ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ (Sawai Mansingh Stadium, Jaipur) ನಡೆಯುತ್ತಿರುವ ಐಪಿಎಲ್ನ 26ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲು ಬ್ಯಾಟಿಂಗ್ ನಡೆಸಲಿರುವ ಲಕ್ನೋ ಸೂಪರ್ ಜೈಂಟ್ಸ್ ಬೃಹತ್ ಮೊತ್ತ ಕಲೆ ಹಾಕುವ ನಿರೀಕ್ಷೆಯಲ್ಲಿದೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ (Indian Premier League 2023) 26ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ (Rajasthan Royals Captain Sanju Samson) ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ (Sawai Mansingh Stadium, Jaipur) ನಡೆಯುವ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು, ಬೃಹತ್ ಮೊತ್ತದ ನಿರೀಕ್ಷೆಯಲ್ಲಿದೆ.
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ಸ್ಪಿನ್ನರ್ ಆ್ಯಡಂ ಝಂಪಾ ಬದಲಿಗೆ ಆಲ್ರೌಂಡರ್ ಜೇಸನ್ ಹೋಲ್ಡರ್ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕ್ವಿಂಟನ್ ಡಿ ಕಾಕ್ ಅವರನ್ನು ಮತ್ತೆ ಬೆಂಚ್ಗೆ ಸೀಮಿತ ಮಾಡಲಾಗಿದೆ. ಕೈಲ್ ಮೇಯರ್ಸ್ಗೆ ಮತ್ತೊಂದು ಅವಕಾಶ ನೀಡಲಾಗಿದ್ದು, ಟೀಮ್ ಮ್ಯಾನೇಜ್ಮೆಂಟ್ ನಂಬಿಕೆ ಉಳಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ರಾಜಸ್ಥಾನ್ ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಗೆಲುವು, 1ರಲ್ಲಿ ಸೋಲು ಕಂಡು 8 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಇತ್ತ ರಾಹುಲ್ ತಂಡವು 6 ಅಂಕ ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆಡಿದ ಐದು ಪಂದ್ಯಗಳಲ್ಲಿ 3ರಲ್ಲಿ ಜಯಿಸಿದ್ದು, 2ರಲ್ಲಿ ಪರಾಭವಗೊಂಡಿದೆ. ಉಭಯ ತಂಡಗಳಿಂದಲೂ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ಕಳೆದ ಪಂದ್ಯಗಳಲ್ಲಿ ಸಾಧನೆ
ರಾಜಸ್ಥಾನ್ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡವನ್ನು 3 ವಿಕೆಟ್ಗಳಿಂದ ಮಣಿಸಿತ್ತು. ಕಳೆದ 3 ಪಂದ್ಯಗಳಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಸತತ 4ನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಇನ್ನು ಲಕ್ನೋ ತನ್ನ ಕೊನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ಎದುರು ಸೋಲು ಕಂಡಿದ್ದು, ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ.
ಪಿಚ್ ರಿಪೋರ್ಟ್
ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ 16ನೇ ಆವೃತ್ತಿಯ ಮೊದಲ ಪಂದ್ಯವಾಗಿದೆ. ಈ ಪಿಚ್ ಬೌಲರ್ ಸ್ನೇಹಿಯಾಗಿದ್ದು, ಇಲ್ಲಿ ನಡೆದ ಕಳೆದ ಐದು T20 ಪಂದ್ಯಗಳಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 127 ರನ್ ಆಗಿದೆ. ಟಾಸ್ ಗೆದ್ದ ತಂಡವು ಚೇಸಿಂಗ್ ಆಯ್ಕೆ ಮಾಡಿಕೊಳ್ಳುತ್ತದೆ. ಆಟ ಮುಂದುವರೆದಂತೆ ಬ್ಯಾಟಿಂಗ್ ಮೇಲ್ಮೈ ಸುಧಾರಿಸುತ್ತದೆ.
ಉಭಯ ತಂಡಗಳ ಮುಖಾಮುಖಿ ದಾಖಲೆ
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 2 ಬಾರಿ ಮಾತ್ರ ಮುಖಾಮುಖಿಯಾಗಿದ್ದು, ರಾಜಸ್ಥಾನ ತಂಡ ಎರಡಲ್ಲೂ ಗೆದ್ದು ಮೇಲುಗೈ ಸಾಧಿಸಿದೆ. ಈ ಎರಡು ಪಂದ್ಯಗಳು ನಡೆದದ್ದು ಕೂಡ 15ನೇ ಆವೃತ್ತಿಯ ಐಪಿಎಲ್ನಲ್ಲಿ ಎಂಬುದು ವಿಶೇಷ. ಈ ಬಾರಿ ಮೊದಲ ಬಾರಿಗೆ ಪರಸ್ಫರ ಎದುರಾಗುತ್ತಿವೆ.
ಲೈವ್ ಸ್ಟ್ರೀಮ್ ಮತ್ತು ಟೆಲಿಕಾಸ್ಟ್
ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಅಲ್ಲದೆ JioCinema ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದು.
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI)
ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯಜುವೇಂದ್ರ ಚಹಲ್
ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI)
ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬದೋನಿ, ನವೀನ್-ಉಲ್-ಹಕ್, ಅವೇಶ್ ಖಾನ್, ಯುದ್ವೀರ್ ಸಿಂಗ್ ಚರಕ್, ರವಿ ಬಿಷ್ಣೋಯ್