ವರದಿ: ಪ್ರಿಯಲಚ್ಛಿ
ಮುಂಬರುವ ಜೂನ್ 7ರಂದು ಇಂಗ್ಲೆಂಡ್‌ನ ದಿ ಓವಲ್‌ನಲ್ಲಿ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಿಂದ ಕನ್ನಡಿಗ ಕೆಎಲ್ ರಾಹುಲ್ ಹೊರಗುಳಿದಿದ್ದಾರೆ. ಅವರು ತಮ್ಮ ಬಲ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ಘೋಷಿಸಿದ್ದು, ಹೀಗಾಗಿ ಮುಂದಿನ ಕೆಲ ವಾರಗಳ ಕಾಲ ಮೈದಾನಕ್ಕಿಳಿಯುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಸೋಮವಾರ ನಡೆದ ಲಖನೌ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ರಾಹುಲ್ ಗಾಯಗೊಂಡಿದ್ದರು. ಹೀಗಾಗಿ ಆಗಲೇ ಮೈದಾನದಿಂದ ರಾಹುಲ್ ಹೊರನಡೆದಿದ್ದರು. ಲಖನೌ ಇನ್ನಿಂಗ್ಸ್‌ನ ಕೊನೆಯ ಬ್ಯಾಟರ್ ಆಗಿ ಅವರು ಮೈದಾನ್ಕಕಿಳಿದರೂ, ಅವರಿಂದ ಬ್ಯಾಟ್ ಬೀಸಲು ಕಷ್ಟವಾಯ್ತು. ಅಂತಿಮವಾಗಿ ಆ ಪಂದ್ಯದಲ್ಲಿ ಲಖನೌ ಸೋಲೊಪ್ಪಿತು.
ಸದ್ಯ ಶಸ್ತ್ರಚಿಕಿತ್ಸೆಗೆ ಒಳಗಾಗುವ ಬಗ್ಗೆ ಕನ್ನಡಿಗ ಸುದೀರ್ಘ ಮತ್ತು ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಂ ಮೂಲಕ ಪೋಸ್ಟ್ ಮಾಡಿರುವ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಬಗ್ಗೆ ಬರೆದುಕೊಂಡಿದ್ದಾರೆ.
“ವೈದ್ಯಕೀಯ ತಂಡದೊಂದಿಗೆ ಸಮಾಲೋಚಿಸಿದ ನಂತರ, ಮುನ್ನೆಚ್ಚರಿಕಾ ಕ್ರಮವಾಗಿ ನಾನು ಶೀಘ್ರದಲ್ಲೇ ನನ್ನ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತೇನೆ ಎಂದು ತೀರ್ಮಾನಿಸಲಾಗಿದೆ. ಮುಂಬರುವ ವಾರಗಳಲ್ಲಿ ನನ್ನ ಪುನರ್ವಸತಿ ಮತ್ತು ಚೇತರಿಕೆಯ ಮೇಲೆ ನನ್ನ ಗಮನವಿರುತ್ತದೆ. ಈ ನಿರ್ಧಾರಕ್ಕೆ ಬರಲು ತುಂಬಾ ಕಷ್ಟವಾಗುತ್ತಿದೆ. ಆದರೆ ನಾನು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇದು ಸರಿಯಾದ ಮಾರ್ಗ ಎಂಬುದು ಸತ್ಯ ಎಂದು ರಾಹುಲ್ ತಮ್ಮ ಟಿಪ್ಪಣಿಯಲ್ಲಿ ಬರೆದುಕೊಂಡಿದ್ದಾರೆ.
“ತಂಡದ ನಾಯಕನಾಗಿ, ಈ ನಿರ್ಣಾಯಕ ಸಮಯದಲ್ಲಿ ತಂಡದೊಂದಿಗೆ ಇರಲು ಸಾಧ್ಯವಾಗದಿರುವುದು ನನಗೆ ತುಂಬಾ ನೋವನ್ನುಂಟುಮಾಡಿದೆ. ಆದರೆ, ತಂಡದ ಎಲ್ಲಾ ಆಟಗಾರರು ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ. ನಾನು ನಿಮ್ಮೊಂದಿಗಿದ್ದು ಹುರಿದುಂಬಿಸುತ್ತೇನೆ. ಪ್ರತಿ ಪಂದ್ಯವನ್ನು ಕೂಡಾ ನಾನು ವೀಕ್ಷಿಸುತ್ತೇನೆ” ಎಂದು ತಮ್ಮ ತಂಡ ಲಖನೌ ಸೂಪರ್ ಜೈಂಟ್ಸ್ ಬಗ್ಗೆ ರಾಹುಲ್ ಹೇಳಿದ್ದಾರೆ.
“ಮುಂದಿನ ತಿಂಗಳು ಓವಲ್‌ನಲ್ಲಿ ನಡೆಯುವ ಪಂದ್ಯಕ್ಕೂ ನಾನು ಟೀಮ್ ಇಂಡಿಯಾದೊಂದಿಗೆ ಇರುವುದಿಲ್ಲ. ನೀಲಿ ಬಣ್ಣ ಜೆರ್ಸಿ ತೊಡಲು ಮತ್ತು ನನ್ನ ದೇಶದ ಪರ ಆಡಲು ನನ್ನಿಂದ ಸಾಧ್ಯವಾಗುವ ಎಲ್ಲವನ್ನೂ ಮಾಡುತ್ತೇನೆ. ಭಾರತದ ಪರ ಆಡುವುದೇ ನನ್ನ ಪ್ರಧಾನ ಆದ್ಯತೆಯಾಗಿದೆ” ಎಂದು ರಾಹುಲ್ ತಿಳಿಸಿದ್ದಾರೆ.
ಈಗಾಗಲೇ ಭಾರತ ತಂಡದ ಪ್ರಮುಖ ಆಟಗಾರರಾದ ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಗಾಯದ ಕಾರಣದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಈ ನಡುವೆ ರಾಹುಲ್ ಗಾಯವು ಭಾರತ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಧ್ಯಮ ಕ್ರಮಾಂಕವನ್ನು ಗಟ್ಟಿಗೊಳಿಸಲು ಅನುಭವಸ್ಥ ಆಟಗಾರನನ್ನು ನೆಚ್ಚಿಕೊಂಡಿದ್ದ ಭಾರತಕ್ಕೆ, ರಾಹುಲ್ ಅನುಪಸ್ಥಿತಿಯು ದೊಡ್ಡ ಹೊಡೆತವಾಗಿದೆ.
ಮೇ 1ರಂದು ನಡೆದ ಆರ್ಸಿಬಿ ಎದುರಿನ ಪಂದ್ಯದ ವೇಳೆ ಕೆಎಲ್ ರಾಹುಲ್ ಗಂಭೀರ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಪರಿಣಾಮ ಸಂಪೂರ್ಣ ಐಪಿಎಲ್ ಆವೃತ್ತಿಯಿಂದ ಹೊರಬಿದ್ದರು.