿ-ಧೋನಿ ಫ್ಯಾನ್ಸ್ ಮಧ್ಯೆ ಪರಸ್ಪರ ಕಚ್ಛಾಟ ನಡೆಯುತ್ತಿದೆ. ಧೋನಿ ಎದುರಿಸಿದ 3 ಎಸೆತಗಳಲ್ಲಿ 1.7 ಮಿಲಿಯನ್ ವೀಕ್ಷಣೆ ಪಡೆದಿದ್ದರೆ, ಕೊಹ್ಲಿ 1.6 ಮಿಲಿಯನ್ ಪಡೆಯಲು 16 ಓವರ್ ಆಡಬೇಕಾಯಿತು ಎಂದು ಕಿಚಾಯಿಸುತ್ತಿದ್ದಾರೆ. ಧೋನಿಯೇ ಗ್ರೇಟ್, ವಯಸ್ಸು 41 ಆದರೂ, ಅವರ ಕ್ರೇಜ್ ಕಿಂಚಿತ್ತೂ ಕಡಿಮೆಯಾಗಿಲ್ಲ ಅನ್ನೋದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾ? ಎಂದು ಕೊಹ್ಲಿ ಅಭಿಮಾನಿಗಳನ್ನು ಗೇಲಿ ಮಾಡುತ್ತಿದ್ದಾರೆ. ಇದರ ನಡುವೆಯೂ ಮಾಹಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ RCB ಪಂದ್ಯಗಳನ್ನು ಬಹಿಷ್ಕರಿಸಿ ಎಂದು ಪ್ರಚಾರ ಮಾಡುತ್ತಿದ್ದಾರೆ.
ಮಾಹಿ ಅಭಿಮಾನಿಗಳು ಆರ್‌ಸಿಬಿ ಪಂದ್ಯಗಳನ್ನು ನೋಡದಿದ್ದರೆ ಧೋನಿ ದಾಖಲೆ ಹಾಗೆಯೇ ಉಳಿಯುತ್ತದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ವೇಳೆ ಪೋಸ್ಟ್ ಹಾಕಿರುವುದು ವಿಶೇಷ. ಕೊಹ್ಲಿ ಹಾಗೂ ಧೋನಿ ನಡುವಿನ ವೀಕ್ಷಕರ ಕಾಳಗ, ಕುತೂಹಲ ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಈ ರೀತಿಯ ಕಾಳಗ ಸಿನಿಮಾ ತಾರೆಗಳ ಅಭಿಮಾನಿಗಳ ನಡುವೆ ನಡೆಯುತ್ತಿತ್ತು. ಇದೀಗ ಈ ಹುಚ್ಚು ಕ್ರಿಕೆಟ್‌ಗೂ ಹಬ್ಬಿದೆ.