ಬೃಹತ್ ಬೆಂಗಳೂರಿನ ಹೋಟೆಲ್‌ಗಳಲ್ಲಿ ರಾಜ್ಯದ ನಂದಿನಿ ಹಾಲನ್ನು ಬಳಸಲು ನಿರ್ಧರಿಸಿದೆ.
Big Bangalore hotels have decided to use Nandini milk from the state.
ಬೆಂಗಳೂರು: ರಾಜ್ಯದ ಹೈನುಗಾರರಿಗೆ ಬೆಂಬಲ ನೀಡುವಂತಹ ಮಹತ್ತರ ಯೋಜನೆಯೊಂದನ್ನು ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ತೆಗೆದುಕೊಂಡಿದೆ. ಬೆಂಗಳೂರಿನ ಹೋಟೆಲ್‌ಗಳಲ್ಲಿ ರಾಜ್ಯದ ನಂದಿನಿ ಹಾಲನ್ನು ಬಳಸಲು ನಿರ್ಧರಿಸಿದೆ. ಇದು ಗುಜರಾತ್ ಮೂಲದ ಅಮುಲ್‌ಗೆ ಹಿನ್ನಡೆ ಎಂದು ಹೇಳಲಾಗಿದೆ.
ಬೆಂಗಳೂರು ಡೈರಿ ಮಾರುಕಟ್ಟೆಗೆ ಅಮುಲ್ ಪ್ರವೇಶಿಸುವ ಘೋಷಣೆಯ ನಿರ್ಧಾರಕ್ಕೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ವಾಗ್ಯುದ್ಧದಲ್ಲಿ ತೊಡಗಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್ ಹೇಳಿಕೆಯಲ್ಲಿ, ಅಮುಲ್ ಹೆಸರನ್ನು ಹೆಸರಿಸದೆ, ಕನ್ನಡಿಗರು ನಂದಿನಿ ಹಾಲಿನ ಉತ್ಪನ್ನಗಳನ್ನು ಮಾತ್ರ ಪ್ರಚಾರ ಮಾಡಬೇಕು ಎಂದು ತಿಳಿಸಿದೆ.
ನಮ್ಮ ರೈತರು ಉತ್ಪಾದಿಸುವಂತಹ ಕರ್ನಾಟಕದ ನಂದಿನಿ ಹಾಲಿನ ಕುರಿತು ನಮಗೆಲ್ಲರಿಗೂ ಹೆಮ್ಮೆಯಿದೆ. ಇದಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು. ನಮ್ಮ ನಗರದಲ್ಲಿ ಶುಚಿ ಮತ್ತು ರುಚಿಯಾದ ಕಾಫಿ ಸ್ಟಾಂಡ್‌ಗಳು ಹೋಟೆಲ್ ತಿಂಡಿತಿನಿಸುಗಳಿಗೆ ಬೆನ್ನೆಲುಬಾಗಿವೆ. ಅದನ್ನು ಹೆಮ್ಮೆಯಿಂದ ಪ್ರೋತ್ಸಾಹಿಸುತ್ತೇವೆ. ಅನ್ಯ ರಾಜ್ಯಗಳ ಹಾಲು ಕರ್ನಾಟಕಕ್ಕೆ ಲಗ್ಗೆ ಇಡುತ್ತಿವೆ. ಶುಚಿ ಮತ್ತು ರುಚಿಯಾದ ಕಾಫಿ, ತಿಂಡಿಗಳು ಸಿಗಲು ಬಹುಕಾಲದಿಂದ ಜೊತೆಯಾಗಿರುವ ನಂದಿನಿ ಹಾಲನ್ನೇ ಪ್ರಮುಖವಾಗಿ ಬಳಸಲಾಗಿದೆ. ಇನ್ನು ಮುಂದೆಯೂ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸಲಾಗುವುದು” ಎಂದು ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.
ಗುಜರಾತ್‌ನ ಅಮುಲ್ ರಾಜ್ಯದ ಹಾಲು ಉತ್ಪಾದಕರ ಅನ್ನ ಕಸಿದುಕೊಳ್ಳುತಿದೆ. ನಂದಿನಿ ಬ್ರ್ಯಾಂಡ್ ಹಾಳುಗೆಡವಲು ವ್ಯವಸ್ಥಿತ ಸಂಚು ನಡೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕರ್ನಾಟಕಕ್ಕೆ ಋಣಿಯಾಗಿರಬೇಕಾದ ಅಮುಲ್, ಕೆಎಂಎಫ್‌ಗೆ ಅನಾರೋಗ್ಯಕರ ಪೈಪೋಟಿ ಒಡ್ಡುವ ಮೂಲಕ ಸಹಕಾರ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ನಂದಿನಿ ಉತ್ಪನ್ನಗಳು ಬೇರೆ ರಾಜ್ಯ ಹಾಗೂ ದೇಶಗಳಲ್ಲೂ ಮಾರಾಟವಾಗುತ್ತಿದ್ದು, ಯಾವುದೇ ಸ್ಪರ್ಧೆ ಎದುರಿಸಲು ಸಿದ್ಧವಾಗಿವೆ. ಅಮುಲ್ ಉತ್ಪನ್ನಗಳ ಮಾರಾಟದ ವಿಚಾರವನ್ನ ಕಾಂಗ್ರೆಸ್‌ನವರು ರಾಜಕೀಯಗೊಳಿಸಿದ್ದಾರೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.
ಯಾವುದೇ ಉತ್ಪನ್ನ ಯಾವುದೇ ಭಾಗಗಳಲ್ಲಿ ಮಾರಾಟವಾಗಬಹುದು. ಆದರೆ ಕಾಂಗ್ರೆಸ್‌ನವರು ಇದನ್ನು ರಾಜಕೀಯವಾಗಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ 16 ರಿಂದ 18 ಕಂಪನಿಗಳು ತಮ್ಮ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಆಗ ಇವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಅಮುಲ್ ಕಂಪನಿ ತನ್ನ ಉತ್ಪನ್ನ ಮಾರಾಟ ಮಾಡಲು ಮುಂದಾದಾಗ ಮಾತ್ರ ಸಮಸ್ಯೆ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ.
”ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕುಗಳನ್ನು ತಿಂದು ಮುಕ್ಕಿದ್ದಾಯಿತು. ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಚು ಹೂಡಿದ್ದಾರೆ. ಕನ್ನಡಿಗರೇ ಎಚ್ಚರ…!!” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
‘ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳ ವಿಲೀನದ ಬಗ್ಗೆ ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಪ್ರಸ್ತಾಪ ಮಾಡಿದ ದಿನದಿಂದ, ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಿದೆ. ವಿಲೀನದ ಪ್ರಸ್ತಾವಕ್ಕೆ ಕನ್ನಡಿಗರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹಿಂಬಾಗಿಲಿನಿಂದ ಅಮುಲ್ ಪ್ರವೇಶಿಸುತ್ತಿದೆ..” ಎಂದು ಸಿದ್ದರಾಮಯ್ಯ ಕಿಡಿಕಾರಿದ್ದರು.