ವಿಶ್ವ ಕ್ರಿಕೆಟ್‌ನ ಚಾಣಾಕ್ಷ ನಾಯಕ ಎಂ ಎಸ್ ಧೋನಿ. ವಿಕೆಟ್ ಹಿಂದೆ ನಿಂತು ಇವರು ಮಾಡೋ ಮ್ಯಾಜಿಕ್, ಜಾದೂಗಾರರಿಗಿಂತ ಕಮ್ಮಿಯೇನಿಲ್ಲ. ವಯಸ್ಸು ನಲ್ವತ್ತು ದಾಟಿದ್ರೂ, ದೇಹವನ್ನು ಫಿಟ್ ಇರಿಸಿಕೊಂಡಿರುವ ಮಾಹಿ ಆಟವನ್ನು ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಸ್ಟಂಪ್ಸ್ ಹಿಂದೆ ನಿಂತು ವಿಕೆಟ್ ಕೀಪಿಂಗ್ ಮಾಡುವ ಧೋನಿ, ಸಂಪೂರ್ಣ ಪಂದ್ಯ ಹೇಗೆ ಸಾಗುತ್ತಿದೆ ಎಂದು ಎಲ್ಲರಿಗಿಂತ ಮುಂಚೆ ಲೆಕ್ಕ ಹಾಕಿರುತ್ತಾರೆ.
ಕೆಲವೊಮ್ಮೆ, ಪಂದ್ಯ ನಡೆಯುತ್ತಿರುವಾಗ ಯಾರಿಗೂ ತಿಳಿಯದ ಮತ್ತು ಅರ್ಥವಾಗದ ಸೂಕ್ಷ್ಮಗಳು ಮಾಹಿಗೆ ತಕ್ಷಣ ಗೊತ್ತಾಗಿಬಿಡುತ್ತದೆ. ಸ್ಟಂಪ್ಸ್ ಹಿಂದೆ ನಿಂತಿರುವ ಅವರ ಕಣ್ಣು ಬೆಕ್ಕಿನ ಕಣ್ಣಿನಂತೆ ಸೂಕ್ಷ್ಮ. ಕಿವಿ ಕೂಡಾ ಅಷ್ಟೇ. ಸಾಸಿವೆ ಬಿದ್ದ ಸದ್ದು ಕೂಡಾ ಕೇಳಿಸುವಂತೆ, ಬ್ಯಾಟರ್ ಹಿಡಿದ ಬ್ಯಾಟ್‌ಗೆ ಚೆಂಡು ಬಡಿದರೆ ಧೋನಿ ಕರ್ಣಪಟಲಕ್ಕೆ ಆ ಸದ್ದು ಕೇಳಿಸಿಬಿಡುತ್ತದೆ. ಇದೇ ಕಾರಣಕ್ಕೆ ಧೋನಿ ನಿರ್ಧಾರಗಳು, ಡಿಆರ್‌ಎಸ್ ಮನವಿ ಪ್ರತಿಬಾರಿಯೂ ನೂರಕ್ಕೆ ನೂರರಷ್ಟು ಸರಿಯಾಗಿರುತ್ತದೆ.
ಶನಿವಾರ ನಡೆದ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಜಯ ಸಾಧಿಸಿತು. ಪಂದ್ಯ ಮುಗಿದ ಬೆನ್ನಲ್ಲೇ ಟ್ವಿಟರ್‌ನಲ್ಲಿ ‘ಧೋನಿ ರಿವ್ಯೂ ಸಿಸ್ಟಮ್'(Dhoni Review System) ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗಿಬಿಟ್ಟಿದೆ. ಅಭಿಮಾನಿಗಳು ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಚಾಣಾಕ್ಷತನಕ್ಕೆ ಸಲಾಮ್ ಹೊಡೆದಿದ್ದಾರೆ.
ಸಿಎಸ್‌ಕೆ ಮತ್ತು ಎಂಐ ನಡುವಿನ ಪಂದ್ಯದ ನಂತರ ‘ಧೋನಿ ರಿವ್ಯೂ ಸಿಸ್ಟಮ್’ ಎಂಬ ಪದವು ಟ್ವಿಟರ್‌ನಲ್ಲಿ ಹೆಚ್ಚು ಟ್ರೆಂಡ್ ಆಗಿದೆ. ಕ್ರಿಕೆಟ್‌ನಲ್ಲಿ ರಿವ್ಯೂ ಕೇಳುವ ಕ್ರಮವನ್ನು ಡಿಆರ್‌ಎಸ್ ಎಂದು ಹೇಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅದರ ಅರ್ಥ ಡಿಸಿಷನ್ ರಿವ್ಯೂ ಸಿಸ್ಟಮ್ (DRS). ಅಂದರೆ, ಆನ್‌ಫೀಲ್ಡ್‌ನಲ್ಲಿರುವ ಅಂಪೈಯರ್ ಕೊಟ್ಟ ತೀರ್ಮಾನವನ್ನು ಮರುಪರಿಶೀಲನೆಗಾಗಿ ಮೇಲ್ಮನವಿ ಮಾಡುವ ಅವಕಾಶ. ಆದರೆ ಈ ಡಿಆರ್‌ಎಸ್‌ಗೆ ನೆಟ್ಟಿಗರು ಟ್ವಿಸ್ಟ್ ಕೊಟ್ಟಿದ್ದಾರೆ. ಧೋನಿ ಅವರ ನಿಖರ ಮೇಲ್ಮನವಿ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಭಿಮಾನಿಗಳು ಡಿಸಿಷನ್ ರಿವ್ಯೂ ಸಿಸ್ಟಮ್ ಅನ್ನು ಧೋನಿ ರಿವ್ಯೂ ಸಿಸ್ಟಮ್ ಎಂದು ಕರೆದಿದ್ದಾರೆ.